E-Khata New Update: ಅಂತಿಮ ಇ-ಖಾತೆ ಪಡೆಯುವುದು ಹೇಗೆ? ಆಸ್ತಿ ಮಾಲೀಕರೇ ಗಮನಿಸಿ
ಬೆಂಗಳೂರು, ಜನವರಿ 30: ಬೆಂಗಳೂರಿನ ಆಸ್ತಿ ಮಾಲೀಕರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಗಾಗ ಖಾತೆ ಕುರಿತು ಅಪ್ಡೇಟ್ ಕೊಡುತ್ತಿದೆ. ಕಂದಾಯ ವಿಭಾಗದಲ್ಲಿ ಸಾಕಷ್ಟು ಸರಳೀಕರಣಕ್ಕೆ ಹೊಸ ಹೊಸ ಉಪಕ್ರಮ ಜಾರಿಗೆ ತರುತ್ತಿದೆ. ಲಕ್ಷಾಂತರ ಖಾತಾಗಳನ್ನು ಡಿಜಿಟಲೀಕರಣ ಮಾಡಿರುವ ಬಿಬಿಎಂಪಿಯು ಅಂತಿಮ ಇ-ಖಾತಾ ಡೌನ್‌ಲೋಡ್ ಮಾಡಿಕೊಳ್ಳುವಂತೆ ಆಸ್ತಿ ಮಾಲೀಕರಿಗೆ ತಿಳಿಸಿದೆ. ಹಾಗಾದರೆ ಫೈನಲ್ ಇ-ಖಾತಾ ಡೌನ್‌ಲೋಡ್ ಹೇಗೆ? ಇಲ್ಲಿದೆ ಅಪ್ಡೇಟ್ ಮಾಹಿತಿ.
ಬಿಬಿಎಂಪಿಯು ನಾಗರಿಕರಿಗೆ ಅನುಕೂಲವಾಗುವ ಮಾದರಿಯಲ್ಲಿ ಇ-ಖಾತಾ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಬಿಬಿಎಂಪಿ ಅಧಿಕಾರಿಗಳು ಬಯಸಿದರೂ ಸಹ, ನಿಮ್ಮ ಮಾಹಿತಿ ಮತ್ತು ಆಸ್ತಿ ಫೋಟೋವನ್ನು ನೀಡದೆ ಅವರು ನಿಮ್ಮ ಅಂತಿಮ ಇ-ಖಾತಾವನ್ನು ರಚಿಸಲು ಸಾಧ್ಯವಿಲ್ಲ. ಅಗತ್ಯ ಮಾಹಿತಿ ಪಡೆದು ಈಗಾಗಲೇ ಸುಮಾರು 22 ಲಕ್ಷ ಆಸ್ತಿಗಳಿಗೆ ಕರಡು ಇ-ಖಾತಾಗಳನ್ನು ವಾರ್ಡ್‌ವಾರು ಆನ್‌ಲೈನ್‌ನಲ್ಲಿ BBMPeAasthi.karnataka.gov.in ನಲ್ಲಿ ಹಾಕಲಾಗಿದೆ. ಬೆಂಗಳೂರು ಆಸ್ತಿ ಮಾಲೀಕರಿಗೆ ಅಂತಿಮ ಇ-ಖಾತಾ ಡೌನ್‌ಲೋಡ್ ಮಾಡಿಕೊಳ್ಳಬಹುದು.

ನಿಮ್ಮ ಆಸ್ತಿ ತೆರಿಗೆ ರಶೀದಿಯಿಂದ ನಿಮ್ಮ ವಾರ್ಡ್ ಮಾಹಿತಿ ನೀವು ಪಡೆಯಬಹುದಾಗಿದೆ. ಜೊತೆಗೆ ಅಗತ್ಯ ಮಾಹಿತಿ, ವಿಚಾರಣೆಗೆ ನೀವು ಇ-ಖಾತಾ ಸಹಾಯವಾಣಿ ಸಂಖ್ಯೆ 94806 83695ಗೂ ನೀವು ಕರೆ ಮಾಡಬಹುದು.
ಅಂತಿಮ ಇ-ಖಾತೆ ಪಡೆಯಲು ಮೊಬೈಲ್ ಸಂಖ್ಯೆ ಮತ್ತು OTP ಬಳಸಿ ಲಾಗಿನ್ ಮಾಡಿ ಮತ್ತು ವಾರ್ಡ್‌ವಾರು ಪಟ್ಟಿಯಲ್ಲಿ ಮಾಲೀಕರ ಹೆಸರನ್ನು ಬಳಸಿಕೊಂಡು ನಿಮ್ಮ ಆಸ್ತಿಯನ್ನು ಹುಡುಕಬಹುದು. ಒಂದು ವೇಳೆ ದಾಖಲಾತಿಯಲ್ಲಿ ಅನುಮಾನಗಳು, ತಪ್ಪುಗಳಿದ್ದರು ಪಾಲಿಕೆ ಗಮನಕ್ಕೆ ತರಲು ಈಗಾಗಲೇ ಅವಕಾಶ ನೀಡಲಾಗಿತ್ತು. ಲಾಗಿನ್ ಆಗಿ ನೀವು ಖಾತೆ ಪಡೆಯುವ ಮುನ್ನ ಸಂಪೂರ್ಣವಾಗಿ ಪರಿಶೀಲಿಸಿಕೊಳ್ಳಬಹುದು.
* ಆಸ್ತಿ ಮಾಲೀಕರು ಮೊದಲು BBMPeAasthi.karnataka.gov.in ಭೇಟಿ ನೀಡಬೇಕು.
* ಮಾಲೀಕರ ಆಧಾರ್ ಸಂಖ್ಯೆ ನಮೂದಿಸಬೇಕು.
* ಆಸ್ತಿ ತೆರಿಗೆ ಅರ್ಜಿ ಸಂಖ್ಯೆ ವಿವರ ಹಾಕಬೇಕು (ಆಸ್ತಿ ತೆರಿಗೆ ವ್ಯವಸ್ಥೆಯಿಂದ ಸ್ವಯಂಚಾಲಿತವಾಗಿ ದತ್ತಾಂಶವನ್ನು ಪಡೆಯುತ್ತದೆ)
* ಮಾರಾಟ/ನೋಂದಣಿ ಪತ್ರದ ಸಂಖ್ಯೆ (ಉಪ ನೋಂದಣಿದಾರರಿಂದ ಸ್ವಯಂಚಾಲಿತವಾಗಿ ಅದನ್ನು ಪಡೆಯುತ್ತದೆ).
* ಬೆಸ್ಕಾಂ 10-ಅಂಕಿಯ ಐಡಿ (ಖಾಲಿ ನಿವೇಶನಗಳಿಗೆ ಐಚ್ಛಿಕ) ನಮೂದಿಸಬೇಕು.
* ಆಸ್ತಿ ಫೋಟೋ
ಈ ಮೇಲಿನ ಎಲ್ಲ ವಿವರಗಳು ಬಿಬಿಎಂಪಿ ದಾಖಲೆಗಳೊಂದಿಗೆ ಹೊಂದಿಕೆಯಾದರೆ ನೀವು ಅಂತಿಮ ಇ-ಖಾತಾವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಮಾಹಿತಿ ಲಭ್ಯವಿಲ್ಲದಿದ್ದಾಗ ಅಥವಾ ಪಾಲಿಕೆಯ ದಾಖಲೆಗಳೊಂದಿಗೆ ಹೊಂದಿಕೆಯಾಗದಿದ್ದರೆ ಮಾತ್ರ, ಪ್ರಕರಣವನ್ನು ಸಹಾಯಕ ಕಂದಾಯ ಅಧಿಕಾರಿಗೆ ಉಲ್ಲೇಖಿಸಲಾಗುತ್ತದೆ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ಗುರುವಾರ ಮಾಹಿತಿ ನೀಡಿದೆ.
ಶೀಘವೇ ಇ-ಖಾತಾ ಮೇಳ
ಬೆಂಗಳೂರು ನಾಗರಿಕರಿಗೆ ಸಹಾಯವಾಗಲು, ಎಲ್ಲರಿಗೂ ಇ-ಖಾತೆ ವಿತರಣೆ ಮಾಡುವ ಉದ್ದೇಶದಿಂದ ನಾಗರಿಕ ಕ್ಷೇಮಾಭಿವೃದ್ಧಿ ಸಂಘ-ಸಂಸ್ಥೆಗಳು, ವಸತಿ ಸಮುಚ್ಚಯ ನಿವಾಸಿಗಳ ಸಂಘಟನೆಗಳ ಸಹಕಾರದಲ್ಲಿ ಫೆಬ್ರವರಿಯಲ್ಲಿ ಇ-ಖಾತಾ ಮೇಳ ಆಯೋಜನೆ ಮಾಡಲು ಸಿದ್ಧತೆ ಆರಂಭಿಸಿದೆ. ಕಂದಾಯ ವಿಭಾಗದ ಅಧಿಕಾರಿಗಳು ಸಂಘ-ಸಂಸ್ಥೆಗಳ ಜೊತೆಗೆ ಸಂಪರ್ಕ ಸಾಧಿಸಿ, ವಾಟ್ಸಾಪ್ ರಚಿಸಿ ಶೀಘ್ರವೇ ಇ-ಖಾತಾ ಮೇಳ ಆಯೋಜಿಸಲಿದ್ದಾರೆ.












Click it and Unblock the Notifications