ಬೆಂಗಳೂರು: ಸೊಳ್ಳೆ ಔಷಧಿ ಸಿಂಪಡಣೆ ಬಾಕಿ ಬಿಲ್ ನೀಡದೇ ದೌರ್ಜನ್ಯ: ಬಿಬಿಎಂಪಿ ವಿರುದ್ಧ ಸಿಬ್ಬಂದಿ ದೂರು ದಾಖಲು
ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ ಸೊಳ್ಳೆ ಔಷಧಿ ಸಿಂಪಡನೆ ವಿಚಾರದಲ್ಲಿ ಪಾಲಿಕೆ ಅಧಿಕಾರಿಗಳ ವಿರುದ್ಧ ದೌರ್ಜನ್ಯ ಆರೋಪ ಕೇಳಿ ಬಂದಿದೆ. ಅಲ್ಲದೇ ಪ್ರಕರಣ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಬೆಂಗಳೂರು, ಮಾರ್ಚ್ 07: ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ ಸೊಳ್ಳೆ ಔಷಧಿ ಸಿಂಪಡನೆ ವಿಚಾರದಲ್ಲಿ ಪಾಲಿಕೆ ಅಧಿಕಾರಿಗಳ ವಿರುದ್ಧ ದೌರ್ಜನ್ಯ ಆರೋಪ ಕೇಳಿ ಬಂದಿದೆ. ಅಲ್ಲದೇ ಪ್ರಕರಣ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಕಾಮಗಾರಿ, ಟೆಂಡರ್, ಗುತ್ತಿಗೆದಾರರಿಗೆ ನೀಡಬೇಕಾದ ಬಿಲ್ ಬಾಕಿ ಹೀಗೆ ಅನೇಕ ವಿಚಾರಗಳ ಸಂಬಂಧ ಬಿಬಿಎಂಪಿ ಆಗಾಗ ಸುದ್ದಿಯಲ್ಲಿರುತ್ತದೇ. ಈಗಲೂ ಅಂತದ್ದೇ ವಿಚಾರಕ್ಕೆ ಬಿಬಿಎಂಪಿ ವಿರುದ್ಧ ನಗರದ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ನಗರದಲ್ಲಿ ಸೊಳ್ಳೆ ಔಷಧಿ ಸಿಂಪಡಿಸಲಾಗಿದೆ. ಆದರೆ ಈ ಸಂಬಂಧ ನೀಡಬೇಕಾದ ಬಾಕಿ ಬಿಲ್ ಅನ್ನು ನೀಡಿಲ್ಲ. ಹೀಗಾಗಿ ಸಿಬ್ಬಂದಿ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ಆದರೆ ಅಧಿಕಾರಿಗಳು ಬಾಕಿ ಬಿಲ್ ನೀಡದೇ ದೌರ್ಜನ್ಯ ಎಸಗಿದ್ದಾರೆ ಎಂದು ಸಿಬ್ಬಂದಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಪಾಲಿಕೆ ಸಿಬ್ಬಂದಿ ನೀಡಿದ ದೂರಿನಲ್ಲಿ, ಟೆಂಡರ್ ಕರೆಯದೆ, ಬಾಕಿ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಬಿಬಿಎಂಪಿ ಸೊಳ್ಳೆ ಔಷಧಿ ಸಿಂಪಡಿಸಿದ ಬಿಲ್ ನೀಡುವಂತೆ ಆಗ್ರಹಿಸಲಾಗಿದೆ. ಆದರೆ ಹಣ ನೀಡದೇ ನಮ್ಮ ಮೇಲೆ ದೌರ್ಜನ್ಯ ಮಾಡಿದ್ದಾರೆ. ಕಳೆದ 2 ವರ್ಷಗಳಿಂದ ಬಿಬಿಎಂಪಿಯು ಒಟ್ಟು 5 ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದೆ. ಈ ಸಂಬಂಧ ಮನವಿ ಮಾಡಲು ವಿಶೇಷ ಆಯುಕ್ತ ಬಳಿ ತೆರಳಿದಾಗ ಅವರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಘಟನೆ ವಿವರ ಹೀಗಿದೆ
ಸೋಮವಾರ ಸೊಳ್ಳೆ ಔಷದಿ ಸಿಂಪಡಿಸಿದ ಸುಮಾರು 30ಕ್ಕೂ ಅಧಿಕ ಸಿಬ್ಬಂದಿ ವರ್ಷಗಳಿಂದ ಉಳಿದ ಬಾಕಿ ಬಿಲ್ ಕೇಳಲು ಮುಂದಾಗಿದ್ದಾರೆ. ಪಾಲಿಕೆ ಹಣಕಾಸು ವಿಭಾಗದ ವಿಶೇಷ ಆಯುಕ್ತರ ಕಚೇರಿಗೆ ಅವರು ತೆರಳಿದ್ದಾರೆ. ಈ ವೇಳೆ ಹಣವೂ ನೀಡಿಲ್ಲ ಬದಲಾಗಿ ಮಾರ್ಷಲ್‌ಗಳಿಂದ ವಿಶೇಷ ಆಯುಕ್ತರು ನಮ್ಮ ಮೇಲೆ ದೌರ್ಜನ್ಯ ಮಾಡಿಸಿ ಹೊರ ನೂಕಿದರು ಎಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯಪುರ ಅವರು ವಿರುದ್ಧ ಸಿಬ್ಬಂದಿ ಆಕ್ರೋಶ ಹೊರ ಹಾಕಿದ್ದಾರೆ. ಅಷ್ಟಲ್ಲದೇ ಪ್ರಸ್ತುತ ವರ್ಷ 243 ವಾರ್ಡ್‍ಗೆ ಸೊಳ್ಳೆ ಔಷಧಿ ಸಿಂಪಡಣೆ ಟೆಂಡರ್ ಕರೆಯಬೇಕಿತ್ತು. ಆದರೆ ಬಿಬಿಎಂಪಿ ಆಬಗ್ಗೆ ಯೋಚಿಸದೇ ಕೇವಲ 198 ವಾರ್ಡ್‍ಗಷ್ಟೇ ಟೆಂಡರ್ ಕರೆದು ಅಕ್ರಮಕ್ಕೆ ಮುಂದಾಗಿದೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.
ಆಯುಕ್ತರ ಸ್ಪಷ್ಟನೆ
ಘಟನೆ ಕುರಿತು ಪ್ರತಿಕ್ರಿಯಿಸಿದರುವ ವಿಶೇಷ ಆಯುಕ್ತ ಜಯರಾಮ್ ರಾಯಪುರ ಅವರು, 198 ವಾರ್ಡ್‌ಗಳಿಗೆ ಟೆಂಡರ್ ಕರೆದಿದ್ದೇವೆ. ಈಗ ಹೊಸ ಟೆಂಡರ್ 243 ವಾರ್ಡ್‌ಗಳಿಗೆ ಕರೆಯಲಾಗುವುದು. ಆದರೆ ಇವರು ಕೋರ್ಟಿನಲ್ಲಿ ಸ್ಟೇ ತಂದಿದ್ದಾರೆ. ಸ್ಟೇ ವೆಕೆಟ್ ಆಗಬೇಕು. ನಂತರವಷ್ಟೇ ಟೆಂಡರ್ ಕರೆಯಲು ಸಾಧ್ಯ ಎಂದ ಅವರು, ಯಾವ ಸಿಬ್ಬಂದಿಯನ್ನು ಕೆಟ್ಟದಾಗಿ ನಡೆಸಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದರು.












Click it and Unblock the Notifications