ಪಿಜಿಗಳ ತೆರಿಗೆ ದರ ಪರಿಷ್ಕರಣೆ ಮಾಡಿದ ಬಿಬಿಎಂಪಿ
ಬೆಂಗಳೂರು, ಜು. 31 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪೇಯಿಂಗ್ ಗೆಸ್ಟ್ (ಪಿಜಿ)ಗಳಲ್ಲಿ ತೆರಿಗೆ ದರ ಪರಿಷ್ಕರಣೆ ಮಾಡಲು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಪಿಜಿಗಳನ್ನು ವಸತಿಯೇತರ ಕಟ್ಟಡಗಳ ವ್ಯಾಪ್ತಿಗೆ ತಂದು, ಅವುಗಳ ತೆರಿಗೆ ದರ ಪರಿಷ್ಕರಣೆ ಮಾಡಲು ಬುಧವಾರ ನಡೆದ ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ.
ಬೃಹತ್ ಬೆಂಗಳೂರ ಮಹಾನಗರ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಪಿಜಿಗಳ ತೆರಿಗೆ ಹೆಚ್ಚಳಕ್ಕೆ ಕೆಲವು ಸದಸ್ಯರು ಪ್ರತಿರೋಧ ವ್ಯಕ್ತಪಡಿಸಿದರು. ಆದರೆ, ತೆರಿಗೆ ದರ ಪರಿಷ್ಕರಣೆಗೆ ಬಹುಪಾಲು ಸದಸ್ಯರಿಂದ ಬೆಂಬಲ ವ್ಯಕ್ತವಾಯಿತು. 12 ಹಾಸಿಗೆಗಳಿಗೂ ಅಧಿಕ ಸಾಮರ್ಥ್ಯದ ಪಿಜಿಗಳಿಗೆ ಆಯಾ ವಲಯಕ್ಕೆ ತಕ್ಕಂತೆ ಚದರ ಅಡಿಗೆ ಗರಿಷ್ಠ ರೂ 20ರಿಂದ ಕನಿಷ್ಠ ರೂ 3ರವರೆಗೆ ತೆರಿಗೆ ವಿಧಿಸಲು ಒಪ್ಪಿಗೆ ಪಡೆಯಲಾಯಿತು.

ನಗರದ ದಕ್ಷಿಣ ವಲಯದಲ್ಲಿ 898 ಪಿಜಿಗಳಿದ್ದು 13,040 ಜನರು ವಾಸಿಸುತ್ತಿದ್ದಾರೆ ಎಂದು ಆಯುಕ್ತರ ನಿರ್ದೇಶನದಂತೆ ಬಿಬಿಎಂಪಿ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ಉಳಿದ ಏಳು ವಲಯಗಳಲ್ಲಿ ಸಮೀಕ್ಷೆ ನಡೆಯಬೇಕಿದೆ ಎಂದು ಕೌನ್ಸಿಲ್ ಸಭೆಯಲ್ಲಿ ಚರ್ಚೆ ನಡೆಯಿತು. [ಅತ್ಯಾಚಾರ, ಪಿಜಿ ನಿಯಂತ್ರಣಕ್ಕೆ ತಜ್ಞ ಸಮಿತಿ ರಚನೆ]
ಮಹದೇವಪುರ ಹಾಗೂ ಬೊಮ್ಮನಹಳ್ಳಿ ವಲಯಗಳಲ್ಲಿ ಅತ್ಯಧಿಕ ಪಿಜಿಗಳಿದ್ದು, ನಗರದಲ್ಲಿ ಒಟ್ಟಾರೆ 8 ಸಾವಿರಕ್ಕೂ ಅಧಿಕ ಹಾಸ್ಟೆಲ್ ಗಳಿವೆ. ಎಲ್ಲವನ್ನೂ ತೆರಿಗೆ ವ್ಯಾಪ್ತಿಗೆ ತಂದರೆ ಬಿಬಿಎಂಪಿಗೆ ಕೋಟ್ಯಂತರ ರೂ.ಆದಾಯ ಬರುತ್ತದೆ ಎಂದು ಚರ್ಚೆ ನಡೆಸಲಾಯಿತು.
ಪಿಜಿ ಹಾಸ್ಟೆಲ್ ಗಳು ವಾಣಿಜ್ಯೀಕರಣವಾಗಿದ್ದು, ದೊಡ್ಡ ಪ್ರಮಾಣದ ವರಮಾನ ಪಡೆಯುತ್ತಿವೆ. ಅವುಗಳನ್ನು ವಸತಿಯೇತರ ವ್ಯಾಪ್ತಿಗೆ ತರುವುದರಿಂದ ಬಿಬಿಎಂಪಿ ಆರ್ಥಿಕ ಸಂಪನ್ಮೂಲವೂ ಹೆಚ್ಚುತ್ತದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಉದ್ದೇಶಿತ ತೆರಿಗೆ ದರಗಳಿಗೆ ಸಂಬಂಧಿಸಿದಂತೆ ಹೊರಡಿಸಲಾಗಿದ್ದ ಕರಡು ಅಧಿಸೂಚನೆಗೆ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆ ಬರದ ಹಿನ್ನಲೆಯಲ್ಲಿ ಸಭೆಯಲ್ಲಿ ತೆರಿಗೆ ದರ ಪರಿಷ್ಕರಣೆಗೆ ಅನುಮೋದನೆ ದೊರೆಯಿತು.
ತೆರಿಗೆ ಹೆಚ್ಚಳ ಹೇಗೆ? : ವಲಯವಾರು ತೆರಿಗೆ ದರದಲ್ಲಿ ಪರಿಷ್ಕರಣೆ ಮಾಡಲಾಗುತ್ತದೆ. ಪ್ರತಿ ಚದರ ಅಡಿಗೆ ಗರಿಷ್ಠ ರೂ 20ರಿಂದ ಕನಿಷ್ಠ ರೂ 3ರವರೆಗೆ ತೆರಿಗೆ ವಿಧಿಸಲು ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಇದರ ಅನ್ವಯ ಎ ವಲಯಕ್ಕೆ 20, ಬಿ 14, ಸಿ 10, ಡಿ 8, ಇ 6, ಎಫ್ ವಲಯಕ್ಕೆ 3 ರೂ. ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ.
ಏ.1ರಿಂದ ಅನ್ವಯ : ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಪಿಜಿ ಹಾಸ್ಟೆಲ್ ಗಳಿಗೆ ವಿಧಿಸಿರುವ ನೂತನ ತೆರಿಗೆಯನ್ನು 2015ರ ಏ.1ರಿಂದ ಸಂಗ್ರಹಿಸಲು ಪಾಲಿಕೆ ಸಭೆಯಲ್ಲಿ ನಿರ್ಧರಿಸಲಾಗಿದೆ.












Click it and Unblock the Notifications