ಬೆಂಗಳೂರಲ್ಲಿ ಕೆರೆ ಒತ್ತುವರಿ ಮಾಡಿ ವಿಲ್ಲಾಗಳಿಗೆ ದಾರಿ ಮಾಡಿತೇ ಬಿಬಿಎಂಪಿ, ಪಾಲಿಕೆ ಹೇಳಿದ್ದೇನು ?
ಬೆಂಗಳೂರಿನಲ್ಲಿ ಕೆರೆಗಳ ಒತ್ತುವರಿಗೆ ಸಂಬಂಧಿಸಿದಂತೆ ದೂರುಗಳು ಆಗಾಗ ಬರುವುದು ಸಾಮಾನ್ಯ. ಬೆಂಗಳೂರಿನಲ್ಲಿ ಸಾವಿರಾರು ಕೆರೆಗಳಿಂದ ಇದೀಗ ಕೆರೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರಭಾವಿಗಳೇ ಕೆರೆಯನ್ನು ನಗರದ ಹಲವು ಭಾಗದಲ್ಲಿ ಒತ್ತುವರಿ ಮಾಡಿಕೊಂಡಿರುವುದರಿಂದ ಒತ್ತುವರಿ ತೆರವಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಿಂದೇಟು ಹಾಕುತ್ತಿದೆ ಎನ್ನುವ ಆರೋಪವೂ ಇದೆ. ಆದರೆ, ಈ ನಡುವೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೇ ಬೆಂಗಳೂರಿನ ಪ್ರಮುಖ ಕೆರೆಯೊಂದನ್ನು ಒತ್ತುವರಿ ಮಾಡಿಕೊಂಡು ವಿಲ್ಲಾಗಳಿಗೆ ದಾರಿ ಮಾಡಿಕೊಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಅದರ ವಿವರ ಇಲ್ಲಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬೊಮ್ಮನಹಳ್ಳಿ ವಿಧಾನಸಭಾಕ್ಷೇತ್ರದ ಹುಳಿಮಾವು ಕೆರೆಯಲ್ಲಿ ಒತ್ತುವರಿ ಮಾಡಿಕೊಂಡು ವಿಲ್ಲಾಗಳಿಗೆ ದಾರಿ ಮಾಡಿಕೊಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಅಲ್ಲದೆ ಈ ಭಾಗದಲ್ಲಿ ಕೆರೆಯನ್ನು ಒತ್ತುವರಿ ಮಾಡಿಕೊಂಡು ದಾರಿ ಮಾಡಿಕೊಡಲಾಗುತ್ತಿದೆ ಎನ್ನುವುದಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅದೇನು ಅಂತ ಮುಂದೆ ನೋಡೋಣ.

ಬೆಂಗಳೂರಿನ ಪ್ರಮುಖ ಕೆರೆಗಳಲ್ಲಿ ಒಂದಾಗಿರುವ ಹುಳಿಮಾವು ಕೆರೆಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಆದರೆ ಈ ಬಗ್ಗೆ ಸೋಷಿಯಲ್ ಮೀಡಿಯಾ ಹಾಗೂ ವಾಟ್ಸಪ್ ಮೂಲಕ ಸುಳ್ಳು ವೀಡಿಯೋ ಕ್ಲಿಪ್ ಹರಿದಾಡುತ್ತಿದೆ ಅಂತ ಬಿಬಿಎಂಪಿ ಹೇಳಿದೆ. ಹಲವು ದಿನಗಳಿಂದ ವ್ಯಾಟ್ಸಪ್ ಮೂಲಕ ಹುಳಿಮಾವು ಕೆರೆಗೆ ಸಂಬಂಧಿಸಿದಂತೆ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದ್ದು, ಇದರಲ್ಲಿ ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡಲಾಗುತ್ತಿದೆ ಎಂದಿದೆ. ಆದರೆ, ಜನ ಮಾತ್ರ ಇಲ್ಲಿ ಒತ್ತುವರಿ ಆಗುತ್ತಿದೆ ಅಂತ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಈ ವೈರಲ್ ವಿಡಿಯೋದಲ್ಲಿ ಕೆರೆಯ ಜಾಗದಲ್ಲಿ ವಾಹನಗಳು ಓಡಾಡುತ್ತಿದ್ದು, ಕೆರೆಯನ್ನು ಮತ್ತಷ್ಟು ಒತ್ತುವರಿ ಮಾಡಿ ವಿಲ್ಲಾಗಳಿಗೆ ಸಂಪರ್ಕ ರಸ್ತೆ ನಿರ್ಮಾಣ ಮಾಡುತ್ತಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಬಿಬಿಎಂಪಿಯ ಅಧಿಕಾರಿಗಳು ಇದು ಹುಳಿಮಾವು ಕೆರೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಒಳ ಹರಿವಿನ ಮೂಲಕ ಕೆರೆಗೆ ಸೇರುವ ನೀರನ್ನು ಮೊದಲನೇ ಹಂತದಲ್ಲಿ ಶುದ್ಧೀಕರಿಸಲು ನಿರ್ಮಿಸಲಾಗುತ್ತಿರುವ ವೆಟ್ ಲ್ಯಾಂಡ್ ಕಾಮಗಾರಿಯಾಗಿರುತ್ತದೆ ಎಂದು ಹೇಳಿದೆ.
ಮುಂದುವರಿದು ಇದೇ ವಿಡಿಯೋದಲ್ಲಿ ಕೆರೆಯ ಒತ್ತುವರಿಗೆ ಸಂಬಂಧಿಸಿದಂತೆ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಇತ್ತೀಚಿನ ದಿನಗಳಲ್ಲಿ ಕೆರೆಯ ಯಾವುದೇ ಒತ್ತುವರಿಗೆ ಅವಕಾಶ ಮಾಡಿಕೊಟ್ಟಿಲ್ಲ. ಈ ಹಿಂದೆ ಆಗಿರಬಹುದಾದ ಒತ್ತುವರಿಗಳ ಬಗ್ಗೆ ನ್ಯಾಯಾಲಯ ಪ್ರಕರಣದ ಸಂಖ್ಯೆಡಬ್ಲ್ಯೂಪಿ ನಂ.39401/2014 ದಿನಾಂಕ: 04.09.2023ರ ಆದೇಶದಲ್ಲಿ ನೀಡಿರುವ ನಿರ್ದೇಶನದಂತೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಬೆಂಗಳೂರು ದಕ್ಷಿಣ ತಾಲ್ಲೂಕು ಅವರ ಕಚೇರಿಯಿಂದ ಅಳತೆ ಕಾರ್ಯ ಪೂರ್ಣಗೊಳಿಸಿ ಸರ್ವೆ ನಕ್ಷೆ ಸಿದ್ಧಪಡಿಸಿ ಸಲ್ಲಿಸಿದೆ. ಕೆರೆಯ ಒತ್ತುವರಿಗಳನ್ನು ಗುರುತಿಸಿಕೊಟ್ಟ ನಂತರ ನಿಯಮಾನುಸಾರ ಒತ್ತುವರಿಗಳನ್ನು ತೆರವುಗೊಳಿಸಲು ವಲಯ ಅಧಿಕಾರಿಗಳಿಂದ ಕ್ರಮವಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹುಳಿಮಾವು ಕೆರೆಯ ಕಾಮಗಾರಿಗಳಿಗೆ ಹಾಗೂ ಒತ್ತುವರಿಗಳಿಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡುತ್ತಿದೆ. ಆ ರೀತಿಯ ಸುಳ್ಳು ಸುದ್ದಿಗಳನ್ನು ಹರಡದಂತೆ ಹೇಳಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಈ ರೀತಿ ಸುಳ್ಳು ಸುದ್ದಿಗಳನ್ನು ಹರಡಿದರೆ ಸೂಚನೆ ನೀಡಲಾಗಿದೆ. ಅಲ್ಲದೆ ಈ ರೀತಿ ಸುಳ್ಳು ಮಾಹಿತಿಯನ್ನು ಹಂಚುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications