ಯುವತಿಯರ ಕಳ್ಳಸಾಗಣೆ ಬೆಂಗಳೂರಿನಲ್ಲೇ ಹೆಚ್ಚು
ಬೆಂಗಳೂರು, ಜೂ. 28 : ಉದ್ಯಾನನಗರಿ ಬೆಂಗಳೂರಿನಲ್ಲಿ ಯುವತಿಯರ ಕಳ್ಳಸಾಗಣೆ ಪ್ರಕರಣ ಹೆಚ್ಚಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ನಗರದಲ್ಲಿ 277 ಪ್ರಕರಣಗಳು ಈ ಕುರಿತು ದಾಖಲಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರು ವಿಧಾನಪರಿಷತ್ತಿನಲ್ಲಿ ಮಾಹಿತಿ ನೀಡಿದ್ದಾರೆ.
ಶುಕ್ರವಾರದ ವಿಧಾನಸಭೆ ಕಲಾಪದಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಪ್ರಶ್ನೆಗೆ ಉತ್ತರ ನೀಡಿದ ತೆರದಾಳ ಕ್ಷೇತ್ರದ ಶಾಸಕಿ ಹಾಗೂ ಸಚಿವೆ ಉಮಾಶ್ರೀ, ರಾಜ್ಯದ 30 ಜಿಲ್ಲೆಗಳಲ್ಲಿ ಬೆಂಗಳೂರಿನಲ್ಲೆ ಯುವತಿ ಮತ್ತು ಮಹಿಳೆಯರ ಕಳ್ಳಸಾಗಣೆ ಪ್ರಕರಣಗಳು ಹೆಚ್ಚು ದಾಖಲಾಗಿವೆ ಎಂದು ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಕಳೆದ ಒಂದು ವರ್ಷದಲ್ಲಿ 277 ಪ್ರಕರಣಗಳು ದಾಖಲಾಗಿವೆ. ಮುಖ್ಯಮಂತ್ರಿಗಳ ಸ್ವ ಕ್ಷೇತ್ರವಾದ ಮೈಸೂರು ಜಿಲ್ಲೆಯಲ್ಲಿ 34 ಪ್ರಕರಣಗಳು ದಾಖಲಾಗಿದ್ದು ಅದು ಎರಡನೇ ಸ್ಥಾನದಲ್ಲಿದೆ ಎಂದು ಉಮಾಶ್ರೀ ಸದನಕ್ಕೆ ತಿಳಿಸಿದರು. ಕೊಪ್ಪಳ ಮತ್ತು ಯಾದಗಿರಿಯಲ್ಲಿ ಇಂತಹ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದರು.
ರಾಜ್ಯದ ಇತರ ಜಿಲ್ಲೆಗಳ ಬಗ್ಗೆ ಮಾಹಿತಿ ನೀಡಿದ ಉಮಾಶ್ರೀ ಅವರು ತುಮಕೂರಿನಲ್ಲಿ 23, ಬಿಜಾಪುರದಲ್ಲಿ 22, ಹಾಸನದಲ್ಲಿ 18, ಬೆಂಗಳೂರು ಗ್ರಾಮಾಂತರದಲ್ಲಿ 13, ಮಂಡ್ಯದಲ್ಲಿ 12, ಬಳ್ಳಾರಿಯಲ್ಲಿ 12 ಮತ್ತು ಬೆಳಗಾವಿಯಲ್ಲಿ 10 ಪ್ರಕರಣ ದಾಖಲಾಗಿದೆ ಎಂದರು.
ಇಲಾಖೆ ಅರಿವು ಮೂಡಿಸುತ್ತಿದೆ : ಯುವತಿಯರ ಮತ್ತು ಮಹಿಳೆಯರ ಕಳ್ಳ ಸಾಗಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸು ಕಾರ್ಯಕ್ರಮವನ್ನು ಇಲಾಖೆ ವತಿಯಿಂದ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು. ಗ್ರಾಮೀಣ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಿ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲೂ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸೈಕಲ್ ಜಾಥಾ, ನಾಟಕಗಳು, ಬೀದಿ ನಾಟಕಗಳನ್ನು ನಡೆಸುವ ಮೂಲಕ ಯುತಿಯರ ಮತ್ತು ಮಹಿಳೆಯರ ಕಳ್ಳಸಾಗಣಿಕೆಗೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ ಎಂದರು.












Click it and Unblock the Notifications