ಮಂಡೂರು ಕಸ: ಅನಾರೋಗ್ಯಕ್ಕೆ ಮಹಿಳೆ ಬಲಿ
ಬೆಂಗಳೂರು, ಜೂನ್ 12: ಕೆಆರ್ ಪುರಂ ಸಮೀಪದ ಮಂಡೂರಿನ ಕಸದ ಸಮಸ್ಯೆಯು ಸುತ್ತಮುತ್ತಲ ಗ್ರಾಮಸ್ಥರನ್ನು ನಿಜಕ್ಕೂ ಹೈರಾಣಗೊಳಿಸಿದೆ. ಕಸದ ವಾಸನೆ ನಾನಾ ರೋಗಗಳಿಗೆ ಮೂಲವಾಗುತ್ತಿದೆ.
ಈ ಮಧ್ಯೆ ಕಸದ ವಾಸನೆಗೆ ನಾರಾಯಣಮ್ಮ(60) ಸೇರಿದಂತೆ ಇಬ್ಬರು ಸಾವಿಗೀಡಾಗಿದ್ದಾರೆ. ಜತೆಗೆ ಇನ್ನೂ ಹಲವಾರು ಮಂದಿ ಕಸದ ಸಮಸ್ಯೆಯಿಂದ ನಾನಾ ಕಾಯಿಲೆಗಳಿಗೆ ತುತ್ತಾಗಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಮೃತಪಟ್ಟ ನಾರಾಯಣಮ್ಮ ಹಲವು ದಿನಗಳಿಂದ ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ಸೇರಿಸಿದ್ದೆವು. ಕಲುಷಿತ ವಾತಾವರಣ, ಕೆಟ್ಟ ಗಾಳಿ ಸೇವಿಸಿದ್ದರಿಂದ ಈ ಸ್ಥಿತಿ ಬಂದಿದೆ, ಅವರನ್ನು ಉಳಿಸಲು ಆಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದರೆಂದು ಮೃತಳ ಸಂಬಂಧಿ ಸರಸ್ವತಮ್ಮ ಹೇಳಿದ್ದಾರೆ.

ಮಂಡೂರಿನಲ್ಲಿರುವ ಸುರಿಯುತ್ತಿರುವ ಬೆಂಗಳೂರಿನ ಕಸದಿಂದ ಗಾಳಿ, ನೀರು ಕಲುಷಿತಗೊಂಡು ವಾಂತಿ ಬೇಧಿಗಳಾಗುತ್ತಿವೆ. ಮಕ್ಕಳ ಬೆಳವಣಿಗೆಗೆ ಮಾರಕವಾಗುತ್ತಿದೆ. ಚರ್ಮರೋಗ ಹರಡುತ್ತಿದೆ. ಸೊಳ್ಳೆ-ನೊಣಗಳು ಹೆಚ್ಚಾಗುತ್ತಿವೆ. ನಾವು ದುಡಿಯುವ ಹಣವೆಲ್ಲಾ ಆಸ್ಪತ್ರೆಗೆ ಇಡಬೇಕಾಗಿದೆ ಎಂದೂ ಜನ ಅಲವತ್ತುಕೊಂಡಿದ್ದಾರೆ. (ಕಸ ಗಲಾಟೆ: ಶುಕ್ರವಾರದಿಂದ ಉಪವಾಸ ಸತ್ಯಾಗ್ರಹ )
ವಿದೇಶಕ್ಕೆ ಹೋಗಲ್ಲ- ಮೇಯರ್ ಕಟ್ಟೆ ಸತ್ಯ:
ನಗರವನ್ನು ಕಾಡುತ್ತಿರುವ ಕಸದ ಸಮಸ್ಯೆಗೆ ಮುಕ್ತಿ ಹಾಡಲು ಹಲವಾರು ವಿಧಾನಗಳನ್ನು ಅನುಸರಿಸುತ್ತಿದ್ದೇವೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದಿರುವ ಮೇಯರ್ ಕಟ್ಟೆ ಸತ್ಯನಾರಾಯಣ ಅವರು ಈ ಮಧ್ಯೆ ತಾವು ಯಾವುದೇ ವಿದೇಶ ಪ್ರವಾಸ ಕೈಗೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವೈಜ್ಞಾನಿಕವಾಗಿ ಕಸ ವಿಲೇವಾರಿ ಕುರಿತಂತೆ ಸ್ಯಾನ್‌ಫ್ರಾನ್ಸಿಸ್ಕೋ ತಂತ್ರಜ್ಞಾನ ಅಳವಡಿಸಿಕೊಳ್ಳಲು ಚಿಂತನೆ ನಡೆಸುತ್ತಿದ್ದೇವೆ. ಈ ಕುರಿತು ಅಲ್ಲಿನ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ನಡೆಸುತ್ತೇವೆ. ಅಲ್ಲಿಗೆ ತಾವು ಹೋಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಮೇಯರ್ ಕಟ್ಟೆ ಸತ್ಯ ಗ್ರಾಮ ವಾಸ್ತವ್ಯ:
ಮಂಡೂರಿನಲ್ಲಿ ಪ್ರಸ್ತುತ ಐಪಿಸಿ 144 ಸೆಕ್ಷನ್ ವಿಧಿಸಲಾಗಿದೆ. ಅದು ಮುಗಿಯುತ್ತಿದ್ದಂತೆ ಆ ಗ್ರಾಮದಲ್ಲಿ ವಾಸ್ತವ್ಯ ಮಾಡಲು ತಾನು ಸಿದ್ಧವಿರುವುದಾಗಿ ಮೇಯರ್ ಕಟ್ಟೆ ಸತ್ಯನಾರಾಯಣ ಘೋಷಿಸಿದ್ದಾರೆ. (ಕಸದ ಸಮಸ್ಯೆ ಬಗೆಹರಿಸಲು ಸ್ಯಾನ್ ಫ್ರಾನ್ಸಿಸ್ಕೋ ನೆರವು)
ಕಸದ ಸಮಸ್ಯೆ ನಿವಾರಣೆಗೆ ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ನಿವಾರಣೆ ಆಗುವವರೆಗೆ ಕಾಲಾವಕಾಶ ಕೋರಿದ್ದೆವು. ಆದರೆ ಅಲ್ಲಿನ ಜನರು ನಿರಾಕರಿಸಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೆಹಲಿಯಿಂದ ವಾಪಸಾದ ಕೂಡಲೇ ಮಾತುಕತೆ ನಡೆಸಲಿದ್ದಾರೆ ಎಂದು ಕಟ್ಟೆ ತಿಳಿಸಿದ್ದಾರೆ.












Click it and Unblock the Notifications