ಬೆಂಗಳೂರು ವಿವಿಯಲ್ಲಿ 4 ವರ್ಷದ ಪದವಿ ಕೋರ್ಸ್
ಬೆಂಗಳೂರು, ನ.6 : ಬೆಂಗಳೂರು ವಿಶ್ವವಿದ್ಯಾಲಯ ಮುಂದಿನ ಶೈಕ್ಷಣಿಕ ವರ್ಷದಿಂದ ನಾಲ್ಕು ವರ್ಷದ ಪದವಿ ಕೋರ್ಸ್‌ಗಳನ್ನು ಪರಿಚಯಿಸಲು ಚಿಂತನೆ ನಡೆಸಿದೆ. ಈ ಕುರಿತು ಹೇಳಿಕೆ ನೀಡಿರುವ ಕುಲಪತಿ ಪ್ರೊ.ತಿಮ್ಮೇಗೌಡ ಇಂತಹ ಪ್ರಸ್ತಾವನೆ ವಿವಿಯ ಮುಂದಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ಪದವಿ ಶಿಕ್ಷಣದಲ್ಲಿರುವ ನಾಲ್ಕು ಪದ್ಧತಿಗಳಲ್ಲಿ ಬದಲಾವಣೆ ಮಾಡಿ ಜಾಗತಿಕ ಗುಣಮಟ್ಟಕ್ಕೆ ಅನುಗುಣವಾಗಿ ಮುಂದುವರೆದ ರಾಷ್ಟ್ರಗಳಲ್ಲಿರುವ ಶಿಕ್ಷಣ ಪದ್ಧತಿ ಅಳವಡಿಸಿಕೊಳ್ಳಲು ವಿವಿ ಪ್ರಯತ್ನ ನಡೆಸಲಿದೆ.

ಇದರ ಭಾಗವಾಗಿಯೇ ನಾಲ್ಕು ವರ್ಷದ ಪದವಿ ಕೋರ್ಸ್ ಆರಂಭಿಸುವ ಕುರಿತು ಚಿಂತನೆ ನಡೆಸಲಾಗಿದೆ. ವಿದೇಶದಲ್ಲಿ ಈ ವ್ಯವಸ್ಥೆ ಈಗಾಗಲೇ ಯಶಸ್ವಿಯಾಗಿದ್ದು, ನಾಲ್ಕು ವರ್ಷ ಪೂರ್ಣಗೊಂಡ ವಿದ್ಯಾರ್ಥಿಗಳು ಎಂಎ ವ್ಯಾಸಂಗ ಮಾಡದೇ ನೇರವಾಗಿ ಪಿಎಚ್ ಡಿ ಪಡೆಯಲು ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.
ಸದ್ಯ ಬಿಎ, ಬಿಕಾಂ, ಬಿಎಸ್ಸಿ ಪದವಿಗಾಗಿ ಮೂರು ವರ್ಷ ಅಧ್ಯಯನ ಮಾಡಬೇಕು. ಮಧ್ಯದಲ್ಲಿ ಕಾಲೇಜು ಬಿಟ್ಟರೆ ಪದವಿ ದೊರೆಯುವುದಿಲ್ಲ. ಆದರೆ, ಈ ಪದ್ಧತಿ ಸುಧಾರಣೆ ಮಾಡಿದರೆ, ಎರಡು ವರ್ಷಕ್ಕೆ ಅಸೋಸಿಯೇಟ್ ಪದವಿ ನೀಡಲಾಗುತ್ತದೆ. ಎರಡು ವರ್ಷದ ನಂತರ ಕಾಲೇಜು ಸೇರಿದವರು ಐದು ವರ್ಷದ ನಂತರ ಮರಳಿ ಬಂದು ಅಧ್ಯಯನ ಮಾಡಿದರೆ ಪೂರ್ಣ ಪ್ರಮಾಣದ ಪದವಿ ನೀಡಲಾಗುವುದು ಎಂದು ತಿಳಿಸಿದರು.
ನಾಲ್ಕು ವರ್ಷ ಪೂರ್ತಿಯಾಗಿ ಪದವಿ ಪಡೆದ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆಯುವ ಅಗತ್ಯವಿಲ್ಲ. ಅವರು ನೇರವಾಗಿ ಪಿಎಚ್‌ಡಿಗೆ ಅರ್ಜಿ ಸಲ್ಲಿಸಬಹುದು. ನಾಲ್ಕು ವರ್ಷದ ಅಥವಾ ಒಂದು ವರ್ಷದ ಕೋರ್ಸ್ ಮೂಲಕ ಸ್ನಾತಕೋತ್ತರ ಪದವಿ ಅಧ್ಯಯನ ಪೂರ್ಣಗೊಳಿಸಬಹುದು ಎಂದು ಹೇಳಿದರು.
ನೂತನ ದ್ವಿ ಪದವಿ ಕೋರ್ಸ್‌ಗಳನ್ನು ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ. ಅದರಂತೆ ಬೇರೆ- ಬೇರೆ ಎರಡು ಕಾಲೇಜುಗಳಲ್ಲಿ ಪದವಿ ಪಡೆಯಲು ಅವಕಾಶವಿದೆ ಕಲ್ಪಿಸಲಾಗುವುದು ಎಂದು ತಿಮ್ಮೇಗೌಡ ಹೇಳಿದರು.
ಪಿಎಚ್‌ಡಿ ಪ್ರಬಂಧಗಳ ಗುಣಮಟ್ಟ ಕಡಿಮೆಯಾಗುತ್ತಿದೆ ಎಂಬ ಆಕ್ಷೇಪಗಳು ಕೇಳಿ ಬರುತ್ತಿವೆ. ಎಂಫಿಲ್‌ಗೆ ಅರ್ಹತೆ ಹೊಂದಿದ ಪದವಿಗಳಿಗೆ ಪಿಎಚ್‌ಡಿ ನೀಡಲಾಗುತ್ತಿದೆ ಎಂಬ ಆರೋಪಗಳು ಇವೆ. ಇದನ್ನು ಸುಧಾರಿಸಲು ಯುಜಿಸಿ ನಿಯಮದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.












Click it and Unblock the Notifications