ಬೆಂಗಳೂರು ರಸ್ತೆಗುಂಡಿ ಮುಚ್ಚಲು ಬಂತು ಹೊಸ ಯಂತ್ರ: ಬೃಹತ್ ರಸ್ತೆಗುಂಡಿ ಗಂಟೆಯಲ್ಲಿ ದುರಸ್ತಿ
ಬೆಂಗಳೂರು, ಸೆಪ್ಟಂಬರ್ 11: ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಸಮಸ್ಯೆ ಇಂದು ನೆನ್ನೆಯದಲ್ಲ. ಇದರಿಂದಾಗಿ ಅನೇಕ ಮಂದಿ ರಸ್ತೆ ಅಪಘಾತದಲ್ಲಿ ಪ್ರಾಣ ಬಿಟ್ಟಿದ್ದಾರೆ. ರಸ್ತೆಗುಂಡಿ ದುರಸ್ತಿಗಾಗಿ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ವ್ಯಯಿಸುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈ ಬಾರಿ ಯಂತ್ರವೊಂದನ್ನು ನಗರಕ್ಕೆ ತಂದಿದ್ದಾರೆ. ಈ ಯಮತ್ರದ ಸಹಾಯದಿಂದಲೇ ರಸ್ತೆಗುಂಡಿ ಮುಚ್ಚುವ ಕಾರ್ಯ ಆರಂಭಿಸಿದ್ದಾರೆ.
ರಸ್ತೆಗುಂಡಿ ದುರಸ್ತಿ ಮಾಡುವ 'ಜೆಟ್ ಪ್ಯಾಚರ್' ಯಂತ್ರ ತರಲಾಗಿದೆ. ಈ ಯಂತ್ರದ ಸಹಾಯದಿಂದ ಬಿಬಿಎಂಪಿ ವ್ಯಾಪ್ತಿಯ ರಾಜರಾಜೇಶ್ವರಿ ನಗರ ವಲಯದಲ್ಲಿ ಪ್ರಾಯೋಗಿಕವಾಗಿ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಅತ್ಯಾಧುನಿಕ ಯಂತ್ರ ಇದಾಗಿದೆ ಎಂದು ಆರ್.ಆರ್‌ನಗರ ವಲಯ ಜಂಟಿ ಆಯುಕ್ತರಾದ ಅಜಯ್ ಅವರು ಮಾಹಿತಿ ನೀಡಿದ್ದಾರೆ.

ಯಂತ್ರದಿಂದ ರಸ್ತೆಗುಂಡಿ ಮುಚ್ಚುವ ಕಾರ್ಯಕ್ಕೆ ವೇಗ
ಆರ್.ಆರ್ ನಗರ ವಲಯ ಪಂತರಪಾಳ್ಯ- ನಾಯಂಡಹಳ್ಳಿ ಮೆಟ್ರೋ ನಿಲ್ದಾಣದ ಬಳಿ ರಸ್ತೆ ಗುಂಡಿ ಪರಿಶೀಲನೆಯ ಬಳಿಕ ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು. ಬೆಂಗಳೂರಿನ ಆರ್.ಆರ್ ನಗರ ವಲಯ ವ್ಯಾಪ್ತಿಯಲ್ಲಿ 'ಜೆಟ್ ಪ್ಯಾಚರ್' ಯಂತ್ರದ ಮೂಲಕ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದೆ. ಇದರಿಂದ ತ್ವರಿತಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಅನುಕೂಲವಾಗುತ್ತಿದೆ.
ಯಂತ್ರದ ವೈಶಿಷ್ಯತೆ ಏನು?
ಜೆಟ್ ಪ್ಯಾಚರ್ ಯಂತ್ರದ ಮೂಲಕ ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಶೀಘ್ರವಾಗಿಯಲ್ಲಿ ಮುಚ್ಚಬಹುದಾಗಿದೆ. ಈ ಯಂತ್ರದಲ್ಲಿ ಒಂದು ಬಾರಿಗೆ 150 ರಿಂದ 180 ಚ.ಮೀ ಅಗಲದ ರಸ್ತೆ ಗುಂಡಿಗಳನ್ನು ಮುಚ್ಚಬಹುದಾಗಿದೆ. ರಸ್ತೆ ಗುಂಡಿ ಮುಚ್ಚಿದ ಬೆನ್ನಲ್ಲೆ ದೊಡ್ಡ ದೊಡ್ಡ ವಾಹನಗಳು ಇದರ ಮೇಲೆ ಸರಾಗವಾಗಿ ಓಡಾಡಬಹುದಾಗಿದೆ ಎಂದು ತಿಳಿಸಿದರು.
ಆರ್.ಆರ್ ನಗರ ವಲಯದಲ್ಲಿ ಸಂಪೂರ್ಣ ರಸ್ತೆ ಹಾಳಾಗಿರುವುದನ್ನು ಹೊರತುಪಡಿಸಿ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ತ್ವರಿತವಾಗಿ ಮುಚ್ಚಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಗಲು-ರಾತ್ರಿ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದ್ದು, ಕಾಲಮಿತಿಯೊಳಗಾಗಿ ಗುಂಡಿಗಳನ್ನು ದುರಸ್ತಿಗೊಳಿಸಲಾಗುವುದು ಎಂದು ವಿವರಿಸಿದರು.

ಒಟ್ಟು 2443 ರಸ್ತೆಗುಂಡಿ ಗುರುತಿಸಿದ್ದ ಪಾಲಿಕೆ
ವಲಯ ವ್ಯಾಪ್ತಿಯಲ್ಲಿ ಬರುವ 20 ವಾರ್ಡ್‌ಗಳಲ್ಲಿ ಅಭಿಯಂತರರು 20ನೇ ಮೇ 2024 ರಿಂದ ಇದುವರೆಗೆ 2443 ರಸ್ತೆಗುಂಡಿಗಳನ್ನು ಗುರುತಿಸಿದ್ದಾರೆ. ಅದರಲ್ಲಿ 2408 ರಸ್ತೆಗುಂಡಿಗಳನ್ನು ಈಗಾಗಲೇ ಮುಚ್ಚಲಾಗಿದೆ. 35 ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅಪ್ಡೇಟ್ ಕೊಟ್ಟರು.
ಇನ್ನೂ ರಸ್ತೆ ಗುಂಡಿ ಗಮನ ತಂತ್ರಾಂಶ ದಲ್ಲಿ ಸಾರ್ವಜನಿಕರಿಂದ 461 ದೂರುಗಳು ದಾಖಲಾಗಿವೆ. ಅದರಲ್ಲಿ 86 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. 302 ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ರಾಜರಾಜೇಶ್ವರಿ ನಗರ ವಲಯ, ವಾರ್ಡ ರಸ್ತೆಗಳ ಪಟ್ಟಿ
* ವಿಧಾನಸಭಾ ಕ್ಷೇತ್ರಗಳ ಸಂಖ್ಯೆ: 02
* ವಾರ್ಡ್ ಗಳ ಸಂಖ್ಯೆ: 20
* ರಾಜರಾಜೇಶ್ವರಿ ನಗರ ವಲಯದ ಒಟ್ಟು ವಿಸ್ತೀರ್ಣ: 112.01 ಚ.ಕಿ.ಮೀಟರ್
* ವಾರ್ಡ್ ರಸ್ತೆಗಳ ಸಂಖ್ಯೆ: 11367
* ವಾರ್ಡ್ ರಸ್ತೆಗಳ ಉದ್ದ: 1829.44 ಕಿ.ಮೀ
* ಪ್ರಮುಖ ರಸ್ತೆಗಳ ಸಂಖ್ಯೆ: 44
* ಪ್ರಮುಖ ರಸ್ತೆಗಳ ಉದ್ದ: 216.45
* ವಲಯ ವ್ಯಾಪ್ತಿಯ ರಸ್ತೆಗಳ ಒಟ್ಟು ಉದ್ದ: 2045.89 ಕಿ.ಮೀ
ರಸ್ತೆ ಗುಂಡಿ ದುರಸ್ತಿ ಸ್ಥಳದಲ್ಲಿ ಮುಖ್ಯ ಅಭಿಯಂತರರಾದ ಸ್ವಯಂಪ್ರಭಾ, ಕಾರ್ಯಪಾಲಕ ಅಭಿಯಂತರಾದ ಪಾಪರೆಡ್ಡಿ, ಆರಿಫ್ ಸೇರಿದಂತೆ ವಿವಿಧ ಅಧಿಕಾರಿಗಳು ಸ್ಥಳದಲ್ಲಿದ್ದರು.












Click it and Unblock the Notifications