ಬೆಂಗಳೂರಿನ ಬೀದಿಬದಿ ವ್ಯಾಪಾರಿಗಳಿಗೆ ಸಿಹಿಸುದ್ದಿ ಕೊಟ್ಟ ಬಿಬಿಎಂಪಿ; ಸಿಗಲಿದೆ ವಾಹನ!
ಬೀದಿಬದಿಯ ವ್ಯಾಪಾರಿಗಳಿಗೆ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ದೊಡ್ಡ ಸಿಹಿಸುದ್ದಿಯನ್ನೇ ಕೊಟ್ಟಿದೆ. ಬಿಬಿಎಂಪಿಯು ಬೆಂಗಳೂರಿನಲ್ಲಿ ವಿವಿಧ ಸೌಲಭ್ಯಗಳನ್ನು ಕಲ್ಪಿಸುವುದು ಮಾತ್ರವಲ್ಲ. ಜನರಿಗೆ ಸೋಷಿಯಲ್ ವೆಲ್‌ಫೇರ್ ಸ್ಕೀಂಗಳನ್ನು ಪರಿಚಯಿಸಿದೆ. ಇದೀಗ ಬಿಬಿಎಂಪಿಯ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗೆ ಒಂದು ವಾರದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಅಲ್ಲದೇ ಬೀದಿಬದಿಯ ವ್ಯಾಪಾರಿಗಳಿಗೆ ಬಿಗ್‌ಗುಡ್‌ನ್ಯೂಸ್ ಕೊಟ್ಟಿದೆ.
ಬೆಂಗಳೂರಿನಲ್ಲಿ ಸಾವಿರಾರು ಜನ ಬೀದಿ ಬದಿ ವ್ಯಾಪಾರಿಗಳು ಇದ್ದಾರೆ. ಈ ಬೀದಿ ಬದಿಯ ವ್ಯಾಪಾರಿಗಳಿಗೆ ಬಿಬಿಎಂಪಿಯು ವಿವಿಧ ಸ್ಕೀಂಗಳ ಮೂಲಕ ಹೆಲ್ಪ್ ಮಾಡುತ್ತಿದೆ. ಇದೀಗ ರೋಡ್‌ಸೈಡ್ ವ್ಯಾಪಾರಿಗಳಿಗೆ ಇ -ವೆಂಡಿಗ್ ವೈಹಿಕಲ್ ಕೊಡಲು ಮುಂದಾಗಿದೆ.

ಬೀದಿ ಬದಿ ವ್ಯಾಪಾರಿಗಳಿಗೆ ಇ-ವೆಂಡಿಗ್ ವಾಹನ:
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನಿರ್ದೇಶನದಂತೆ ಪಾಲಿಕೆ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡುತ್ತಿರುವ ಬೀದಿ ಬದಿ ವ್ಯಾಪಾರಿಗಳಿಗೆ ಇ-ವೆಂಡಿಗ್ ವಾಹನ ನೀಡಲು ಪಾಲಿಕೆ ಮುಂದಾಗಿದೆ. ಈ ಬಗ್ಗೆ ಚರ್ಚೆ ಮಾಡಿ ಅಭಿಪ್ರಾಯ ತೆಗೆದುಕೊಂಡು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸುವುದಾಗಿ ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆನಂತರ ಆಯ್ಕೆ ಮಾಡಿ ವಿವಿಧ ಬಗೆಯ ಇ-ವೆಂಡಿಂಗ್ ವಾಹನಗಳನ್ನು ವ್ಯಾಪಾರಿಗಳಿಗೆ ಯಾವ ರೀತಿ ಅವಶ್ಯಕತೆ ಇದೆಯೋ ಆ ರೀತಿ ಸಿದ್ಧಪಡಿಸಿ ವ್ಯಾಪಾರಿಗಳಿಗೆ ನೀಡಲಾಗುವುದು. ವ್ಯಾಪಾರಿಗಳ ವೈಯಕ್ತಿಕ ಬಂಡವಾಳ ಹಾಗೂ ಬಿಬಿಎಂಪಿ ಅನುದಾನ ಸೇರಿ ಇ-ವೆಂಡಿಂಗ್ ವಾಹನಗಳನ್ನು ಅರ್ಹ ಫಲಾನುಭವಿಗಳಿಗೆ ನೀಡುವುದಾಗಿ ಪಾಲಿಕೆ ಹೇಳಿದೆ.
ವಿವಿಧ ಬಗೆಯ ಮಾರಾಟಗಾರರಿಗೆ ಇ-ವೆಂಡಿಗ್ ವಾಹನ:
ಬೆಂಗಳೂರಿನಲ್ಲಿ ವಿವಿಧ ಬಗೆಯ ಮಾರಾಟಗಾರರು ಇದ್ದಾರೆ. ಅವರಿಗೆಲ್ಲ ವಾಹನ ಕೊಡಲು ಪಾಲಿಕೆ ಮುಂದಾಗಿದೆ. ಅದರಲ್ಲಿ ಕೆಲವು ಪ್ರಮುಖ ವ್ಯಾಪಾರಿಗಳ ಲಿಸ್ಟ್ ಸಹ ಮಾಡಲಾಗಿದೆ. ತರಕಾರಿ ಮಾರಾಟ ಮಾಡುವವರು,ಹಣ್ಣು, ಪ್ಲಾಸ್ಟಿಕ್ ವಸ್ತುಗಳ ಮಾರಾಟ, ಮಣ್ಣಿನ ಮಡಕೆ, ಬಳೆ, ಹೂ, ಟಾಯ್ಸ್, ಚಪ್ಪಲಿ ಮಾರಾಟಗಾರರು, ಕಾಸ್ಮೆಟಿಕ್ಸ್, ಗಾಗಲ್ಸ್ , ಸೆಕೆಂಡ್ ಹ್ಯಾಂಡ್ ಬುಕ್ಸ್ ಮಾರಾಟಗಾರರು, ಪೇಂಟರ್ಸ್/ಪೇಂಟಿಂಗ್ಸ್ ಮಾರಾಟಗಾರರು, ಪ್ರಾಚೀನ ವಸ್ತುಗಳ ಮಾರಾಟಗಾರರು, ಬೆಲ್ಟ್, ವಾಚ್ ಮಾರಾಟಗಾರರು, ಫೋನ್ , ಮಸಾಲೆ ಪದಾರ್ಥಗಳ ಮಾರಾಟ, ಟೀ, ಪಾನಿ ಪುರಿ ಸ್ಟಾಲ್‌ಗಳು, ವಡಾಪಾವ್/ಸ್ಯಾಂಡ್‌ವಿಚ್/ಪಿಜ್ಜಾ, ಚೈನೀಸ್ ಫುಡ್, ಸೋಡಾ, ಮ್ಯಾಗಿ ಸೇರಿದಂತೆ ವಿವಿಧ ಮಾರಾಟಗಾರರಿಗೆ ಇ-ವೆಂಡಿಗ್ ವಾಹನ ನೀಡುವುದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೇಳಿದೆ.
ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ: ಇನ್ನು ಬೆಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಯನ್ನು ನಡೆಸಬೇಕು ಎಂದು ಬೀದಿ ಬದಿ ವ್ಯಾಪಾರಿಗಳು ಆಗ್ರಹಿಸುತ್ತಿದ್ದಾರೆ. ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ಅಧಿನಿಯಮ 2014 ಹಾಗೂ ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ(ಜೀವನೋಪಾಯ ಸಂರಕ್ಷಣೆ, ಬೀದಿ ಬದಿ ವ್ಯಾಪಾರದ ನಿಯಂತ್ರಣ ಮತ್ತು ಪರವಾನಗಿ) ಯೋಜನೆ 2020ರಂತೆ ಪಾಲಿಕೆಯಲ್ಲಿ ನಗರ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಯನ್ನು ನಡೆಸುತ್ತಿರುವುದಾಗಿಯೂ ಪಾಲಿಕೆ ಹೇಳಿದೆ.
ವಲಯವಾರು ಸಮೀಕ್ಷೆ ಕೆಲಸ ಈಗಾಗಲೇ ಪ್ರಾರಂಭವಾಗಿದೆ. ಬೆಂಗಳೂರಲ್ಲಿ 600ಕ್ಕೂ ಹೆಚ್ಚು ಜನರ ಮೂಲಕ ಸಮೀಕ್ಷೆ ಮಾಡಲಾಗುತ್ತಿದೆ. ಈಗಾಗಲೇ ಬೆಂಗಳೂರಲ್ಲಿ 12495 ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳನ್ನು ಎಲ್ಲಾ ವಲಯಗಳಲ್ಲಿ ಸಮೀಕ್ಷೆಯ ಮೂಲಕ ಗುರುತಿಸಲಾಗಿದೆ ಎಂದು ಬಿಬಿಎಂಪಿಯ ಕಲ್ಯಾಣ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications