ಬೆಂಗಳೂರು:ಬಿಬಿಎಂಪಿ ಆಯುಕ್ತ ಮಂಜುನಾಥ್ ಸೇರಿ ಹಲವರಿಗೆ ಕೊರೊನಾ ಲಸಿಕೆ
ಬೆಂಗಳೂರು,ಫೆಬ್ರವರಿ 10: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿ ಹಲವು ಸಿಬ್ಬಂದಿ ಕೊರೊನಾ ಲಸಿಕೆ ಹಾಕಿಸಿಕೊಂಡರು.
ಬಿಬಿಎಂಪಿ ಕೇಂದ್ರ ಕಚೇರಿಯ ಡಾ.ರಾಜ್ ಕುಮಾರ್ ಗಾಜಿನ ಮನೆ ಸಭಾಂಗಣದಲ್ಲಿ ಮಂಗಳವಾರ ಪಾಲಿಕೆಯ ಆಡಳಿತಾಧಿಕಾರಿ ಗೌರವ್ ಗುಪ್ತ ಅವರೊಂದಿಗೆ ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಮೂಲಕ 2ನೇ ಹಂತದ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು.
ವದಂತಿಗಳ ನಂಬಿ ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಸಿಬ್ಬಂದಿಗಳಿಗೆ ಪ್ರೇರಣೆ ಹಾಗೂ ಅಭಯ ನೀಡುವ ಸಲುವಾಗಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಮಂಗಳವಾರ ಲಸಿಕೆ ಹಾಕಿಸಿಕೊಂಡರು.

ಕೊರೊನಾ ಮುಂಚೂಣಿ ಹೋರಾಟಗಾರರ ಕುರಿತು ಮಾತನಾಡಿ, ಭಾರತದಿಂದ ಇತರೆ ರಾಷ್ಟ್ರಗಳು ಲಸಿಕೆಗಾಗಿ ಬೇಡಿಕೆಗಳನ್ನು ಇಡುತ್ತಿವೆ. ದೇಶದಲ್ಲಿ ಉಚಿತ ದರದಲ್ಲಿ ಲಸಿಕೆ ನೀಡುತ್ತಿರುವಾಗ ಇಂತಹ ಅವಕಾಶವನ್ನು ಜನರು ಬಳಕೆ ಮಾಡಿಕೊಳ್ಳಬೇಕು. ಎಲ್ಲಾ ನಿಯಮಗಳನ್ನೂ ಅನುಸರಿಸಿ, ಲಸಿಕೆ ಪಡೆದುಕೊಂಡು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಭಯ ಪಡಬಾರದು. ಲಸಿಕೆ ಹಾಕಿಸಿಕೊಳ್ಳುವ ಮೂಲಕ ಇತರರಿಗೆ ಪ್ರೇರಣೆ ಹಾಗೂ ಉದಾಹರಣೆಯಾಗಬೇಕು. ಸಂದೇಹಗಳನ್ನು ಪರಿಹರಿಸಬೇಕು. ಲಸಿಕೆ ಪಡೆಯುವಂತೆ ಯಾರಿಗೂ ಬಲವಂತ ಮಾಡಬಾರದು ಎಂದರು.












Click it and Unblock the Notifications