ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ, ಜನರ ಪರದಾಟ
ಬೆಂಗಳೂರು, ಮೇ 22: ನಿನ್ನೆ ಮಧ್ಯಾಹ್ನವೇ ಈ ಬಗ್ಗೆ ಸುಳಿವು ಸಿಕ್ಕಿತ್ತು. ಕಳೆದ ಬೇಸಿಗೆಯಲ್ಲಿದ್ದಂತೆ ಈ ಬಾರಿಯೂ ಬಿಸಿಲು ಇತ್ತು. ಆದರೆ ನಿನ್ನೆ ಮಧ್ಯಾಹ್ನವಂತೂ ವಿಪರೀತವಾಗಿತ್ತು.
ಆದರೆ ಸಂಜೆ 6 ಗಂಟೆಯ ನಂತರ ರಾಜಧಾನಿಯ ಉತ್ತರ ಭಾಗದಿಂದ ದಟ್ಟವಾದ ಮೋಡಗಳು ಆವರಿಸಿದವು. ಬಿರುಬೀಸುಗಾಳಿ ಸುಳಿಯತೊಡಗಿತು. ಕಾದ ಹೆಂಚಿನ ಮೇಲೆ ರೊಯ್ಯನೆ ನೀರು ಹಾಕಿದಂತೆ ಮಳೆ ಸುರಿಯತೊಡಗಿತು. ಅದೂ ಜನ ನೋಡನೋಡುತ್ತಿದ್ದಂತೆ ಆಲಿಕಲ್ಲು ಸುರಿಯತೊಡಗಿತು. ಮಧ್ಯಾಹ್ನದಿಂದ ಬಿಸಿಲಿಗೆ ಶಾಪ ಹಾಕುತ್ತಿದ್ದ ಜನರತ್ತ ವರುಣರಾಯ ಕರುಣೆ ಬೀರಿ, ಜನ ಕೂಲ್ ಕೂಲ್ ಆಗಿದ್ದಾರೆ. ಗುರುವಾರ, ಶುಕ್ರವಾರವೂ ಮಳೆ ಮುಂದುವರಿಯಲಿದ್ದು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಗೆ ಕುಸಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದ ಇತರೆ ಭಾಗಗಳಲ್ಲೂ ಮಳೆಯ ಆರ್ಭಟ:
ಬೆಂಗಳೂರು ನಗರದ ಸುತ್ತಮುತ್ತ ಹಾಗೂ ಪಕ್ಕದ ಜಿಲ್ಲೆಗಳಲ್ಲೂ ಭಾರಿ ಮಳೆಯಾಗಿದೆ. ಹಾಸನ, ಹುಬ್ಬಳ್ಳಿ- ಧಾರವಾಡ, ಹಾವೇರಿಯಲ್ಲಿ ಬುಧವಾರ ಭಾರಿ ಗಾಳಿ ಸಹಿತ ಉತ್ತಮ ಮಳೆಯಾಗಿದ್ದು, ಸಿಡಿಲಿಗೆ 7 ಮಂದಿ ಮೃತಪಟ್ಟಿದ್ದಾರೆ. ಹಾವೇರಿಯ ಚೆನ್ನೂರು ಗ್ರಾಮದಲ್ಲಿ ಕೃಷಿ ಚಟುವಟಿಕೆ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ ಶೇಖಪ್ಪ ಬಾರ್ಕಿ (50), ಹಾಸನದ ಜುಂಜನಹಳ್ಳಿಯಲ್ಲಿ ಮರದ ಕೆಳಗೆ ನಿಂತಿದ್ದ ಮಧು (20) ಹಾಗೂ ಅರಸೀಕೆರೆಯ ಬೊಮ್ಮನಹಳ್ಳಿಯಲ್ಲಿ ದನ ಕಾಯಲು ಹೋಗಿದ್ದ ಸಿದ್ದಮ್ಮ (55) ಸಿಡಿಲಿಗೆ ಜೀವ ತೆತ್ತಿದ್ದಾರೆ.
ಬಾದಾಮಿ ನಂದಿಕೇಶ್ವರದ ಸುಭಾಷ್ ಕುತ್ಸಲ (45), ತೋಳಮಟ್ಟಿ ಗ್ರಾಮದ ಹೊಸಪ್ಪ ಸಾಬಣ್ಣ (10), ಹಾಸನ ಜುಂಜನಹಳ್ಳಿ ಮಧು (20) ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆಯಾದ್ಯಂತ ಭಾರಿ ಗಾಳಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು. ಇನ್ನು ಹುಬ್ಬಳ್ಳಿ- ಧಾರವಾಡದಲ್ಲೂ ಕೆಲ ಗಂಟೆಗಳ ಕಾಲ ಭಾರಿ ಮಳೆಯಾಗಿದೆ. ಕೋಲಾರ, ದಕ್ಷಿಣ ಕನ್ನಡದಲ್ಲೂ ಕೆಲಕಾಲ ಉತ್ತಮ ಮಳೆ ಸುರಿದಿದೆ.
ಅತ್ತ ಭಾರತದ ಕೆಲ ಭಾಗಗಳಲ್ಲಿ ಭೂಕಂಪವಾಗುತ್ತಿದ್ದರೆ ಇತ್ತ ಬೆಂಗಳೂರಿನಲ್ಲಿ ಆಲಿಕಲ್ಲು ಮಳೆಯಾಗಿರುವುದು ಕಾಕತಾಳೀಯವಾಗಿದೆ. (ಭಾರತದಲ್ಲಿ ಅಲ್ಲಲ್ಲಿ ಸಾಧಾರಣ ಭೂಕಂಪ)












Click it and Unblock the Notifications