ಬೆಂಗಳೂರು ಪೊಲೀಸರಿಂದ ವಿಶ್ವ ದಾಖಲೆ; ಏನದು?
ಅಪರಾಧ ತಡೆಯುವ ವಿಚಾರಗಳಿಗೆ ಹೆಸರುವಾಸಿಯಾಗಿದ್ದ ಬೆಂಗಳೂರು ಪೊಲೀಸರು ಈಗ ವಿಶ್ವ ದಾಖಲೆ ಕೂಡ ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿಗಾಗಿ ಒಂದು ದಿನದ ಮಟ್ಟಿಗೆ ಆಯೋಜಿಸಲಾಗಿದ್ದ ಅತಿದೊಡ್ಡ ಸಿಪಿಆರ್ ತರಬೇತಿ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಪೊಲೀಸ್ ಇಲಾಖೆ ಭಾಗವಹಿಸಿದ ಹಿನ್ನೆಲೆಯಲ್ಲಿ ಲಂಡನ್‌ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಯು ಬೆಂಗಳೂರು ನಗರ ಪೊಲೀಸರನ್ನು ಗುರುತಿಸಿದೆ.
ಐಸಿಎಟಿಟಿ ಫೌಂಡೇಷನ್ ವತಿಯಿಂದ ಈ ವರ್ಷದ ಜನವರಿ 14ರಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಏಕಕಾಲದಲ್ಲಿ 2,200 ಪೊಲೀಸರಿಗೆ ಸಿಪಿಆರ್ ತರಬೇತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಸಾವಿರಾರು ಪೊಲೀಸರಿಗೆ ಏಕಕಾಲದಲ್ಲಿ ಹೃದಯ ಮತ್ತು ಶ್ವಾಸಕೋಶ ಕಾಯಿಲೆಗೆ ಸಂಬಂಧಿಸಿದ ತರಬೇತಿ (ಸಿಪಿಆರ್) ಹಾಗೂ ಪ್ರಥಮ ಚಿಕಿತ್ಸೆ ಬಗ್ಗೆ ತರಬೇತಿ ನೀಡಲಾಗಿತ್ತು. ಆ ಮೂಲಕ ಒಂದೇ ಸ್ಥಳದಲ್ಲಿ ಅತಿ ಹೆಚ್ಚು ಸಿಬ್ಬಂದಿಗೆ ತರಬೇತಿ ನೀಡಿದ ಕಾರ್ಯಕ್ಕೆ ಲಂಡನ್ ಸಂಸ್ಥೆಯು 'ವಿಶ್ವ ದಾಖಲೆ'ಯ ಪ್ರಮಾಣ ಪತ್ರ ನೀಡಿದೆ.

ಈ ಪ್ರಥಮ ಚಿಕಿತ್ಸೆಯ ತರಬೇತಿಯಿಂದ ಎಮರ್ಜೆನ್ಸಿ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯ ಜೀವ ಉಳಿಸಲು ನೆರವಾಗಲಿದೆ. ಸಾರ್ವಜನಿಕ ಜೀವನದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪೊಲೀಸರು ಪ್ರತಿನಿತ್ಯ ಇಂತಹ ಪರಿಸ್ಥಿತಿಗಳನ್ನು ಕಣ್ಣಾರೆ ನೋಡುತ್ತಾರೆ. ಅಂತಹ ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆ ಬಗ್ಗೆ ಅವರಿಗೆ ತರಬೇತಿ ನೀಡುವುದರಿಂದ ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಹೃದಯಾಘಾತ ಸಂಭವಿಸಿದಾಗ ತುರ್ತಾಗಿ ಅವರ ನೆರವಿಗೆ ಧಾವಿಸಲು ನೆರವಾಗಲಿದೆ ಎಂಬ ಉದ್ದೇಶದೊಂದಿಗೆ ಈ ತರಬೇತಿ ನೀಡಲಾಗಿತ್ತು.
ದಿಢೀರ್ ಹೃದಯಾಘಾತದ ಸಂದರ್ಭದಲ್ಲಿ ಪ್ರಾಣಾಪಾಯದಿಂದ ವ್ಯಕ್ತಿಯನ್ನು ಕಾಪಾಡಲು ಸಿಪಿಆರ್ ಸಹಾಯಕ. ಸಂಸ್ಥೆಯ 50ನೇ ವರ್ಷಾಚರಣೆ ಪ್ರಯುಕ್ತ ಈ ತರಬೇತಿಯನ್ನು ಹಮ್ಮಿಕೊಂಡಿದ್ದಾಗಿ ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರು ಸಂಸ್ಥೆ ತಿಳಿಸಿತ್ತು. ಈ ತರಬೇತಿ ಪಡೆದ ಪೊಲೀಸರು ಕರ್ತವ್ಯದ ವೇಳೆ ಇರುವಾಗ ಯಾರಿಗಾದರೂ ತುರ್ತು ಆರೋಗ್ಯ ಸಮಸ್ಯೆ ಎದುರಾದರೆ, ಆಸ್ಪತ್ರೆಗಳಿಗೆ ಕಾಯದೆ, ತಾವೇ ಖುದ್ದು ಪ್ರಥಮ ಚಿಕಿತ್ಸೆ ನೀಡಲು ಸಹಾಯಕವಾಗುತ್ತಿದೆ. ಏಕೆಂದರೆ, ಅಂತಹ ಸಂದರ್ಭದಲ್ಲಿ ಪೊಲೀಸರಿಗೆ ಏನು ಮಾಡಬೇಕೆಂಬ ಮಾಹಿತಿಯೂ ಮೊದಲಿರಲಿಲ್ಲ.

ಸಿಪಿಆರ್ ಹಾಗೂ ಪ್ರಥಮ ಚಿಕಿತ್ಸೆ ತರಬೇತಿಯು ಜನರ ಜೀವ ಉಳಿಸಲು ಸಹಕಾರಿಯಾಗುತ್ತದೆ. ನಮ್ಮ ಪೊಲೀಸರನ್ನು ರಕ್ಷಿಸಲು ಕೂಡ ಇದು ಸಹಾಯಕವಾಗಲಿದ್ದು, ನಾಗರಿಕರ ರಕ್ಷಣೆಗೂ ಪ್ರಯೋಜನಕಾರಿ ಎಂದು ಬೆಂಗಳೂರು ಪೊಲೀಸ್ ಕಮೀಷನರ್ ಬಿ.ದಯಾನಂದ್ ಅವರು ಹೇಳಿದ್ದರು. ಇಂದು ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿಗೆ ಬಂದಿದ್ದ ಲಂಡನ್‌ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಯವರು ಪ್ರಮಾಣ ಪತ್ರ ವಿತರಿಸಿದರು.
ವಿಶ್ವ ದಾಖಲೆಯ ಪತ್ರ ಸ್ವೀಕರಿಸಿ ಮಾತನಾಡಿದ ಕಮೀಷನರ್, ಈ ಕಾರ್ಯಕ್ರಮದಲ್ಲಿ 2240 ಪೊಲೀಸ್ ಅಧಿಕಾರಿಗಳಿಗೆ ಬೇಸಿಕ್ ಲೈಫ್ ಸಪೋರ್ಟ್ (ಬಿಎಲ್ಎಸ್), ಕಾರ್ಡಿಯೋ ಪಲ್ಮನರಿ ರೆಸಸಿಟೇಷನ್ (ಸಿಪಿಆರ್) ತರಬೇತಿಯನ್ನು ನೀಡಲಾಯಿತು. ನಮ್ಮ ಸಮುದಾಯದ ಸುರಕ್ಷತೆ ಹಾಗೂ ಹಿತ ಕಾಯಲು ಜೀವ ರಕ್ಷಕ ಕೌಶಲ್ಯಗಳನ್ನು ಹೆಚ್ಚಿಸುವ ನಮ್ಮ ಇಲಾಖೆಯ ಬದ್ಧತೆಗೆ ಇದು ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದ್ದಾರೆ.












Click it and Unblock the Notifications