ಬೆಂಗಳೂರು ಘನತ್ಯಾಜ್ಯ ಸಮಸ್ಯೆ: ಕಟ್ಟುನಿಟ್ಟಿನ ನಿಯಮ ಪಾಲನೆಗೆ ಬಿಬಿಎಂಪಿ ನಿರ್ಧಾರ
ಬೆಂಗಳೂರು, ಜನವರಿ 18: ನಗರದಲ್ಲಿ ರಸ್ತೆಗಳ ಬದಿ, ಪಾದಚಾರಿ ಮಾರ್ಗ, ಖಾಸಗಿ ಸ್ಥಳ ಸೇರಿದಂತೆ ಎಲ್ಲೆಂದರಲ್ಲಿ ಕಸ ಬಿಸಾಡುವವರಗೆ ಶಿಕ್ಷೆ ಹಾಗೂ ದಂಡ ವಿಧಿಸಬೇಕು. ಅದಕ್ಕಾಗಿ ಬಿಬಿಂಪಿಯು ತ್ಯಾಜ್ಯ ನಿರ್ವಹಣಾ ನಿಯಮಗಳು-2016 ಅನ್ನು ಸರಿಯಾಗಿ ಅನುಷ್ಠಾನಕ್ಕೆ ತನ್ನಿ. ನಂತರ ತ್ಯಾಜ್ಯ ಸಂಗ್ರಹಣೆಯಲ್ಲಿ ಮಾರ್ಪಾಡುಗಳನ್ನು ಮಾಡಿ ಎಂದು ನಿವೃತ್ತ ನ್ಯಾ. ಹಾಗೂ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (NGT)ದ ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷ ಸುಭಾಷ್ ಬಿ.ಆಡಿ ತಿಳಿಸಿದರು.
ನಗರದಲ್ಲಿ ಮಂಗಳವಾರ ಘನತ್ಯಾಜ್ಯ ನಿರ್ವಹಣಾ ನಿಯಮಗಳ ಕುರಿತು ಸಂವಾದ ಮತ್ತು ಸಾಮರ್ಥ್ಯ ಅಭಿವೃದ್ಧಿ ಕಾರ್ಯಗಾರ ನಡೆಯಿತು. ಈ ವೇಳೆ ಮಾತನಾಡಿದ ಅವರು, ನಗರವು ಸುಂದರ, ಉದ್ಯಾನ ನಗರಿಯಾಗಿರಬೇಕಾದರೆ ಸ್ವಚ್ಛತೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಈ ಸಂಬಂಧ ನಗರದಲ್ಲಿ ಸ್ವಚ್ಛತೆ ಕಾಪಾಡುವ ಸಲುವಾಗಿ ಜನಜಾಗೃತಿ ಮೂಡಿಸಬೇಕು. ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಪ್ರತಿ ಮನೆಯಲ್ಲೂ ಹಸಿ, ಒಣ ಹಾಗೂ ಸ್ಯಾನಿಟರಿ ವೇಸ್ಟ್ ಅನ್ನು ಪ್ರತ್ಯೇಕವಾಗಿ ವಿಂಗಡಿಸಿ ಕೊಡುವುದನ್ನು ಕಡ್ಡಾಯವಾಗಿ ರೂಢಿಸಿಕೊಳ್ಳಬೇಕು. ಬೀದಿ ಬದಿ ವ್ಯಾಪಾರಿಗಳು ಕೂಡಾ ಎರಡು ಬಿನ್ ಗಳನ್ನು ಇಟ್ಟು ಹಸಿ -ಒಣ ತ್ಯಾಜ್ಯವನ್ನು ಪ್ರತ್ಯೇಕಿಸಿ ಪೌರಕಾರ್ಮಿಕರಿಗೆ ಹಸ್ತಾಂತರಿಸಬೇಕು. ಇಷ್ಟೇ ಅಲ್ಲದೇ ಪ್ಲಾಸ್ಟಿಕ್ ಕವರ್ ಗಳ ಬದಲು ಕಾಟನ್ ಬ್ಯಾಗ್ ಬಳಕೆಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಹೊಸ ಬಡಾವಣೆಗಳಲ್ಲಿ ಶೇ. 5ರಷ್ಟು ಜಾಗ ಮೀಸಲು
ಹೊಸದಾಗಿ ಲೇಔಟ್ ನಿರ್ಮಾಣಕ್ಕಾಗಿ ನೀಡುವ ಅನುಮೋದನೆಯ ವೇಳೆಯೆ ಶೇ.5 ರಷ್ಟು ಪ್ರದೇಶವನ್ನು ಘನತ್ಯಾಜ್ಯ ನಿರ್ವಹಣೆಯ ವಿಕೇಂದ್ರಿಕೃತ ಚುಟುವಟಿಕೆಗಳಿಗೆ ಮೀಸಲಿಡಬೇಕೆಂದು ತ್ಯಾಜ್ಯ ನಿರ್ವಹಣಾ ನಿಯಮಗಳು-2016 ರಲ್ಲಿಯೇ ತಿಳಿಸಿದೆ. ಆದರೆ ಅದು ಪಾಲನೆ ಆಗುತ್ತಿಲ್ಲ. ಈ ಸಂಬಂಧ ಮುಂದಿನ ದಿನಗಳಲ್ಲಿ ಲೇಔಟ್ ಪ್ಲಾನ್ ಅನುಮೋದಿಸುವ ವೇಳೆ ಘನತ್ಯಾಜ್ಯ ನಿರ್ವಹಣೆಯ ವಿಕೇಂದ್ರಿಕೃತ ಚುಟುವಟಿಕೆಗಳಿಗೆ ಜಾಗ ಮೀಸಲಿಟ್ಟಿದ್ದರೆ ಮಾತ್ರ ಅನುಮೋದನೆ ನೀಡಬೇಕು.

ಬಿಡಿಎ ಮಾಸ್ಟರ್ ಪ್ಲಾನ್ ಏನು?
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)ವು 2031ರ ಮಾಸ್ಟರ್ ಪ್ಲಾನ್ ಸಿದ್ದಪಡಿಸುತ್ತಿದೆ. ಅದರಲ್ಲಿ ಸಿಎ ನಿವೇಶನ (CA site) ಮಾದರಿಯಲ್ಲಿಯೇ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳಲ್ಲಿಯೂ ವಿಕೇಂದ್ರೀಕೃತ ತ್ಯಾಜ್ಯ ಘಟಕಗಳಿಗೆ ನಿಗದಿತ ಪ್ರದೇಶವನ್ನು ಮೀಸಲಿಡಬೇಕು. ಇದರಿಂದ ಘನತ್ಯಾಜ್ಯ ನಿರ್ವಹಣೆಗೆ ಪರಿಹಾರ ಸಾಧ್ಯವಾಗಲಿದೆ. ಇಲ್ಲವಾದಲ್ಲಿ ಪ್ರಸಕ್ತ ಸಮಸ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಸೂಚಿಸಿದರು.

ತ್ಯಾಜ್ಯ ನಿರ್ವಹಣಾ ನಿಯಮಗಳು-2016 ಪಾಲಿಸಿ
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ತ್ಯಾಜ್ಯ ನಿರ್ವಹಣಾ ನಿಯಮಗಳು-2016 ಅನ್ನು ಸರಿಯಾಗಿ ಅಧ್ಯಯನ ಮಾಡಿ ಅದನ್ನು ಪಾಲಿಕೆ ವ್ಯಾಪ್ತಿಯಲ್ಲಿ ಅನುಷ್ಠಾನಕ್ಕೆ ತರುವಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಎಲ್ಲೆಂದರಲ್ಲಿ ಕಸ ಬಿಸಾಡುವವರಿಗೆ ಹೆಚ್ಚು ದಂಡ ವಿಧಿಸಬೇಕು. ಈ ಮೂಲಕ ಘನತ್ಯಾಜ್ಯ ನಿರ್ವಹಣೆ ನಿಯಮ ಪಾಲಿಸಬೇಕು ಎಂದು ಅಧಿಕಾರಿಗಳನ್ನು ಉದ್ದೇಶಿಸಿ ತಿಳಿಸಿದರು.
ಏಕ ಬಳಕೆಯ ಪ್ಲಾಸ್ಟಿಕ್ ಕುರಿತು ಬಿಬಿಎಂಪಿ ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಜೊತೆಗೆ ಪ್ಲಾಸ್ಟಿಕ್ ತಯಾರಿಕಾ ಮಳಿಗೆಗಳಿಗೆ ಭೇಟಿ ನೀಡಿ ಒಮ್ಮೆ ಬಳಸುವ ಪ್ಲಾಸ್ಟಿಕ್ ತಯಾರಿಸುತ್ತಿದ್ದರೆ ಅದನ್ನು ಜಪ್ತಿ ಮಾಡಿ ದಂಡ ವಿಧಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಸ್ಥಳಿಯವಾಗಿ ಟ್ರಾನ್ಸಫರ್ ಸ್ಟೇಷನ್ ತೆರೆಯಲು ಸಲಹೆ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಶ್ರೀನಿವಾಸುಲು ಅವರು, ತ್ಯಾಜ್ಯ ನಿರ್ವಹಣಾ ನಿಯಮಗಳ ಪ್ರಕಾರ ಕಸ ವಿಲೇವಾರಿಯಾದಾಗ ಮಾತ್ರ ನಗರದಲ್ಲಿ ಸ್ವಚ್ಛತೆ ಕಾಪಾಡಲು ಸಾಧ್ಯ. ಸ್ಥಳಿಯ ಪ್ರದೇಶದಲ್ಲಿ ದ್ವಿತೀಯ ಟ್ರಾನ್ಸಫರ್ ಸ್ಟೇಷನ್ ತೆರೆಯುವುದರಿಂದ ಕಸ ವಿಂಗಡಣೆಯಲ್ಲಿ ಸುಧಾರಣೆಗೆ ತರಬಹುದಾಗಿದೆ ಎಂದು ಸಲಹೆ ನೀಡಿದರು.

ಕಾರ್ಯಗಾರದ ಉದ್ದೇಶ ಹೀಗಿದೆ
ತ್ಯಾಜ್ಯ ನಿರ್ವಹಣಾ ನಿಯಮಗಳು-2016 ಅಂದರೆ, ಘನತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ, ಎಲೆಕ್ಟ್ರಾನಿಕ್ ತ್ಯಾಜ್ಯ, ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯ, ಬ್ಯಾಟರಿ ತ್ಯಾಜ್ಯ, ನೈರ್ಮಲ್ಯ ತ್ಯಾಜ್ಯ ಇತರೆ ತ್ಯಾಜ್ಯಗಳ ನಿರ್ವಹಣೆಯನ್ನು ನಿಯಮಗಳ ರೀತ್ಯಾ ಸಮರ್ಪಕವಾಗಿ ಮತ್ತು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಿದೆ.
ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರವು ಪರಿಸರ ಸಂರಕ್ಷಣೆಯ ಕುರಿತು ಹಲವಾರು ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಅದಕ್ಕಾಗಿ ಯೋಜನೆಗಳನ್ನು ರೂಪಿಸಿ ಅನುಷ್ಠಾನ ತರಲು ಅನುದಾನ ಸಹ ಹಂಚಿಕೆ ಮಾಡಿರುತ್ತದೆ. ಬೆಂಗಳೂರು ನಗರವನ್ನು ಸ್ವಚ್ಛ ಮತ್ತು ಸುಂದರವನ್ನಾಗಿಸಲು ಎಲ್ಲ ರೀತಿಯ ತ್ಯಾಜ್ಯ ನಿರ್ವಹಣಾ ನಿಯಮ ಅನುಷ್ಠಾನ ಗೊಳ್ಳಬೇಕಿದೆ. ಈನಿಟ್ಟಿನಲ್ಲಿ ಸಂವಾದದಲ್ಲಿ ಚರ್ಚೆಗಳು ನಡೆದವು.
ಸಭೆಯಲ್ಲಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಾ. ಹರೀಶ್ ಕುಮಾರ್, ಎಲ್ಲಾ ವಲಯ ಜಂಟಿ ಆಯುಕ್ತರು, ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಪರಮೇಶ್ವರಯ್ಯ, ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications