ಕಾರ್ಪೊರೇಟರ್ ಮಂಜುಳಾ ಪತಿ ಕೊಲೆ, ಬಿಜೆಪಿ ಆಕ್ರೋಶ
ಬೆಂಗಳೂರು, ಮಾ.5: ನಗರದ ಪ್ರತಿಷ್ಠಿತ ಬಡಾವಣೆ ಕೆ.ಆರ್ ಪುರಂ ಬಳಿಯ ದೇವಸಂದ್ರದಲ್ಲಿ ಬಿಬಿಎಂಪಿ ಸದಸ್ಯೆ ಮಂಜುಳಾ ಅವರ ಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಚ್ಚಿ ಕೊಲ್ಲಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶ್ರೀನಿವಾಸ್ ಅವರನ್ನು ಮಣಿಪಾಲ್ ಆಸ್ಪತ್ರೆಗೆ ತಕ್ಷಣವೇ ಕರೆದೊಯ್ಯಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೆ.ಆರ್ ಪುರಂ ಪೊಲೀಸ್ ಪ್ರಕರಣ ದಾಖಲಿಸಿಕೊಂಡಿದ್ದು ದುಷ್ಕರ್ಮಿಗಳ ಪತ್ತೆಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ.
ಬಿಜೆಪಿ ಕಾರ್ಪೊರೇಟರ್ ಮಂಜುಳಾ ಅವರ ಪತಿ ಶ್ರೀನಿವಾಸ್ ಅವರ ಮೇಲೆ ಹಲ್ಲೆ ಮಾಡಿ ಕೊಲೆಗೈದಿರುವ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಕೆ.ಆರ್ ಪುರಂ ಪೊಲೀಸ್ ಠಾಣೆ ಎದುರು ಬುಧವಾರ ಸಂಜೆ ಪ್ರತಿಭಟನೆ ನಡೆಸಿದರು.
ಬಿಜೆಪಿ ಮುಖಂಡರಾದ ಅನಂತಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ನಂದೀಶ್ ರೆಡ್ಡಿ ಸೇರಿದಂತೆ ಅನೇಕ ಸ್ಥಳೀಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ತನಿಖಾಧಿಕಾರಿಯನ್ನು ನೇಮಿಸಲಾಗಿದ್ದು, ಅಗತ್ಯಬಿದ್ದರೆ ಇನ್ಸ್ ಪೆಕ್ಟರ್ ವಿರುದ್ಧ ಕ್ರಮ ಜರುಗಿಸುವುದಾಗಿ ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅವರು ಬಿಜೆಪಿ ಮುಖಂಡರಿಗೆ ತಿಳಿಸಿದರು.
ಕೆ.ಆರ್ ಪುರಂ ಅಸೆಂಬ್ಲಿ ಕ್ಷೇತ್ರಕ್ಕೆ ಸೇರಿರುವ ದೇವಸಂದ್ರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್ 55 ದೇವಸಂದ್ರದ ಕಾರ್ಪೊರೇಟರ್ ಮಂಜುಳಾ ಅವರ ಪತಿ ಶ್ರೀನಿವಾಸ್ ಅವರ ಮೇಲೆ ಬುಧವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಹಲ್ಲೆ ನಡೆಸಲಾಗಿದೆ. ದೇವಸಂದ್ರ ಸಮೀಪದ ಹೇರ್ ಸಲೂನ್ ಗೆ ಶ್ರೀನಿವಾಸ್ ಅವರು ಬಂದಿದ್ದಾರೆ. ಈ ಸಂದರ್ಭದಲ್ಲಿ ಹೊಂಚು ಹಾಕಿ ಕುಳಿತ್ತಿದ್ದ ಸುಮಾರು 5-6 ಮಂದಿ ಮುಸುಕುಧಾರಿಗಳು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಶ್ರೀನಿವಾಸ್ ಅವರು ಪ್ರತಿರೋಧ ಒಡ್ಡುವ ಮೊದಲೆ ಅವರ ತಲೆ, ಹೊಟ್ಟೆ, ಕೈ ಕಾಲುಗಳ ಮೇಲೆ ಲಾಂಗು ಮಚ್ಚುಗಳು ಝಳಪಿಸಲಾಗಿದೆ.

ಶ್ರೀನಿವಾಸ್ ಅವರ ಚೀರಾಟ ಕೇಳಿ ಸಲೂನ್ ನಲ್ಲಿದ್ದವರು ಹೊರಬಂದು ನೋಡಿದಾಗ ಶ್ರೀನಿವಾಸ್ ಅವರು ರಕ್ತದ ಮಡುವಿನಲ್ಲಿ ಒದ್ದಾಡುವ ಭೀಕರ ದೃಶ್ಯ ಕಂಡು ಬಂದಿದೆ. ತಕ್ಷಣವೇ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಶ್ರೀನಿವಾಸ್ ಅವರಿಗೆ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕೆ.ಆರ್ ಪುರಂ ವ್ಯಾಪ್ತಿಯ ವಾರ್ಡ್ ನಂ.55 ದೇವಸಂದ್ರದ ಬಿಬಿಎಂಪಿ ಸದಸ್ಯೆ ಆರ್ ಮಂಜುಳಾ ದೇವಿ(ಬಿಜೆಪಿ) ಅವರು ಪತಿಯ ಸಾವಿಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಮಂಜುಳಾ ಹಾಗೂ ಅವರ ಪುತ್ರ ಅವರು ವಿಕ್ಟೋರಿಯಾ ಆಸ್ಪತ್ರೆ ಬಳಿ ರೋದಿಸುತ್ತಿದ್ದಾರೆ. ಶ್ರೀನಿವಾಸ್ ಅವರ ಮರಣೋತ್ತರ ಪರೀಕ್ಷೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನೆರವೇರಿಸಲಾಗುತ್ತಿದೆ.
ಮಂಜುಳಾ ಅವರ ಕುಟುಂಬ ವರ್ಗದ ಪ್ರಕಾರ ಆರು ತಿಂಗಳ ಹಿಂದೆ ಮುಸುಕುಧಾರಿಗಳಿಂದ ಶ್ರೀನಿವಾಸ್ ಅವರ ಮೇಲೆ ಇದೇ ರೀತಿ ಹಲ್ಲೆ ನಡೆದಿತ್ತು. ಆದರೆ, ಆಗ ಹೆಚ್ಚಿನ ತೊಂದರೆ ಇಲ್ಲದೆ ಶ್ರೀನಿವಾಸ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಮಂಜುಳಾ ಹಾಗೂ ಶ್ರೀನಿವಾಸ್ ಅವರು ಕೈಗೊಂಡಿರುವ ಒಳ್ಳೆ ಕಾರ್ಯಗಳನ್ನು ಸಹಿಸದ ಕೆಲವರು ಹಳೆ ದ್ವೇಷಕ್ಕಾಗಿ ಈ ರೀತಿ ಹಲ್ಲೆ ನಡೆಸಿರುವ ಸಾಧ್ಯತೆಯಿದೆ ಎಂದಿದ್ದಾರೆ.












Click it and Unblock the Notifications