ಬೆಂಗಳೂರು ಹವಾಮಾನ ಚಿತ್ರಣ ಬದಲಿಸಲು ಸರ್ಕಾರ ಪ್ಲಾನ್: ಸಿಎಸಿ ಕೋಶಕ್ಕೆ 7 ಫೆಲೋಸ್ ನೇಮಕ
ಬೆಂಗಳೂರು, ಅಕ್ಟೋಬರ್ 14: ಸಿಲಿಕಾನ್ ಸಿಟಿ ಬೆಂಗಳೂರು ನಗರವು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ಪ್ರಮುಖ ನಗರವಾಗಿದೆ. ನಗರದ ಹವಾಮಾನನಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಸರ್ಕಾರ ಒಂದಷ್ಟು ಕ್ರಮ ಕೈಗೊಂಡಿದೆ. ಹಸಿರು ಮನೆ ಅನಿಲ(GHG) ಹೊರಸೂಸುವಿಕೆ ತಗ್ಗಿಸಲು, ಹವಾಮಾನದಿಂದ ಉಂಟಾಗುವ ಅಪಾಯಗಳಿಗೆ ನಗರದ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಲು ಬೆಂಗಳೂರು ಹವಾಮಾನ ಕ್ರಿಯೆ ಮತ್ತು ಸ್ಥಿತಿಸ್ಥಾಪಕತ್ವ ಯೋಜನೆ(BCAP) ಒಂದು ಮಹತ್ವಾಕಾಂಕ್ಷೆಯ ಸಮಗ್ರ ವಿಧಾನ ಆರಂಭಿಸಲಾಗಿದೆ.
ಬೆಂಗಳೂರು ಹವಾಮಾನದ ಒಳಿತಿಗಾಗಿ ಶ್ರಮಿಸುವ ಸರ್ಕಾರಿ ವ್ಯಾಪ್ತಿಯ 'ಹವಾಮಾನ ಕ್ರಿಯಾ ಯೋಜನೆ ಫೆಲೋಶಿಪ್' (CAC) ಗಾಗಿ 7 ಫೆಲೋಸ್ ನಿಯೋಜನೆ ಮಾಡಲಾಗಿದೆ ಎಂದು ಸೋಮವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾಹಿತಿ ನೀಡಿದೆ.

ಹೌದು, ಹವಾಮಾನ ಬದಲಾವಣೆ ಹಾಗೂ ನಾಗರೀಕರ ಸಮಸ್ಯೆಗಳನ್ನು ಪರಿಹರಿಸಲು ಹೊಸ ಆಲೋಚನೆ, ಕೌಶಲ್ಯ ಹಾಗೂ ನಾವೀನ್ಯತೆಗಳಿಂದ ನಗರದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹವಾಮಾನ ಕ್ರಿಯಾ ಕೋಶಕ್ಕೆ ಸಹಾಯ ಮಾಡಲು ಹಾಗೂ ಸಬಲಗೊಳಿಸುವ ಸಲುವಾಗಿ "ಹವಾಮಾನ ಕ್ರಿಯಾ ಯೋಜನೆ ಫೆಲೋಶಿಪ್" ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು.
ಆಹ್ವಾನದ ಮೇರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದವರೆಗೆ ಲಿಖಿತ ಪರೀಕ್ಷೆಗಳು, ಗುಂಪು ಚರ್ಚೆಗಳು ಮತ್ತು ಸಂದರ್ಶನಗಳನ್ನು ಒಳಗೊಂಡಿರುವ ಸ್ಪರ್ಧಾತ್ಮಕ ಮತ್ತು ಪಾರದರ್ಶಕ ಪ್ರಕ್ರಿಯೆ ನಡೆಸಲಾಯಿತು. ಅದರ ಆಧಾರದಲ್ಲಿ ಒಟ್ಟು 7 ಫೆಲೋಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇವರು ನವೆಂಬರ್‌ನಿಂದ ಬೆಂಗಳೂರಿನಲ್ಲಿ ಹವಾಮಾನ ಸುಸ್ಥಿತಿಯಲ್ಲಿರುವಂತೆ ಕೆಲಸ ಮಾಡಲಿದ್ದಾರೆ.
ಉದ್ಯಾನವನಗಳ ಸಮಯ ಪರಿಷ್ಕರಣೆಗೆ
ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರು ಜೂನ್ 2024ರಲ್ಲಿ ಉದ್ಯಾನವನಗಳ ಸಮಯವನ್ನು ಪರಿಷ್ಕರಿಸಲು ಸೂಚಿಸಿದ್ದರು. ಅದರಂತೆ ಇದೀಗ ನಗರದ ಉದ್ಯಾನವನಗಳು ಬೆಳಗ್ಗೆ 5 ರಿಂದ ರಾತ್ರಿ 10 ರವರೆಗೆ ತೆರೆದಿರಲಿವೆ ಎಂದು ಪಾಲಿಕೆ ಅಪ್ಡೇಟ್ ಮಾಹಿತಿ ನೀಡಿದೆ.

ಹವಾಮಾನದಲ್ಲಿ ಆಸಕ್ತರು ನೋಂದಣಿ ಮಾಡಿಕೊಳ್ಳಿ
ನಗರದ ಹವಾಮಾನ ಕುರಿತು ಆಸಕ್ತವುಳ್ಳವರು CAC ಸ್ನೇಹಿತರಾಗಬಹುದು. ಅದಕ್ಕಾಗಿ ನೀವು ನಮ್ಮೊಂದಿಗೆ ನಗರದಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಾಗುತ್ತಿದೆ. ಈ ಸಂಬಂಧ ಸಿಎಸಿಯಿಂದ ವಿವಿಧ ಸಂಸ್ಥೆಗಳಿಂದ ಸಹಯೋಗವನ್ನು ಆಹ್ವಾನಿಸಲಾಗಿದೆ. ಸದ್ಯ ಈವರೆಗೆ 9 ಪ್ರಸ್ತಾವನೆ ಸ್ವೀಕರಿಸಲಾಗಿದೆ. CACನ ಸ್ನೇಹಿತರಾಗಲು ನೀವು ಇಲ್ಲಿನ ಲಿಂಕ್ bit.ly/friendsofcac ಮೇಲೆ ಕ್ಲಿಕ್ ಮಾಡಿ ನೋಂದಣಿ ಮಾಡಿಕೊಳ್ಳಬೇಕು ಎಂದು ಪಾಲಿಕೆ ತಿಳಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಇದೇ ವರ್ಷ 2024ರ ಪೆಬ್ರವರಿಯಲ್ಲಿ BCAP ಅನ್ನು ಕಾರ್ಯಗತಗೊಳಿಸಲು ಸಂಸ್ಥಾರೂಪದ ಕಾರ್ಯವಿಧಾನದಲ್ಲಿ ಬೆಂಗಳೂರು ಹವಾಮಾನ ಕ್ರಿಯಾ ಕೋಶ(CAC)ವನ್ನು ಸ್ಥಾಪಿಸಲಾಯಿತು. ಇದಕ್ಕೆ ಪ್ರೀತಿ ಗೆಹ್ಲೋಟ್ ರವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮೇಲ್ವಿಚಾರಣೆಯಲ್ಲಿ ಈ ಕೋಶ ಮುಂದಿನ ನವೆಂಬರ್‌ನಿಂದ ಕೆಲಸ ಮಾಡಲಿದೆ.
ಪಾಲುದಾರಿಕೆ ಹೊಂದಿರುವ ಸಂಸ್ಥೆಗಳು
ಈ ಕೋಶದಲ್ಲಿ ಸರ್ಕಾರಿ ಇಲಾಖೆಗಳು, ಸಂಶೋಧನಾ ಸಂಸ್ಥೆಗಳು, ಸಿವಿಲ್ ಸೊಸೈಟಿ, ಉದ್ಯಮಗಳು ಸೇರಿದಂತೆ ವಿವಿಧ ಪಾಲುದಾರರೊಂದಿಗೆ ಸಮನ್ವಯ ಸಾಧಿಸುವ ಮೂಲಕ BCAP ಅನುಷ್ಠಾನ ತರುವಲ್ಲಿ ಕೋಶ ಪ್ರಮುಖ ಪಾತ್ರವಹಿಸಿದೆ. ಈ ಕೋಶವು ಹವಾಮಾನ ಕ್ರಮಗಳ ಪ್ರಗತಿಯ ಮೇಲ್ವಿಚಾರಣೆ, ಮೌಲ್ಯಮಾಪನ ಮತ್ತು ವರದಿ ಸಲ್ಲಿಸಲಿದೆ.
ಪ್ರತ್ಯೇಕ ಜಾಲತಾಣ
ಬೆಂಗಳೂರಿನಲ್ಲಿ ಹವಾಮಾನ ಕ್ರಿಯಾ ಕೋಶವು ನಿರಂತರವಾಗಿ ಅನೇಕ ಕಾರ್ಯಕ್ರಮ ನಡೆಸಲಿದೆ. ಹವಾಮಾನ ಕ್ರಿಯಾ ಯೋಜನೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಪಾಲಿಕೆ ವೆಬ್ಸೈಟ್ನಲ್ಲಿ CAC ಗಾಗಿ ಹೊಸ ಮೈಕ್ರೋ ವೆಬ್‌ಸೈಟ್(https://apps.bbmpgov.in/bcap/) ತೆರೆಯಲಾಗಿದ್ದು, ಈ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ನೀವು ಈ ಲಿಂಕ್ ಮೇಲೆ ಕ್ಲಿಕ್ ಮಾಡಬಹುದು ಎಂದು ಬಿಬಿಎಂಪಿ ತಿಳಿಸಿದೆ.












Click it and Unblock the Notifications