ಬೆಂಗಳೂರು: ಬೋರ್‌ವೆಲ್ ಅವ್ಯವಹಾರ, ಬಿಬಿಎಂಪಿಗೆ ಇಡಿ ನೋಟಿಸ್, ಮಾಹಿತಿ ನೀಡಲು ಸೂಚನೆ
ಬೆಂಗಳೂರು, ಡಿಸೆಂಬರ್ 30: ಬೋರ್‌ವೆಲ್ ಕೊರೆಯುವ ಮತ್ತು ನೀರು ಸಂಸ್ಕರಣಾ ಘಟಕಗಳ ಸ್ಥಾಪನೆಯಲ್ಲಿ ಹಣಕಾಸು ಅವ್ಯವಹಾರ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ನೋಟಿಸ್ ನೀಡಿದೆ.
2016 ಮತ್ತು 2019ರ ನಡುವೆ ಪ್ರತಿ ವಾರ್ಡ್‌ನಲ್ಲಿ ಎಷ್ಟು ಬೋರ್‌ವೆಲ್‌ಗಳನ್ನು ಕೊರೆಯಲಾಗಿದೆ ಮತ್ತು ಆರ್‌ಒಗಳನ್ನು ಸ್ಥಾಪಿಸಲಾಗಿದೆ ಎಂಬ ಮಾಹಿತಿ ನೀಡಬೇಕು. ಜೊತೆಗೆ ಪ್ರಕರಣದಲ್ಲಿ ಬಿಬಿಎಂಪಿಯ ಯಾವುದೇ ಅಧಿಕಾರಿಗಳು ಶಾಮೀಲಾಗಿದ್ದರೆ, ಅವರ ಪಾತ್ರ ಇರುವುದು ಕಂಡು ಬಂದಲ್ಲಿ ಅಂತವರ ಮಾಹಿತಿ ನೀಡುವಂತೆ ಕೋರಿದೆ.
ಬೆಂಗಳೂರಿನ ಪ್ರತಿ ವಾರ್ಡ್‌ಗಳಲ್ಲಿ 2016ರಿಂದ 2019 ನಡುವೆ ಎಷ್ಟು ಬೋರ್‌ವೆಲ್‌ಗಳನ್ನು ಕೊರೆಯಲಾಗಿದೆ. ಇದರಲ್ಲಿ ಬಿಬಿಎಂಪಿಯ ಐದು ವಲಯಗಳಾದ ದಾಸರಹಳ್ಳಿ, ಮಹದೇವಪುರ, ರಾಜರಾಜೇಶ್ವರಿ ನಗರ, ಯಲಹಂಕ ಮತ್ತು ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳು, ಕಾರ್ಯಪಾಲಕ ಎಂಜಿನಿಯರ್‌ಗಳು, ಕಾರ್ಪೊರೇಟರ್‌ಗಳು ಮತ್ತು ಗುತ್ತಿಗೆದಾರರ ವಿರುದ್ಧ 2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಜಾರಿ ನಿರ್ದೇಶನಾಲಯವು ಪ್ರಕರಣವನ್ನು ತನಿಖೆ ನಡೆಸುತ್ತಿದೆ.

ಬಿಜೆಪಿ ವಕ್ತಾರ ಎನ್.ಆರ್ ರಮೇಶ್ ಅವರು ಮೇ 2019 ರಲ್ಲಿ ಆಗಿನ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ನೀಡಿದ ದೂರಿನಲ್ಲಿ ಅಕ್ರಮಗಳನ್ನು ಆರೋಪಿಸಿದ್ದಾರೆ. ಬಿಬಿಎಂಪಿಯಲ್ಲಿ ಬೋರ್‌ವೆಲ್ ಕೊರೆದು ಆರ್‌ಒ ಸ್ಥಾಪನೆಯಲ್ಲಿ ಒಟ್ಟು ಸುಮಾರು 400 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದರು.
ವಾರ್ಡ್‌ಗಳಲ್ಲಿ ಶೇ.75ರಷ್ಟು ಪೂರ್ಣಗೊಂಡಿಲ್ಲ
ಆದರೆ ಬಿಬಿಎಂಪಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, 969 ಕೋಟಿ ವೆಚ್ಚದಲ್ಲಿ 976 ಆರ್‌ಒ ಪ್ಲಾಂಟ್‌ಗಳು ಮತ್ತು 9,588 ಬೋರ್‌ವೆಲ್‌ಗಳನ್ನು ಸ್ಥಾಪಿಸಿರುವುದಾಗಿ ಲೆಕ್ಕ ನೀಡಿತ್ತು. ಈ ಸಂಬಂಧ ಇಡಿ ಮತ್ತು ಎಸಿಬಿಗೆ ದಾಖಲೆಗಳನ್ನು ನೀಡಿದ್ದು, ಬೋರ್‌ವೆಲ್ ಕೊರೆಯುವ ಮತ್ತು ಸ್ಥಾವರಗಳನ್ನು ಅಳವಡಿಸುವ ಕೆಲಸ ಶೇ.75ರಷ್ಟು ಪೂರ್ಣಗೊಂಡಿಲ್ಲ. ಬಿಬಿಎಂಪಿ ವ್ಯಾಪ್ತಿಯ ಈ ಐದು ವಷಯಗಳ ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳು, ಕಾರ್ಯಪಾಲಕ ಎಂಜಿನಿಯರ್‌ಗಳು, ಕಾರ್ಪೊರೇಟರ್‌ಗಳು ಮತ್ತು ಗುತ್ತಿಗೆದಾರರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ, 2002 ರ ನಿಬಂಧನೆಗಳ ಅಡಿಯಲ್ಲಿ ಇಡಿ ತನಿಖೆ ನಡೆಯುತ್ತಿದೆ ಎಂದು ರಮೇಶ್ ವಿವರಿಸಿದರು.

ನೋಟಿಸ್ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಇಡಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಮತ್ತು ವಿಚಾರಣೆಗೆ ಎಲ್ಲಾ ವಿವರಗಳನ್ನು ನೀಡಲು ಮುಖ್ಯ ಎಂಜಿನಿಯರ್ ಬಿ.ಎಸ್ ಪ್ರಹ್ಲಾದ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಬೃಹತ್ ಅವ್ಯವಹಾರ ನಡೆದಿದೆ ಎನ್ನಲಾಗುತ್ತಿದ್ದು, ಅದರ ಕಾರಣದಿಂದ ನೋಟಿಸ್ ನೀಡಿದ್ದಾರೆ. ವಿಚಾರಣೆ ನಡೆಯುತ್ತಿದ್ದು, ಅಗತ್ಯ ಎಲ್ಲ ಮಾಹಿತಿ ಒದಗಿಸಲಾಗುವುದು ಎಂದು ಅವರು ಹೇಳಿದರು.












Click it and Unblock the Notifications