E - Khata: ಆಸ್ತಿದಾರರಿಗೆ ಇ - ಖಾತಾದಲ್ಲಿ ಮುಗಿಯದ ಗೊಂದಲ ಬಿಬಿಎಂಪಿ ಹೇಳಿದ್ದೇನು ?
E - Khata: ಬೆಂಗಳೂರಿನಲ್ಲಿ ಇ - ಖಾತಾಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುತ್ತಿಲ್ಲ. ಇಲ್ಲವೇ ಇ ಖಾತಾದಲ್ಲಿ ಇನ್ನೂ ಕೆಲವೊಂದು ಆಸ್ತಿದಾರರಲ್ಲಿ ಗೊಂದಲ ಇದೆ ಎನ್ನುವ ವಿಚಾರವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಪರೋಕ್ಷವಾಗಿ ಒಪ್ಪಿಕೊಂಡಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತಾ ಸಹಾಯವಾಣಿಗೆ ಸಂಬಂಧಿಸಿದಂತೆ ಪ್ರತಿನಿತ್ಯ 1000 ಸಾರ್ವಜನಿಕರು ಇನ್ನೂ ಕರೆ ಮಾಡುತ್ತಿದ್ದಾರೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರಕಟಣೆ ತಿಳಿಸಿದೆ.
ಬಿಬಿಎಂಪಿ ಇ-ಖಾತಾ ಸಹಾಯವಾಣಿ 94806 83695ಗೆ ಪ್ರತಿದಿನ ಸುಮಾರು 1000 ನಾಗರಿಕರ ಕರೆಗಳಿಗೆ ಇ-ಖಾತಾ ಸಹಾಯವಾಣಿ ಪ್ರತಿಕ್ರಿಯೆ ನೀಡುತ್ತಿದೆ. ಹೆಚ್ಚಿನ ಕರೆಗಳು ಮಾಹಿತಿ ಪಡೆಯುವ ಕರೆಗಳಾಗಿವೆ ಎಂದು ಬಿಬಿಎಂಪಿ ಹೇಳಿದೆ. ಬೆಂಗಳೂರಿನಲ್ಲಿ ಆಸ್ತಿಗಳ ಖರೀದಿ ಹಾಗೂ ಮಾರಾಟದಲ್ಲಿ ಯಾವುದೇ ಲೋಪ|ವಾಗಬಾರದು ಎನ್ನುವ ಉದ್ದೇಶದಿಂದ ಇ - ಖಾತಾ ಪರಿಚಯಿಸಲಾಗಿದೆ. ಅಲ್ಲದೇ ಎಲ್ಲಾ ಆಸ್ತಿದಾರರಿಗೂ ಇ - ಖಾತಾ ಕಡ್ಡಾಯ ಮಾಡಲಾಗಿದೆ. ಆದರೆ ಇದರಲ್ಲಿನ ಗೊಂದಲಗಳು ಇನ್ನೂ ಮುಗಿಯುತ್ತಿಲ್ಲ ಎಂದೇ ಹೇಳಲಾಗುತ್ತಿದೆ.

ಇನ್ನು ಇ - ಖಾತಾಗೆ ಸಂಬಂಧಿಸಿದಂತೆ ಯಾವುದೇ ದೂರನ್ನು ಪರಿಹರಿಸಬೇಕಾದರೆ ಅಥವಾ ಮೇಲ್ದರ್ಜೆಗೆ ಕಳಿಸಬೇಕಾದರೆ, ಸಂಬಂಧಿತ ಅಧಿಕಾರಿಗಳಿಗೆ ಆ ದೂರುಗಳನ್ನು ಕಳುಹಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಸಹಾಯವಾಣಿ ದೂರಿನ ವಿಚಾರದಲ್ಲಿ ಆಂತರಿಕವಾಗಿ ಅನುಸರಣೆ ಮಾಡಲಾಗುತ್ತದೆ. ಕಂದಾಯ ವಿಭಾಗದ ವಿಶೇಷ ಆಯುಕ್ತರು ಪ್ರತಿದಿನವೂ ಬಾಕಿ ಇರುವ ಆಸ್ತಿದಾರರ ಅಥವಾ ಇ ಖಾತಾದಾರರ ದೂರಿನ ಕುರಿತು ಎಲ್ಲಾ ಕಚೇರಿಗಳ ಪರಿಶೀಲನೆ ನಡೆಸುತ್ತಾರೆ.
ಪರಿಹರಿಸಲಾಗಿದೆ ಎಂದು ಘೋಷಿಸಲಾದ ಪ್ರತಿಯೊಂದು ದೂರನ್ನು, ದೂರು ಸಲ್ಲಿಸಿದ ಸಾರ್ವಜನಿಕರೊಂದಿಗೆ ಪರಿಶೀಲಿಸಲಾಗುತ್ತದೆ ಮತ್ತು ಅಲ್ಲದೇ ಜನರು ಈ ವಿಚಾರದಲ್ಲಿ ತೃಪ್ತರಾಗದಿದ್ದಲ್ಲಿ ಸಹಾಯವಾಣಿಯಿಂದ ದೂರನ್ನು ಮರು ಸ್ಥಾಪಿಸಲಾಗುತ್ತದೆ. ಇನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೇವಲ 124 ದೂರುಗಳು ಮಾತ್ರ ಬಾಕಿಯಿದೆ. ಆದುದರಿಂದ ಎಲ್ಲ ಸಾರ್ವಜನಿಕರು ಇ-ಖಾತಾ ಸಂಬಂಧಿತ ಯಾವುದೇ ವಿಷಯಗಳಿಗೆ ಬಿಬಿಎಂಪಿ ಕಚೇರಿಗಳಿಗೆ ಹೋಗದೇ ಸಹಾಯವಾಣಿಯನ್ನು ಸಂಪರ್ಕಿಸಲು ವಿನಂತಿಸಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎ-ಖಾತಾಗೆ ಶೀಘ್ರ ಆನ್ ಲೈನ್ ವ್ಯವಸ್ಥೆ: ಇನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎ-ಖಾತಾಗಳನ್ನು ನೀಡುವ ಸಲುವಾಗಿ ಕರ್ನಾಟಕ ಸರ್ಕಾರವು ಆದೇಶದ ಹೊರಡಿಸಿದೆ. ಅದರಂತೆ, ಆಸ್ತಿದಾರರು ಎ-ಖಾತಾಗೆ ಅರ್ಜಿ ಸಲ್ಲಿಸುವ ಸಲುವಾಗಿ ಶೀಘ್ರ ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಬಿಬಿಎಂಪಿಯ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ತಿಳಿಸಿದ್ದಾರೆ.












Click it and Unblock the Notifications