ಹೆಣ್ಣು ಜಿರಾಫೆ ಗೌರಿಗೆ ಹೊಸ ಫ್ರೆಂಡ್: ಪ್ರವಾಸಿಗರು ಖುಷ್!
ಪ್ರಾಣಿಗಳು ಕೂಡ ಮನುಷ್ಯರ ರೀತಿಯೇ ಬದುಕುತ್ತವೆ ಅವುಗಳಿಗೆ ಸಂಗಾತಿ ಇಲ್ಲದೆ ಹೋದ್ರೆ ದಿಢೀರ್ ಖಿನ್ನತೆಯಿಂದ ಬಳಲುತ್ತವೆ. ಅದರಲ್ಲೂ ಮೃಗಾಲಯ ಅಂದ್ರೆ ಝೂ ಪ್ರಾಣಿಗಳಿಗೆ ಸಂಗಾತಿ ಬೇಕೆ ಬೇಕು. ಇದೇ ರೀತಿ ಇಲ್ಲೊಂದು ಹೆಣ್ಣು ಜಿರಾಫೆ ಒಂಟಿಯಾಗಿ ಪರದಾಡಿತ್ತು. ಗಂಡು ಜಿರಾಫೆ ಇಲ್ಲದೆ ನರಳುತ್ತಿತ್ತು, ಈ ಪರದಾಟ ನೋಡಿ ಸಿಲಿಕಾನ್ ಸಿಟಿ ಬೆಂಗಳೂರಿನ ಬೃಹತ್ ಮೃಗಾಲಯಕ್ಕೆ ಹೊಸ ಅತಿಥಿಯನ್ನ ಕರೆತಂದಿದ್ದಾರೆ ಅಧಿಕಾರಿಗಳು.
ಮೂರು ವರ್ಷಗಳಿಂದ ಒಂಟಿಯಾಗಿ ಕಾಲ ಕಳೆಯುತ್ತಿರುವ ಬನ್ನೇರುಘಟ್ಟ ಜೈವಿಕ ಉದ್ಯಾನದ ಹೆಣ್ಣು ಜಿರಾಫೆ ಗೌರಿ ಸಂಗಾತಿ ಇಲ್ಲದೆ ಮಂಕಾಗಿ ಹೋಗಿತ್ತು. ಪ್ರಾಣಿ ವಿನಿಮಯ ಯೋಜನೆಯ ಅಡಿ, ಬನ್ನೇರುಘಟ್ಟಕ್ಕೆ ಮೈಸೂರಿನ ಮೃಗಾಲಯದಿಂದ 2018ರಲ್ಲಿ ಗೌರಿ ಜಿರಾಫೆ ತರಲಾಗಿತ್ತು. 2 ವರ್ಷಗಳ ಕಾಲ ಏಕಾಂಗಿ ಆಗಿಯೇ ಉಳಿದ ಗೌರಿ ಜಿರಾಫೆಗೆ ಮೈಸೂರಿನ ಮೃಗಾಲಯದಿಂದ ಯದು ನಂದನ ಎಂಬ ಗಂಡು ಜಿರಾಫೆ ಗಿಫ್ಟ್ ಆಗಿ ಕರೆತರಲಾಗಿತ್ತು. ಆದರೆ ಇಲ್ಲೇ ಆಗಿದ್ದು ದೊಡ್ಡ ಎಡವಟ್ಟು. ಬನ್ನೇರುಘಟ್ಟಕ್ಕೆ ಬಂದ ಒಂದೇ ವರ್ಷದಲ್ಲಿ ಯದು ನಂದನ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿತು. ಅಂದಿನಿಂದ ಮತ್ತೆ ಗೌರಿಗೆ ಒಂಟಿತನ ಕಾಡುತ್ತಿತ್ತು.

ಕೊನೆಗೂ ಬಂತು ಹೊಸ ಜಿರಾಫೆ!
ಇನ್ನು ಈ ಜಿರಾಫೆ ವರ್ತನೆ ಗಮನಿಸಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಎ.ವಿ. ಸೂರ್ಯಸೇನ್ ಮತ್ತು ಸಿಬ್ಬಂದಿ, ಗೌರಿಗಾಗಿ ಜೋಡಿ ಹುಡುಕುವ ಪ್ರಯತ್ನ ನಡೆಸಿದ್ದರು. ಬನ್ನೇರುಘಟ್ಟದಲ್ಲಿ ಬೇರೆ ಜಿರಾಫೆಗಳು ಇವೆ. ಆದ್ರೆ ಎಲ್ಲವೂ ಒಂದೇ ಕುಟುಂಬಕ್ಕೆ ಸೇರಿರುವ ಕಾರಣ ಬೇರೆ ಮೃಗಾಲಯ ಮೂಲಕ ಜಿರಾಫೆ ತರಲು ಪ್ರಯತ್ನ ಸಾಗಿತ್ತು. ಇದೀಗ ಆ ಕೆಲಸ ಸಂಪೂರ್ಣವಾಗಿದೆ. ಮೈಸೂರು ಮೃಗಾಲಯದಿಂದ ಜಿರಾಫೆಯನ್ನ ಬನ್ನೇರುಘಟ್ಟಕ್ಕೆ ತರಲಾಗಿದೆ. ಆದರೆ ಅದು ಗಂಡು ಜಿರಾಫೆ ಅಲ್ಲ, ಬದಲಾಗಿ ಹೆಣ್ಣು ಜಿರಾಫೆಯನ್ನ!
'ಗೌರಿ' ಜೊತೆಗೆ 'ಶಿವಾನಿ' ಜೋಡಿ
ಇದೀಗ ಈ ಬಗ್ಗೆ ಮಾಹಿತಿ ನೀಡಿರುವ ಬನ್ನೇರುಘಟ್ಟ ಮೃಗಾಲಯದ ಅಧಿಕಾರಿಗಳು, 'ಕೇಂದ್ರ ಮೃಗಾಲಯ ಪ್ರಾಧಿಕಾರ, ನವದೆಹಲಿ ಇವರ ಅನುಮೋದನೆ ಪ್ರಕಾರ ಪ್ರಾಣಿ ವಿನಿಮಯದಡಿ ಶ್ರೀ ಚಾಮರಾಜೇಂದ್ರ ಮೃಗಾಲಯ, ಮೈಸೂರು ಇಲ್ಲಿ ಭರತ್ ಮತ್ತು ಬಬ್ಲಿ ಜಿರಾಫೆಗೆ ಜನಿಸಿದ್ದ ಸುಮಾರು 1 ವರ್ಷ 7 ತಿಂಗಳು ಪ್ರಾಯದ 'ಶಿವಾನಿ' ಎಂಬ ಹೆಣ್ಣು ಜಿರಾಫೆಯನ್ನು ದಿನಾಂಕ: 27.02.24ರಂದು ಮೈಸೂರಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದೆ. ಪ್ರಸ್ತುತ ಮೈಸೂರು ಮೃಗಾಲಯದಲ್ಲಿ 9 ಜಿರಾಫೆಗಳಿದ್ದು, ಒಂದು ಹೆಣ್ಣನ್ನ ಒಂಟಿಯಾಗಿರುವ ನಮ್ಮ ಗೌರಿಗೆ ಸಹಪಾಠಿಯನ್ನಾಗಿ ನೀಡಿದ್ದಾರೆ.' ಎಂದು ತಿಳಿಸಲಾಗಿದೆ.
ಒಟ್ನಲ್ಲಿ ಬನ್ನೇರುಘಟ್ಟ ಮೃಗಾಲಯಕ್ಕೆ ಇದೀಗ ಹೊಸ ಅತಿಥಿಯ ಎಂಟ್ರಿ ಆಗಿದೆ. ಹೀಗಾಗಿ ಪ್ರವಾಸಿಗರು ಕೂಡ ವಾರಾಂತ್ಯದಲ್ಲಿ ಹೊಸ ಅತಿಥಿಯನ್ನ ಬನ್ನೇರುಘಟ್ಟ ಮೃಗಾಲಯದಲ್ಲಿ ನೋಡಬಹುದಾಗಿದೆ. ಈಗಾಗಲೇ ಹೊಸ ಜಿರಾಫೆ ಈ ಹಿಂದೆ ಇದ್ದ ಜಿರಾಫೆ ಜೊತೆಗೆ ಉತ್ತಮ ಒಡನಾಟ ತೋರಿಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೀಗಿದ್ದರೂ ಕೆಲವು ದಿನಗಳ ಕಾಲ ಹೊಸ ಜಿರಾಫೆ & ಹಳೆಯ ಜಿರಾಫೆ ಮೇಲೆ ಹೆಚ್ಚಿನ ನಿಗಾ ವಹಿಸಲಿದ್ದಾರೆ.












Click it and Unblock the Notifications