ಬೀದಿ ನಾಯಿಗಳ ನಿಯಂತ್ರಣಕ್ಕೆ ಬಿಬಿಎಂಪಿ ಹೊಸ ಪ್ಲ್ಯಾನ್
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೀದಿನಾಯಿಗಳ ಹಾವಳಿ ಬಗ್ಗೆ ಆಗಾಗ ವರದಿಯಾಗುತ್ತಲೇ ಇವೆ. ಇತ್ತೀಚೆಗೆ ಬೀದಿ ನಾಯಿಗಳು ಜನರ ಮೇಲೆ ವ್ಯಾಘ್ರವಾಗಿ ದಾಳಿ ಮಾಡಿ ಅವಾಂತರವನ್ನೇ ಸೃಷ್ಟಿಸುತ್ತಿವೆ. ಇತ್ತೀಚೆಗೆ ಜಾಲಹಳ್ಳಿ ಬಳಿ ಬೀದಿನಾಯಿಗಳ ದಾಳಿಗೆ ವೃದ್ಧೆಯೊಬ್ಬರು ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಬಿಎಂಪಿ, ಬೀದಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕಲು ಮುಂದಾಗಿದೆ.
ಬಿಬಿಎಂಪಿಯ ಪಶುಪಾಲನಾ ವಿಭಾಗವು ಬೆಂಗಳೂರಿನಲ್ಲಿರುವ ಬೀದಿನಾಯಿಗಳ ಸಂಖ್ಯೆ, ರೇಬೀಸ್ ರೋಗವನ್ನು ಕಂಟ್ರೋಲ್ ಮಾಡಲು ಕಠಿಣ ಕ್ರಮ ಕೈಗೊಳ್ಳುತ್ತಿದೆ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಬಿಬಿಎಂಪಿ ವ್ಯಾಪ್ತಿಯ ವಲಯಗಳಲ್ಲಿ ಬೀದಿನಾಯಿಗಳ ಹಾವಳಿ ತಡೆಯಲು ಸುಪ್ರೀಂಕೋರ್ಟ್ ನಿರ್ದೇಶನ, ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಮಾರ್ಗಸೂಚಿಯ ಅನುಸಾರ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಕಾರ್ಯಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ.

ಬೀದಿನಾಯಿಗಳನ್ನು ರೇಬೀಸ್ ರೋಗದಿಂದ ರಕ್ಷಿಸುವ ಸಲುವಾಗಿ ಆ್ಯಂಟಿ ರೇಬೀಸ್ ವ್ಯಾಕ್ಸಿನೇಷನ್(ಎಆರ್‌ವಿ) ಕಾರ್ಯಕ್ರಮದಡಿ ಲಸಿಕೆ ನೀಡಲಾಗುತ್ತಿದೆ. ಹಾಗಾಗಿ ಇಂತಹ ದೂರುಗಳಿಗಾಗಿ ರೇಬೀಸ್ ಸಹಾಯವಾಣಿ 6364893322 ಅಥವಾ ಬಿಬಿಎಂಪಿ ಸಹಾಯವಾಣಿ 1533ಕ್ಕೆ ಕರೆ ಮಾಡಬಹುದು ಎಂದು ನಿವಾಸಿಗಳಿಗೆ ತಿಳಿಸಿದೆ.
ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ವ್ಯಾಪ್ತಿಯಲ್ಲಿ ಒಂದು ನಾಯಿಯನ್ನು ಇಡುವ 424 ಕೆನಲ್ಸ್ ಹಾಗೂ 10ರಿಂದ 15 ನಾಯಿಗಳನ್ನು ಇಡುವ ಎಂಟು ಕೆನಲ್‌ಗಳು, ರೇಬೀಸ್ ನಾಯಿಗಳಿಗಾಗಿ ಚಿಕಿತ್ಸೆ ನೀಡಲು ನಾಲ್ಕು ಐಸೋಲೇಷನ್ ಕೆನಲ್‌ಗಳು ಈಗಾಗಲೇ ಇವೆ. ಬೀದಿನಾಯಿಗಳ ನಿಯಂತ್ರಣಕ್ಕಾಗಿ ಇವುಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಬಿಬಿಎಂಪಿ ಮುಂದಾಗಿದೆ.

ಅಲ್ಲದೆ, ಬೀದಿನಾಯಿಗಳಿಗೆ ಆಪರೇಷನ್ ನಡೆಯುವ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸಾ ಕೇಂದ್ರಗಳ ದುರಸ್ತಿ ಕಾರ್ಯ ಹಾಗೂ ವಿವಿಧ ಕಾಮಗಾರಿಗಳಿಗೆ ಈ ಸಾಲಿನಲ್ಲಿ ಅಂದಾಜು 1.77 ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಡಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
ಇತ್ತೀಚೆಗೆ ಬೀದಿನಾಯಿಗಳ ಗುಂಪೊಂದು ಭೀಕರವಾಗಿ ಎರಗಿದ ಪರಿಣಾಮ ವಾಕಿಂಗ್ ಮಾಡಲು ಮನೆಯಿಂದ ಹೊರ ಬಂದಿದ್ದ ಈ ಮಹಿಳೆ ಮಸಣ ಸೇರಿದ್ದರು. ಈ ಘಟನೆಯು ಬೆಂಗಳೂರಿನ ಜಾಲಹಳ್ಳಿ ಬಳಿಯ ಏರ್‌ಫೋರ್ಸ್ ಕ್ಯಾಂಪಸ್‌ನಲ್ಲಿ ನಡೆದಿತ್ತು. 60 ವರ್ಷದ ಮಹಿಳೆಯೊಬ್ಬರು ಕ್ಯಾಂಪಸ್‌ನಲ್ಲಿ ಇಂದು ಬೆಳಿಗ್ಗೆ ವಾಕಿಂಗ್ ಮಾಡಲು ಬಂದಿದ್ದಾಗ ವ್ಯಾಘ್ರವಾಗಿ ನಾಯಿಗಳ ಹಿಂಡು ದಾಳಿ ನಡೆಸಿತ್ತು. ಈ ಘಟನೆಯಲ್ಲಿ ಮಹಿಳೆಯ ತಲೆ, ಕೈ, ಕತ್ತು ಸೇರಿದಂತೆ ದೇಹದ ಭಾಗಗಳಿಗೆ ಗಂಭೀರವಾದ ಗಾಯಗಳಾಗಿತ್ತು.
ಸುಮಾರು 60 ವರ್ಷದ ಮಹಿಳೆ ಕ್ಯಾಂಪಸ್‌ನಲ್ಲಿ ವಾಕ್ ಮಾಡುತ್ತಿದ್ದ ಸಂದರ್ಭ 7-8 ಬೀದಿ ನಾಯಿಗಳು ಏಕಾಏಕಿ ದಾಳಿ ನಡೆಸಿದ್ದವು. ಪರಿಣಾಮ ಮಹಿಳೆಯ ತಲೆ ಹಿಂಭಾಗ, ಮುಖ, ಕೈ ಹಾಗೂ ಕತ್ತಿನ ಭಾಗದಲ್ಲಿ ಗಂಭೀರವಾಗಿ ಗಾಯವಾಗಿ ಬಳಿಕ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮಹಿಳೆ ಮೃತಪಟ್ಟಿದ್ದರು.
ಮೃತ ಮಹಿಳೆಯ ಅಳಿಯ ಭಾರತೀಯ ವಾಯುನೆಲೆಯಲ್ಲಿ ಕೆಲಸ ಮಾಡುತ್ತಿದ್ದರು. ಬಹುದಿನಗಳ ನಂತರ ಅಳಿಯ-ಮಗಳನ್ನು ಕಣ್ತುಂಬಿಕೊಂಡು ಬರೋಣ ಎಂದು ದೂರದ ಬಿಹಾರದಿಂದ ಇವರು ಬೆಂಗಳೂರಿಗೆ ಬಂದಿಳಿದ್ದಿದ್ದರು.
ಈ ಘಟನೆಯು ಬೆಂಗಳೂರಿಗರನ್ನು ಬೆಚ್ಚಿಬೀಳಿಸಿತ್ತು. ರಾತ್ರಿ ವೇಳೆಯೂ ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಬೀದಿನಾಯಿಗಳ ಆತಂಕವಿದೆ ಎಂದು ಸಾರ್ವಜನಿಕರು ದೂರಿದ್ದರು. ಬೀದಿನಾಯಿಗಳಿಗೆ ಹೆದರಿ ಮನೆಯಿಂದ ಹೊರ ಬರಲು ಸಾಧ್ಯವಾಗದ ಸ್ಥಿತಿಯೂ ಕೆಲವೆಡೆ ಇದೆ. ಮಕ್ಕಳು, ವಯಸ್ಸಾದವರಿಗೆ ಇದರಿಂದ ಭಾರಿ ಸಮಸ್ಯೆಯಾಗುತ್ತಿದ್ದು, ಬಿಬಿಎಂಪಿ ಅಧಿಕಾರಿಗಳು ಬೀದಿನಾಯಿಗಳ ಉಪಟಳಕ್ಕೆ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದರು.












Click it and Unblock the Notifications