BBMP: ಗಣೇಶ ವಿಸರ್ಜನೆಗೆ ಸೂಕ್ತ ಸೌಲಭ್ಯ ಕಲ್ಪಿಸಿರುವ ಪಾಲಿಕೆ, ನಾಗರಿಕರು ಗಮನಿಸಿ
ಬೆಂಗಳೂರು, ಆಗಸ್ಟ್ 22: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗಾಗಿ ಅನುಮತಿ ಪಡೆಯಲು 75 ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಪಾಲಿಕೆಯು ಶುಕ್ರವಾರ ಅಪ್ಡೇಟ್ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ 41 ಕೆರೆ ಅಂಗಳದ ಶಾಶ್ವತ/ತಾತ್ಕಾಲಿಕ ಕಲ್ಯಾಣಿಗಳು, 489 ತಾತ್ಕಾಲಿಕ ಸಂಚಾರಿ ವಾಹನಗಳ ವ್ಯವಸ್ಥೆಯನ್ನು ಬಿಬಿಎಂಪಿ ಎಲ್ಲಾ ವಾರ್ಡ್ ಗಳಲ್ಲಿ ಮಾಡಲಾಗುತ್ತಿದೆ. ಗಣೇಶ ವಿಸರ್ಜನೆಗೆ ಸಂಬಂಧಿಸಿದಂತೆ ಮೇಲ್ವಿಚಾರಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಈಗಾಗಲೇ ನೋಡಲ್ ಅಧಿಕಾರಿಗಳನ್ನು ಸಹ ನಿಯೋಜಿಸಲಾಗಿದೆ. ಅದರ ಸಂಪೂರ್ಣ ವಿವರಗಳಿಗಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅಥವಾ ಬಿಬಿಎಂಪಿ ವೆಬ್ ಸೈಟ್ ಲಿಂಕ್ https://apps.bbmpgov.in/ganesh2025/ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

ಹೇರೋಹಳ್ಳಿ ಕೆರೆ ಕಲ್ಯಾಣಿಯಲ್ಲಿ ವಿಸರ್ಜನೆಗೆ ಇಲ್ಲ
ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ಬರುವ ಹೇರೋಹಳ್ಳಿ ಕೆರೆಯ ಕಲ್ಯಾಣಿಯಲ್ಲಿ ಪ್ರತಿ ವರ್ಷವೂ ಗಣೇಶ ಮೂರ್ತಿಗಳ ವಿಸರ್ಜನೆಗೆ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ಈ ಬಾರಿ ತಾಂತ್ರಿಕ ಕಾರಣಗಳಿಂದ ಗಣೇಶ ವಿಸರ್ಜಿಸುವುದನ್ನು ಸ್ಥಗಿತಗೊಳಿಸಲಾಗಿದೆ. ಆದ್ದರಿಂದಾಗಿ ಸಾರ್ವಜನಿಕರು ಬದಲಿ ವ್ಯವಸ್ಥೆಯನ್ನು ಮಾಡಿಕೊಳ್ಳುವಂತೆ ಕೋರಲಾಗಿದೆ.
ಯಡಿಯೂರು ಕೆರೆ ಕಲ್ಯಾಣಿಯಲ್ಲಿ ವಿಸರ್ಜನೆ
ನಗರದ ಯಡಿಯೂರು ಕೆರೆಯಲ್ಲಿ ಗಣೇಶ ವಿಸರ್ಜನೆಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಪೈಕಿ ದಿನಾಂಕ: 27-08-2025 ರಿಂದ 17-09-2025 ರವರೆಗೆ ಸಾರ್ವಜನಿಕರು ಪರಿಸರ ಸ್ನೇಹಿ ಅಥವಾ ಮಣ್ಣಿನಿಂದ ಮಾಡಿರುವ ಗಣೇಶ ಮೂರ್ತಿಗಳನ್ನು ಯಡಿಯೂರು ಕೆರೆಯಲ್ಲಿ ವಿಸರ್ಜನೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಣ್ಣಿನ ಗಣೇಶ ತಯಾರಿಕೆ ಕಲಿಕಾ ಕಾರ್ಯಕ್ರಮ
ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ಮಣ್ಣಿನ ಗಣೇಶ ತಯಾರಿಕೆ ಕಲಿಕಾ ಕಾರ್ಯಕ್ರಮವನ್ನು ರಾಜರಾಜೇಶ್ವರಿನಗರ ವಲಯ ಆಯುಕ್ತರಾದ ಡಾ. ಸತೀಶ್ ಬಿ.ಸಿ. ರವರು ಹಾಗೂ ವಲಯ ಜಂಟಿ ಆಯುಕ್ತ ಆರತಿ ಆನಂದ್ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ಹೇರೋಹಳ್ಳಿಯ ಬಿಬಿಎಂಪಿ ಪ್ರೌಢಶಾಲೆ ಮತ್ತು ಪಿಯು ಕಾಲೇಜ್ ಹಾಗೂ ಲಗ್ಗೆರೆಯ ಬಿಬಿಎಂಪಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಯನ್ನು ತಯಾರಿಸುವ ಸಲುವಾಗಿ ಕಲಿಕಾ ಕಾರ್ಯಕ್ರಮ ಬಿಬಿಎಂಪಿ ವತಿಯಿಂದ ಆಯೋಜಿಸಲಾಯಿತು ಎಂದು ವಲಯ ಆಯುಕ್ತರು ತಿಳಿಸಿದರು.
ಗಣೇಶ ಮೂರ್ತಿಗಳನ್ನು ತಯಾರಿಸುವಾಗ ಪಿಒಪಿ ಹಾಗೂ ಹಾನಿಕಾರಕ ರಾಸಾಯನಿಕಗಳು, ಬಣ್ಣಗಳನ್ನು ಬಳಸುವುದರಿಂದ ಮೂರ್ತಿಗಳನ್ನು ವಿಸರ್ಜಿಸಿದಾಗ ನೀರಿನಲ್ಲಿ ಕರಗದೆ ಪರಿಸರಕ್ಕೆ ಹಾನಿಯಾಗುತ್ತದೆ. ಮಣ್ಣಿನ ಗಣೇಶ ಮೂರ್ತಿ ರಚಿಸಿ ಗಣೇಶ ಹಬ್ಬವನ್ನು ಪರಿಸರಕ್ಕೆ ಹಾನಿಯಾಗದಂತೆ ಅರ್ಥಪೂರ್ಣ ರೀತಿಯಲ್ಲಿ ಆಚರಿಸುವುದರಿಂದ ಕೆರೆ ಕೊಳಗಳು ಇನ್ನಿತರೆ ಜಲ ಮೂಲಗಳು ಮಲಿನವಾಗುವುದಿಲ್ಲ ಎಂದು ಅವರು ಅರಿವು ಮೂಡಿಸಿದರು.












Click it and Unblock the Notifications