BBMP Property Tax: ಆಸ್ತಿ ಮಾಲೀಕರು ತೆರಿಗೆ ಕಟ್ಟದಿದ್ದರೆ ಡಿಸೆಂಬರ್ 1 ರಿಂದ ಡಬಲ್ ತೆರಿಗೆ...
ಬೆಂಗಳೂರು, ಅಕ್ಟೋಬರ್ 28: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸುಸ್ತಿದಾರರು ಕೂಡಲೇ ತೆರಿಗೆ ಪಾವತಿಸುವಂತೆ ಪಾಲಿಕೆ ಅಧಿಕಾರಿಗಳು ಹೇಳುತ್ತಲೇ ಬಂದಿದ್ದಾರೆ. ಅಲ್ಲದೇ ಆಸ್ತಿ ತೆರಿಗೆಯ ಬಾಕಿದಾರರಿಗೆ ಬಡ್ಡಿ ಮತ್ತು ದಂಡ ಮನ್ನಾ ಮಾಡುವ ಜೊತೆಗೆ ಒಂದು ಬಾರಿ ಪರಿಹಾರ(OTS) ಯೋಜನೆಯಡಿ ಆಸ್ತಿ ತೆರಿಗೆ ಕಟ್ಟಲು ಅನುಮತಿ ನೀಡಿದೆ. ಇದೀಗ ಬಿಬಿಎಂಪಿ ಬಾಕಿದಾರರಿಗೆ ಕೊನೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಬಿಬಿಎಂಪಿಗೆ ಪಾವತಿಸಬೇಕಾದ ಆಸ್ತಿ ತೆರಿಗೆ ಬಾಕಿ ಇರುವ ನಾಗರೀಕರು ಓಟಿಎಸ್ ಲಾಭವನ್ನು ಸರಿಯಾಗಿ ಪಡೆಯುತ್ತಿಲ್ಲ. 250 ಕೋಟಿ ರೂ.ಗಿಂತ ಹೆಚ್ಚು ಬಾಕಿ ಇರುವ 1,6000ಕ್ಕೂ ಹೆಚ್ಚು ಪರಿಷ್ಕರಣೆ ಪ್ರಕರಣಗಳು ಮತ್ತು 400 ಕೋಟಿ ರೂ.ಗಿಂತ ಹೆಚ್ಚು ಬಾಕಿ ಇರುವ ಸುಮಾರು 2.4 ಲಕ್ಷ ಸುಸ್ತಿದಾರರ ಪ್ರಕರಣಗಳು ಪಾವತಿಸುವುದು ಬಾಕಿ ಇದೆ.

ಕೂಡಲೇ ಈ ಬಾಕಿ ಇರುವ ಆಸ್ತಿ ಮಾಲೀಕರು OTS ಯೋಜನೆಯಡಿ ತಕ್ಷಣವೇ ಬಾಕಿ ಆಸ್ತಿ ತೆರಿಗೆ ಪಾವತಿಸಬೇಕು. ಅದಕ್ಕಾಗಿ OTS ಯೋಜನೆ ಕೊನೆಯ ದಿನಾಂಕವನ್ನು ಹಿಂದಿನಿಂದಲೂ ಹಲವು ಬಾರಿ ವಿಸ್ತರಣೆ ಮಾಡುತ್ತಲೇ ಬರಲಾಗಿದೆ. ಇದೀಗ ನವೆಂಬರ್ 31 ರೊಳಗೆ ಬಾಕಿ ಪಾವತಿಗೆ ಸೂಚಿಸಲಾಗಿದೆ.
ಬಾಕಿ ಪಾವತಿಸದಿದ್ದರೆ ತೆರಿಗೆ ಹಣ ಡಬಲ್
ಒಂದು ವೇಳೆ ನೀವು ಬಾಕಿ ಇರುವ ನಿಮ್ಮ ಆಸ್ತಿ ತೆರಿಗೆಯನ್ನು 31ನೇ ನವೆಂಬರ್ ಒಳಗಾಗಿ ಪಾವತಿಸದೇ ಇದ್ದಲ್ಲಿ 1ನೇ ಡಿಸೆಂಬರ್ 2024 ರಿಂದ ನೀವು ಪಾವತಿಸುವ ಬಾಕಿ ಆಸ್ತಿ ತೆರಿಗೆಯು ದ್ವಿಗುಣಕ್ಕಿಂತ ಹೆಚ್ಚಾಗುತ್ತದೆ. ಅಂದರೆ ಆಸ್ತಿ ತೆರಗೆಇ ದುಪಟ್ಟು (ಡಬಲ್) ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ. ಇದಕ್ಕೆ ಅವಕಾಶ ಕೊಡದೇ ಆಸ್ತಿ ತೆರಿಗೆ ಬಾಕಿಯನ್ನು ತಕ್ಷಣವೇ ಪಾವತಿಸಬೇಕು. ಇಲ್ಲವಾದಲ್ಲಿ ಆರ್ಥಿಕ ನಷ್ಟ ಎದುರಿಸಬೇಕಾಗುತ್ತದೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಎಚ್ಚರಿಕೆ ನೀಡಿದ್ದಾರೆ.
ನವೆಂಬರ್ 31ರೊಳಗೆ ತೆರಿಗೆ ಪಾವತಿಸುವವರು ಬಿಬಿಎಂಪಿಯ ಅಧಿಕೃತ ಜಾಲತಾಣ BBMPtax.karnataka.gov.in ಗೆ ಭೇಟಿ ನೀಡಿ ಪಾವತಿಸಬೇಕು. ನಿಮಗೆ ಅನಾನುಕೂಲವಾಗುವುದನ್ನು ತಪ್ಪಿಸಲು ಹಾಗೂ ನಿಮ್ಮ ಸ್ವತ್ತಿನ ಬಾಕಿ ಆಸ್ತಿತೆರಿಗೆಯನ್ನು ಪಾವತಿಸಲು ಒಟಿಎಸ್ ಯೋಜನೆಯ ಪ್ರಯೋಜನ ಸಹ ಪಡೆಯಬಹದು ಎಂದು ಪ್ರಕಟಣೆಯಲ್ಲಿ ಬಿಬಿಎಂಪಿ ತಿಳಿಸಿದೆ.












Click it and Unblock the Notifications