ನಟ ಅಜಿತ್ ಕುಮಾರ್ ತಾಯಿಯ ಅಂತಿಮ ದರ್ಶನಕ್ಕೂ ಒಟ್ಟಿಗೆ ಬಂದ ಸಿಎಂ ವಿಜಯ್-ನಟಿ ತ್ರಿಶಾ, ವಿಡಿಯೋ ವೈರಲ್
ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ (Ajith Kumar) ಅವರ ತಾಯಿ ಮೋಹಿನಿ ಮಣಿ (89) ಅವರು ಚೆನ್ನೈನಲ್ಲಿ ಶನಿವಾರ ನಿಧನರಾಗಿದ್ದಾರೆ. ತಾಯಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ದುಬೈನಲ್ಲಿದ್ದ ಅಜಿತ್ ಕುಮಾರ್ ತಕ್ಷಣವೇ ಚೆನ್ನೈಗೆ ಮರಳಿದ್ದಾರೆ. ತಾಯಿಯನ್ನು ಕಳೆದುಕೊಂಡು ದುಃಖದಲ್ಲಿರುವ ಅಜಿತ್ ಮತ್ತು ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ಮುಖಂಡರು ಅವರ ನಿವಾಸಕ್ಕೆ ಭೇಟಿ ನೀಡುತ್ತಿದ್ದಾರೆ. ಅಚ್ಚರಿ ಎಂದರೆ ಅಜಿತ್ ಕುಮಾರ್ ಅವರ ನಿವಾಸಕ್ಕೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಹಾಗೂ ನಟಿ ತ್ರಿಶಾ ಕೃಷ್ಣನ್ ಒಟ್ಟಿಗೆ ಭೇಟಿದ್ದಾರೆ.
ಭಾರೀ ಭದ್ರತೆಯಲ್ಲಿ ಅಜಿತ್ ಮನೆಗೆ ವಿಜಯ್
ನಟ ಹಾಗೂ ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ (Vijay) ಅವರು ಶನಿವಾರ ಅಜಿತ್ ಕುಮಾರ್ ಅವರ ಚೆನ್ನೈ ನಿವಾಸಕ್ಕೆ ಭೇಟಿ ನೀಡಿ ಮೃತರ ಆತ್ಮಕ್ಕೆ ಗೌರವ ನಮನ ಸಲ್ಲಿಸಿದರು. ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಅಜಿತ್ ನಿವಾಸದ ಹೊರಗೆ ಭಾರೀ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ವಾಹನದಿಂದ ಕೆಳಗಿಳಿದ ಸಿಎಂ ವಿಜಯ್ ಅವರು, ತಾಯಿಯನ್ನು ಕಳೆದುಕೊಂಡು ಭಾವುಕರಾಗಿದ್ದ ಅಜಿತ್ ಅವರನ್ನು ಅಪ್ಪಿಕೊಂಡು ಸಾಂತ್ವನ ಹೇಳಿದರು. ನಂತರ ಅವರ ಕುಟುಂಬದವರೊಂದಿಗೆ ಕೆಲಕಾಲ ಕಳೆದು ಧೈರ್ಯ ತುಂಬಿದರು.

ವಿಜಯ್ ಅವರ ಭೇಟಿಯ ಬೆನ್ನಲ್ಲೇ ನಟಿ ತ್ರಿಶಾ ಕೃಷ್ಣನ್ (Trisha Krishnan) ಕೂಡ ಅಜಿತ್ ನಿವಾಸಕ್ಕೆ ಆಗಮಿಸಿದ್ದರು. ಅಜಿತ್ ಅವರ ತಾಯಿಗೆ ಅಂತಿಮ ನಮನ ಸಲ್ಲಿಸಿ, ಕುಟುಂಬದ ಸದಸ್ಯರಿಗೆ ತಮ್ಮ ಸಂತಾಪವನ್ನು ಸೂಚಿಸಿದರು. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಕೆಲವು ವಿಡಿಯೋಗಳ ಪ್ರಕಾರ ವಿಜಯ್ ಮತ್ತು ತ್ರಿಶಾ ಒಟ್ಟಿಗೆ ಬಂದಂತೆ ಕಂಡರೆ, ಇನ್ನು ಕೆಲವು ದೃಶ್ಯಗಳಲ್ಲಿ ಇಬ್ಬರೂ ಪ್ರತ್ಯೇಕ ಕಾರುಗಳಲ್ಲಿ ನಿಮಿಷಗಳ ಅಂತರದಲ್ಲಿ ಅಜಿತ್ ಮನೆಗೆ ತಲುಪಿದ್ದಾರೆ ಎನ್ನಲಾಗಿದೆ. ಈ ವೈರಲ್ ವಿಡಿಯೋ ಅವರಿಬ್ಬರ ನಡುವಿನ ಸಂಬಂಧದ ವದಂತಿಗಳಿಗೆ ಮತ್ತೆ ಪುಷ್ಟಿ ನೀಡುತ್ತಿದೆ.
ತಮಿಳು ಚಿತ್ರರಂಗದ ಸ್ಟಾರ್ ನಟ ಹಾಗೂ ರಾಜಕಾರಣಿ ದಳಪತಿ ವಿಜಯ್ ಮತ್ತು ಖ್ಯಾತ ನಟಿ ತ್ರಿಶಾ ಕೃಷ್ಣನ್ ನಡುವಿನ ಬಾಂಧವ್ಯದ ಕುರಿತಾದ ಗಾಸಿಪ್‌ಗಳು ಮತ್ತು ವದಂತಿಗಳು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ವಿಜಯ್ ಅವರು ತಮ್ಮ ಪತ್ನಿ ಸಂಗೀತ ಅವರಿಂದ ದೂರವಾಗುತ್ತಿದ್ದಾರೆ ಮತ್ತು ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಹರಡಿದಾಗ, ಅದಕ್ಕೆ ತ್ರಿಶಾ ಅವರೇ ಕಾರಣ ಎಂಬ ಉಹಾಪೋಹಗಳನ್ನು ಹರಿದಾಡಿತ್ತು.
Tamilnadu @CMOTamilnadu Joseph Vijay paid his respects to Ajith Kumar sir and his family following the passing of his beloved mother. A heartfelt gesture of condolence and support during this difficult time#AjithKumar Sir #CMJosephVijay #Vijay #AK pic.twitter.com/c3hiC6aeqH
— Sillarai Siruvar (@SillaraiSiruvar) May 30, 2026
ನಿದ್ರೆಯಲ್ಲೇ ಕೊನೆಯುಸಿರೆಳೆದ ಮೋಹಿನಿ ಮಣಿ
ಅಜಿತ್ ಕುಮಾರ್ ಅವರ ತಾಯಿ ಮೋಹಿನಿ ಮಣಿ ಅವರು ಶನಿವಾರ ಮುಂಜಾನೆ ಚೆನ್ನೈನ ತಮ್ಮ ನಿವಾಸದಲ್ಲಿ ನಿದ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಅಜಿತ್ ಅವರ ತಂದೆ ನಿಧನರಾಗಿದ್ದರು. ತಾಯಿಯ ಅಗಲಿಕೆಯ ಬಳಿಕ ಅಜಿತ್ ಕುಮಾರ್ ಅವರ ಸಹೋದರರಾದ ಅನೂಪ್ ಕುಮಾರ್, ಅಜಿತ್ ಕುಮಾರ್ ಮತ್ತು ಅನಿಲ್ ಕುಮಾರ್ ಜಂಟಿ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
"ನಮ್ಮ ತಾಯಿ ಮೋಹಿನಿ ಮಣಿ ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಶನಿವಾರ ಮುಂಜಾನೆ ಅವರು ನಿದ್ರೆಯಲ್ಲೇ ಶಾಂತಿಯುತವಾಗಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರಿಗೆ ಉತ್ತಮ ಚಿಕಿತ್ಸೆ ನೀಡಿದ ವೈದ್ಯಕೀಯ ಸಿಬ್ಬಂದಿಗೆ ನಾವು ಕೃತಜ್ಞರಾಗಿದ್ದೇವೆ. ತಾಯಿಯ ಅಂತ್ಯಕ್ರಿಯೆಯು ಕೇವಲ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಅತ್ಯಂತ ಖಾಸಗಿಯಾಗಿ ನಡೆಯಲಿದೆ. ಪೋಷಕರನ್ನು ಕಳೆದುಕೊಂಡ ದುಃಖ ಏನೆಂಬುದು ಎಲ್ಲರಿಗೂ ಗೊತ್ತು. ಹಾಗಾಗಿ ನಮ್ಮ ಕುಟುಂಬದ ಗೌಪ್ಯತೆಯನ್ನು ಗೌರವಿಸಿ, ನಾವಿಂದು ಶಾಂತಿಯುತವಾಗಿ ದುಃಖಿಸಲು ಎಲ್ಲರೂ ಸಹಕರಿಸಬೇಕಾಗಿ ಕೋರುತ್ತೇವೆ" ಎಂದು ತಿಳಿಸಿದ್ದಾರೆ. ಅಜಿತ್ ತಾಯಿಯ ನಿಧನಕ್ಕೆ ಇಡೀ ದಕ್ಷಿಣ ಭಾರತದ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.













Click it and Unblock the Notifications