ಅಮೃತ್ ಯೋಜನೆಯಡಿ ಅಭಿವೃದ್ಧಿಗೊಳ್ಳುತ್ತಿವೆ ನಗರದ 10 ಉದ್ಯಾನಗಳು
ಬೆಂಗಳೂರು, ಮೇ 24: ಬಿಬಿಎಂಪಿಯು ನಗರದ ಉದ್ಯಾನಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ. ಅದರ ಹಿನ್ನೆಲೆಯಲ್ಲಿ ಕೇಂದ್ರದ ಅಮೃತ್ ಯೋಜನೆಯ ಅನುದಾನದಲ್ಲಿ ನಗರದ 10 ಉದ್ಯಾನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈಗಾಗಲೇ ಇದಕ್ಕೆ ಟೆಂಡರ್ ಪ್ರಕ್ರಿಯೆ ಬಹುತೇಕ ಅಂತಿಮಗೊಂಡಿದೆ.
ಕೇಂದ್ರ ಸರ್ಕಾರವು 2015ರಲ್ಲಿ 10 ಉದ್ಯಾನಗಳ ಅಭಿವೃದ್ಧಿಗೆ ಅಮೃತ್ ಯೋಜನೆಯಡಿ 20 ಕೋಟಿ ರೂ ಅನುದಾನವನ್ನು ಮಂಜೂರು ಮಾಡಿತ್ತು. ಆದರೆ ನಾನಾ ಕಾರಣಗಳಿಂದ ಅಭಿವೃದ್ಧಿ ಕಾರ್ಯ ನೆನಗುದಿಗೆ ಬಿದ್ದಿತ್ತು.
ಸದ್ಯ ಮೂರು ವರ್ಷಗಳ ಬಳಿಕ ಉದ್ಯಾನಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಉದ್ಯಾನದಲ್ಲಿ ಜಿಮ್, ಕಾಲ್ನಡಿಗೆದಾರರ ಪಥ, ಮಕ್ಕಳ ಪೀಠೋಪಕರಣಗಳ ಅಳವಡಿಕೆ ಮತ್ತು ತಂತಿ ಮೇಲಿ ಅಳವಡಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ಉದ್ಯಾನಗಳ ಅಭಿವೃದ್ಧಿಯ ಟೆಂಡರ್ ಪಡೆದಿರುವ ಗುತ್ತಿಗೆದಾರರಿಗೆ ಜೂನ್ ಮಮೊದಲ ವಾರದಲ್ಲಿ ಕಾರ್ಯಾದೇಶ ನೀಡಲಾಗುತ್ತದೆ. ಪಾಲಿಕೆಯು 2017ರ ಅಂತ್ಯದಲ್ಲೇ ಟೆಂಡರ್ ಆಹ್ವಾನಿಸಿ, ಕಳೆದ ಫೆಬ್ರವರಿಯಲ್ಲಿ ಅಂತಿಮಗೊಳಿಸಿತ್ತು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದುದರಿಂದ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿರಲಿಲ್ಲ. ಪ್ರತಿ ಉದ್ಯಾನದ ಸಮಗ್ರ ಅಭಿವೃದ್ಧಿಗೆ 2.50 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಈ ಕಾಮಗಾರಿಯನ್ನು ವರ್ಷಾಂತ್ಯದೊಳಗೆ ಪೂರೈಸಲಾಗುತ್ತದೆ ಎಂದು ಪಾಲಿಕೆ ಉಪ ನಿರ್ದೇಶಕರು ತಿಳಿಸಿದ್ದಾರೆ.
ಯಾವ್ಯಾಯ ಪಾರ್ಕ್ ಅಭಿವೃದ್ಧಿ: ಉತ್ತರಹಳ್ಳಿ ಬಳಿಯ ಪೂರ್ಣಪ್ರಜ್ಞಾ ಲೇಔಟ್ ಪಾರ್ಕ್, ವನ್ನಾರ್ ಪೇಟೆ ವಾರ್ಡ್ ನ ನೆಹರು ಬ್ಲಾಕ್‌ನಲ್ಲಿರುವ ಉದ್ಯಾನ, ಆಂಧ್ರಹಳ್ಳಿ ಕೆರೆ ಉದ್ಯಾನ, ಮಲ್ಲಸಂದ್ರ ಗುಟ್ಟೆ ಪಾರ್ಕ್, ಬೈರತಿ ಪಾರ್ಕ್, ಜಕ್ಕೂರು ಬಳಿಯ ವಿನ್‌ಫೀಲ್ಡ್ ಲೇಔಟ್ ಪಾರ್ಕ್, ಗೋವಿಂದರಾಜನಗರ ಕನಕದಾಸ ಪಾರ್ಕ್, ಕೋರಮಂಗಲದ ಮೇಸ್ತ್ರಿ ಲೇಔಟ್ ಉದ್ಯಾನ, ರಾಜಾಜಿನಗರದ ಮಹದೇವ ಬನ್ಕರ್ ಉದ್ಯಾನ, ಬೈರತಿ ಬಳಿಯ ಗುಂಡುತೋಪು ಉದ್ಯಾನವನ್ನು ಅಭಿವೃದ್ಧಿಪಡಿಸಲಾಗುತ್ತದೆ.












Click it and Unblock the Notifications