ಸಂಸದ ತೇಜಸ್ವಿ ಸೂರ್ಯ ಹೇಳಿದಂತಿಲ್ಲ ಎಂದ ಬಿಬಿಎಂಪಿ!
ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಹೇಳಿದಂತೆ ಏನು ಇಲ್ಲ. ಬೆಂಗಳೂರಿನಲ್ಲಿ ರಸ್ತೆಗಳು ಉತ್ತಮವಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಸ್ಪಷ್ಟನೆ ನೀಡಿದೆ. ಬೆಂಗಳೂರಿನ ರಸ್ತೆಗುಂಡಿ ಹಾಗೂ 10,000 ಮೀ ಮ್ಯಾರಥಾನ್ ಓಟದ ಸ್ಪರ್ಧೆಗೆ ಸಂಬಂಧಿಸಿದಂತೆ ತೇಜಸ್ವಿ ಸೂರ್ಯ ಅವರು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಬೆಂಗಳೂರಿನ ರಸ್ತೆಗಳನ್ನು ಸರಿಪಡಿಸುವಂತೆ ಅವರು ಆಗ್ರಹಿಸಿದ್ದರು. ಆದರೆ, ಇದೀಗ ಈ ಪತ್ರಕ್ಕೆ ಬಿಬಿಎಂಪಿ ರಿಯಾಕ್ಟ್ ಮಾಡಿದೆ. ಈ ಪ್ರತಿಕ್ರಿಯೆಯಲ್ಲಿ ಬಿಬಿಎಂಪಿಯಿಂದ ಎಲ್ಲವೂ ಸರಿ ಇದೆ ಎಂದು ಹೇಳಿದೆ.
ಬೆಂಗಳೂರಿನಲ್ಲಿ 27ನೇ ಏಪ್ರಿಲ್ 2025ರಂದು ನಡೆದ 10,000 ಮೀ ಮ್ಯಾರಥಾನ್ ಓಟದ ಸಮಯದಲ್ಲಿ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಅವರು ರಸ್ತೆಗಳಲ್ಲಿ ಗುಂಡಿ ತುಂಬಿದೆ ಮತ್ತು ಓಟವು ಅಪಾಯಕಾರಿಯಾಗಿತ್ತು ಎಂದು ಹೇಳಿದ್ದಾರೆ. ಆದರೆ, Worlds Premier 10K Run ಆಯೋಜಕರು ಅವರ ವರದಿ ಮತ್ತು ಸಂಬಂಧಪಟ್ಟ ಕಾರ್ಯಪಾಲಕ ಎಂಜಿನಿಯರ್ ಅವರಿಂದ ವರದಿಯನ್ನು ಪಡೆದುಕೊಳ್ಳಲಾಗಿದೆ. ಎರಡೂ ವರದಿಗಳು ಈ ರಸ್ತೆಗಳು ಗುಂಡಿ ಮುಕ್ತವಾಗಿದ್ದು, 10,000 ಮೀಟರ್ ಓಟಕ್ಕೆ ಯಾವುದೇ ರೀತಿಯ ಅಪಾಯವನ್ನು ತರುವಂತಹ ಪರಿಸ್ಥಿತಿ ಇಲ್ಲವೆಂದು ತಿಳಿಸಿರುತ್ತಾರೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಸ್ಪಷ್ಟನೆ ನೀಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು 10,000 ಮೀಟರ್ ಮ್ಯಾರಥಾನ್ ಓಟಕ್ಕೆ ಎಲ್ಲಾ ರೀತಿಯ ಸಹಕಾರ ಹಾಗೂ ಸಿದ್ಧತೆಯನ್ನು ಮಾಡಿಕೊಟ್ಟಿದೆ. ಮತ್ತೊಂದು ಪ್ರಮುಖ ಅಂಶವೆಂದರೆ ದಿನಾಂಕ:27-04-2025ರಂದು ನಡೆದ 10,000 ಮೀ ಮ್ಯಾರಥಾನ ಓಟದಲ್ಲಿ ಅಭಿಷೇಕ್ ಪಾಲ್ ಅವರು ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿ 29 ನಿಮಿಷ 12 ಸೆಕೆಂಡ್ ಸಮಯದಲ್ಲಿ ಓಟವನ್ನು ಪೂರ್ಣಗೊಳಿಸಿದ್ದಾರೆ. ಇದನ್ನು ನೋಡಿದರೆ ರಸ್ತೆಯು ಉತ್ತಮವಾದ ಸ್ಥಿತಿಯಲ್ಲಿ ಇದ್ದ ಕಾರಣವನ್ನು ಎತ್ತಿ ತೋರಿಸಿರುತ್ತದೆ ಎಂದೂ ಬಿಬಿಎಂಪಿಯು ಹೇಳಿದೆ.
ಬೆಂಗಳೂರಿನಲ್ಲಿ ರಸ್ತೆಗಳು ಕಳಪೆಯಾಗಿವೆ. ನಗರದಲ್ಲಿ ರಸ್ತೆಗುಂಡಿಗಳ ಸಂಖ್ಯೆ ಹೆಚ್ಚಾಗಿದ್ದು.. ಬೆಂಗಳೂರಿಗಿಂತ ಮುಂಬೈನ ರಸ್ತೆಗಳು ಉತ್ತಮವಾಗಿದೆ ಎಂದು ತೇಜಸ್ವಿ ಸೂರ್ಯ ಅವರು ಹೇಳಿದ್ದರು. ಅಲ್ಲದೇ ಬೆಂಗಳೂರಿನ ಕಳಪೆ ರಸ್ತೆಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದರು. ಈ ಟ್ವೀಟ್ ಭಾರೀ ವೈರಲ್ ಆಗಿತ್ತು.

ತೇಜಸ್ವಿ ಸೂರ್ಯ ಹೇಳಿದ್ದೇನು ?
ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು, ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಬೆಂಗಳೂರಿನ ಕೆಲವು ಗಂಭೀರ ವಿಷಯಗಳನ್ನು ಪ್ರಸ್ತಾಪಿಸಿದ್ದರು. ಅಲ್ಲದೇ ಈ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲೂ ಅವರು ಪೋಸ್ಟ್ ಮಾಡಿಕೊಂಡಿದ್ದು. ಈ ಪೋಸ್ಟ್ ಸಾಕಷ್ಟು ವೈರಲ್ ಸಹ ಆಗಿತ್ತು.
ಬೆಂಗಳೂರಿನಲ್ಲಿ ಟಿಸಿಎಸ್ ವರ್ಲ್ಡ್ 10ಕೆ-2025 ಮ್ಯಾರಥಾನ್ನಲ್ಲಿ ಹೇಗೆಲ್ಲಾ ಸಮಸ್ಯೆ ಆಯಿತು ಎನ್ನುವ ಬಗ್ಗೆ ತೇಜಸ್ವಿ ಸೂರ್ಯ ಅವರು ಡಿ.ಕೆ ಶಿವಕುಮಾರ್ ಅವರಿಗೆ ಪತ್ರ ಬರೆದು ವಿವರಿಸಿದ್ದರು. ಈ ಮ್ಯಾರಥಾನ್‌ನಲ್ಲಿ ಅಥ್ಲೀಟ್ಗಳು ಬೆಂಗಳೂರಿನ ಕೆಟ್ಟ ರಸ್ತೆಗಳು, ರಸ್ತೆ ಗುಂಡಿ ಹಾಗೂ ಧೂಳಿನಲ್ಲಿ ಓಡುವ ಪರಿಸ್ಥಿತಿ ಎದುರಾಗಿತ್ತು. ಈ ವಿಷಯವು ತುಂಬಾ ಬೇಸರ ಮೂಡಿಸಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದರು.
ಈ ಮ್ಯಾರಥಾನ್ನಲ್ಲಿ ಜಗತ್ತಿನ ಶ್ರೇಷ್ಠ ಅಥ್ಲೀಟ್ ಗಳು, ಹಿರಿಯ ನಾಗರಿಕರು, ಸಾಮಾನ್ಯ ನಾಗರಿಕರು ಸೇರಿದಂತೆ ಸುಮಾರು 40,000 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಆದರೆ, ಅವರೆಲ್ಲರೂ ಸುಂದರ ಓಟದ ಅನುಭವವನ್ನು ಅನುಭವಿಸುವ ಬದಲು ಬೆಂಗಳೂರಿನ ಗುಂಡಿಗಳ ಓಟ, ಧೂಳಿನ ಓಟ, ಅಪಾಯದಿಂದ ಕೂಡಿದ ಓಟ ಎಂಬ ಅನುಭವ ಪಡೆದದ್ದು ಬಹಳ ಬೇಸರದ ಸಂಗತಿ ಎಂದಿದ್ದರು.
ವೈಟ್ ಟಾಪಿಂಗ್ ಕಾಮಗಾರಿ ಪ್ರಾರಂಭಿಸದ 2 ಗುತ್ತಿಗೆದಾರರಿಗೆ 10 ಲಕ್ಷ ರೂ. ದಂಡ!
ಇನ್ನು ಬೆಂಗಳೂರಿನಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ನಡೆಸದೆ ಇರುವ ಇಬ್ಬರು ಗುತ್ತಿಗೆದಾರರಿಗೆ ಬಿಬಿಎಂಪಿಯು ಭರ್ಜರಿ ದಂಡ ವಿಧಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಕ್ಷಿಣ ಹಾಗೂ ಪಶ್ವಿಮ ವಲಯ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿಯನ್ನು ಪ್ರಾರಂಭಿಸದೇ ಇರುವ 2 ಗುತ್ತಿಗೆದಾರರಿಗೆ 10 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಮಾಹಿತಿ ನೀಡಿದ್ದಾರೆ.
ದಕ್ಷಿಣ ವಲಯ ವ್ಯಾಪ್ತಿಯಲ್ಲಿ ವಿಜಯನಗರ ವಿಧಾನಸಭಾ ಕ್ಷೇತ್ರದ ವೆಸ್ಟ್ ಆಫ್ ಕಾರ್ಡ್ ರಸ್ತೆ ಹಾಗೂ ಹೊಸಕೆರೆಹಳ್ಳಿ ಮುಖ್ಯ ರಸ್ತೆಯಲ್ಲಿ M/s. JMC Constructions ಎಂಬ ಸಂಸ್ಥೆಯು ವೈಟ್ ಟಾಪಿಂಗ್ ಕಾಮಗಾರಿಯನ್ನು ಪ್ರಾರಂಭಿಸದೇ ಇರುವುದರಿಂದ ಮತ್ತು ಸಾರ್ವಜನಿಕರಿಗೆ ಅನಾನುಕೂಲ ಉಂಟು ಮಾಡಿರುವ ಹಿನ್ನಲೆಯಲ್ಲಿ ಗುತ್ತಿಗೆ ಒಪ್ಪಂದದ ಪರಿಶೋಧ 41(1) ಮತ್ತು 41(2) ರಂತೆ ಮೊದಲ ಕಂತಾಗಿ ರೂ.5 ಲಕ್ಷಗಳ ದಂಡವನ್ನು ವಿಧಿಸಲಾಗಿದೆ ಎಂದು ಹೇಳಲಾಗಿದೆ.
ಪಶ್ಚಿಮ ವಲಯ ವ್ಯಾಪ್ತಿಯಲ್ಲಿ M/s Ocean Constructions ಎಂಬ ಸಂಸ್ಥೆಯು ವೈಯಾಲಿ ಕಾವಲ್ ರಸ್ತೆಯಲ್ಲಿ ನಿಧಾನಗತಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿಯನ್ನು ನಿರ್ವಹಿಸುತ್ತಿರುವುದರಿಂದ ಮತ್ತು ಸಾರ್ವಜನಿಕರಿಗೆ ಅನಾನುಕೂಲ ಉಂಟು ಮಾಡಿರುವ ಹಿನ್ನಲೆಯಲ್ಲಿ ಗುತ್ತಿಗೆ ಕರಾರಿನಂತೆ ಪರಿಶ್ಚಿಧ 41(1) ಮತ್ತು 41(2) ರಂತೆ ಮೊದಲ ಕಂತಾಗಿ ರೂ.5.00 ಲಕ್ಷಗಳ ದಂಡವನ್ನು ವಿಧಿಸಲಾಗಿರುತ್ತದೆ.
ನಗರದಲ್ಲಿ ವೈಟ್ ಟಾಪಿಂಗ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಅವುಗಳನ್ನು ತ್ವರಿತಗತಿಯಲ್ಲಿ ಕಾಮಗಾರಿ ನಡೆಸದವರಿಗೆ ದಂಡ ವಿಧಿಸಲು ಮುಖ್ಯ ಆಯುಕ್ತರು ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಬಿ.ಎಸ್ ಪ್ರಹ್ಲಾದ್ ರವರಿಗೆ ಆದೇಶ ನೀಡಿರುತ್ತಾರೆ.
ಅದರಂತೆ, ದಕ್ಷಿಣ ಹಾಗೂ ಪಶ್ವಿಮ ವಲಯ ವ್ಯಾಪ್ತಿಯಲ್ಲಿ ಕಾಮಗಾರಿ ಪ್ರಾರಂಭಿಸದವರಿಗೆ ಮತ್ತು ನಿಧಾನಗತಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರಿಗೆ ದಂಡ ವಿಧಿಸಲಾಗಿದೆ. ಇದೇ ರೀತಿ ಬೇರೆ ವಲಯಗಳಲ್ಲಿಯೂ ಸರಿಯಾಗಿ ಕಾರ್ಯನಿರ್ವಹಿಸದ ಗುತ್ತಿಗೆದಾರರಿಗೂ ದಂಡ ವಿಧಿಸಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಬನಶಂಕರಿ ವಿದ್ಯುತ್ ಚಿತಾಗಾರ ತುರ್ತು ನಿರ್ವಹಣೆ
ಬೆಂಗಳೂರು ದಕ್ಷಿಣ ವಲಯ ವ್ಯಾಪ್ತಿಯ ಬನಶಂಕರಿ ವಿದ್ಯುತ್ ಚಿತಾಗಾರದ ಎರಡು ಪರ್ನೆಸ್‌ಗಳ ಕಾಯಿಲ್‌ಗಳು ಹಾಗೂ ಬ್ರಿಕ್ಸ್‌ಗಳು ಹಾಳಾಗಿರುವುದರಿಂದ ತುರ್ತು ನಿರ್ವಹಣೆ ಕೆಲಸದ ಪ್ರಯುಕ್ತ ದಿನಾಂಕ: 29-04-2025 ರಿಂದ 08-05-2025 ವರೆಗೂ 10 ದಿನಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications