ಬೆಂಗಳೂರಲ್ಲಿ ರಾತ್ರಿ 1 ಗಂಟೆವರೆಗೆ ಮದ್ಯ ಮಾರಾಟಕ್ಕೆ ಅವಕಾಶ
ಬೆಂಗಳೂರು, ಡಿಸೆಂಬರ್ 24 : ಉದ್ಯಾನನಗರಿ ಬೆಂಗಳೂರಿನಲ್ಲಿ ಮಧ್ಯರಾತ್ರಿ 1 ಗಂಟೆಯ ತನಕ ಮದ್ಯ ಮಾರಾಟಕ್ಕೆ ನಗರ ಪೊಲೀಸರು ಒಪ್ಪಿಗೆ ನೀಡಿದ್ದಾರೆ. ಡಿಸೆಂಬರ್ 24ರ ಗುರುವಾರದಿಂದ ಜನವರಿ 1ರ ತನಕ ಈ ಆದೇಶ ಜಾರಿಯಲ್ಲಿರುತ್ತದೆ.
ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಯ ಹಿನ್ನಲೆಯಲ್ಲಿ ತಡರಾತ್ರಿ ತನಕ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಕಳೆದ ವರ್ಷ ಡಿಸೆಂಬರ್ 31ರಂದು ಮಾತ್ರ ರಾತ್ರಿ 1 ಗಂಟೆಯ ತನಕ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಈ ಬಾರಿ ಒಂದು ವಾರ ಮುಂಚಿತವಾಗಿಯೇ ಅವಕಾಶ ನೀಡಲಾಗಿದೆ. [ಕ್ರಿಸ್ ಮಸ್, ಹೊಸವರ್ಷ : ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ]

ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್‌ಗಳ ಮನವಿಯನ್ನು ಪುರಸ್ಕರಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಅವರು ಈ ಆದೇಶ ಹೊರಡಿಸಿದ್ದಾರೆ. ಆದರೆ, ವೈನ್ ಮತ್ತು ಲಿಕ್ಕರ್ ಶಾಪ್‌ಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ. [1,750 ಮದ್ಯದಂಗಡಿಗಳಿಗೆ ಲೈಸನ್ಸ್, 17 ಸಾವಿರ ಕೋಟಿ ರು ನಿರೀಕ್ಷೆ!]
ಕ್ಲಬ್, ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್‌ಗಳು ಮಧ್ಯರಾತ್ರಿ 1 ಗಂಟೆಯ ತನಕ ಮದ್ಯ ಮಾರಾಟ ಮಾಡಲು ಅಬಕಾರಿ ಇಲಾಖೆಯಿಂದ ಅನುಮತಿ ಪಡೆಯಬೇಕು ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಬೇಕು ಎಂದು ಪೊಲೀಸರು ಸೂಚನೆ ನೀಡಿದ್ದಾರೆ.
ಸಂಗೀತ ಕಾರ್ಯಕ್ರಮಕ್ಕೂ ಅನುಮತಿ : ಡಿಸೆಂಬರ್ 24, 25 ಹಾಗೂ 31, ಜನವರಿ 1ರಂದು ಸಂಗೀತ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಲಾಗಿದೆ.












Click it and Unblock the Notifications