ಕೊರೊನಾ ವೈರಸ್: ಬೆಂಗಳೂರಿನ ಎರಡು ಪ್ರಮುಖ ಮಾರುಕಟ್ಟೆಗಳು ಸೀಲ್‌ಡೌನ್
ಬೆಂಗಳೂರು, ಜೂ. 22: ಬೆಂಗಳೂರಿನಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ನಿಯಂತ್ರಿಸಲು ಬಿಬಿಎಂಪಿ ಹೊಸ ಕ್ರಮಕ್ಕೆ ಮುಂದಾಗಿದೆ. ಇಲ್ಲಿನ ಕೃಷ್ಣರಾಜೇಂದ್ರ ಮಾರುಕಟ್ಟೆ (ಕೆ.ಆರ್. ಮಾರ್ಕೆಟ್) ಹಾಗೂ ಕಲಾಸಿಪಾಳ್ಯದ ಮಾರುಕಟ್ಟೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಈ ಕುರಿತು ಆದೇಶ ಹೊರಡಿಸಿರುವ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಆದೇಶ ಮುಂದಿನ 15 ದಿನಗಳವೆರೆಗೆ ಎರಡೂ ಮಾರುಕಟ್ಟೆಗಳನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕೆ.ಆರ್. ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆ ಪ್ರದೇಶದಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ವ್ಯಾಪಾರದ ದೃಷ್ಟಿಯಿಂದ ಸಾರ್ವಜನಿಕರ ಓಡಾಟ ಹೆಚ್ಚಾಗುತ್ತಿದೆ. ಇದರಿಂದಾಗಿ ಸೋಂಕು ಹರಡುವಿಕೆ ಉಲ್ಬಣವಾಗುವ ಸಾಧ್ಯತೆಯಿದೆ. ಹೀಗಾಗಿ ಸೋಂಕು ಹರಡುವುದನ್ನು ತಡೆಗಟ್ಟಲು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಎರಡೂ ಮಾರುಕಟ್ಟೆಗಳ ಮಳಿಗೆಗಳನ್ನು ಸೀಲ್‌ಡೌನ್ ಮಾಡುವಂತೆ ಆದೇಶ ಮಾಡಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ 'ಡೇಂಜರ್ ಜೋನ್'ನಲ್ಲಿರುವ 5 ಜಿಲ್ಲೆಗಳ ಕೊವಿಡ್ ಅಂಕಿ ಅಂಶ
ಸೋಂಕು ಸಮುದಾಯಕ್ಕೆ ಹರಡುವ ಅಪಾಯ ಇದ್ದುದರಿಂದ ಮಾರುಕಟ್ಟೆಯ ವ್ಯಾಪಾರಿಗಳು ಸೀಲ್‌ಡೌನ್ ಮಾಡುವಂತೆ ಬಿಬಿಎಂಪಿಗೆ ಮನವಿ ಮಾಡಿಕೊಂಡಿದ್ದರು. ಎರಡೂ ಮಾರುಕಟ್ಟೆಗಳ ವ್ಯಾಪಾರಸ್ಥರು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು.