ಎಟಿಎಂ ಹಲ್ಲೆ : ಕೇವಲ 500 ರೂ.ಗೆ ಮೊಬೈಲ್ ಮಾರಾಟ

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಹಿಂದೂಪುರದಲ್ಲಿ ಮಾರ್ವೆಲ್ ಸೆಲ್ ಪಾಯಿಂಟ್ ಎಂಬ ಅಂಗಡಿ ನಡೆಸುತ್ತಿದ್ದ ಅಬೂಜಾರ್ ಎಂಬುವವರಿಂದ ಜ್ಯೋತಿ ಉದಯ್ ಅವರ ಮೊಬೈಲ್ ಫೋನ್ ಅನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆ ನಡೆದ ನ. 19ರ ಮಂಗಳವಾರ ರಾತ್ರಿ ಆರೋಪಿಯಿಂದ ಮೊಬೈಲ್ ಖರೀದಿಸಿರುವುದಾಗಿ ಅಬೂಜಾರ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
ಮಂಗಳವಾರ ಸುಮಾರು ರಾತ್ರಿ 8.15ರ ಸುಮಾರಿಗೆ ಹಿಂದೂಪುರದ ಅಬೂಜಾರ್ ಅಂಗಡಿಗೆ ಬಂದಿದ್ದ ಆರೋಪಿ, ಜ್ಯೋತಿ ಉದಯ್ ಅವರ ನೋಕಿಯಾ 2700 ಮೊಬೈಲ್ ಅನ್ನು ತೋರಿಸಿ ಇದನ್ನು ಮಾರಾಟ ಮಾಡಬೇಕು ಎಂದು ಹೇಳಿದ್ದಾನೆ. ತೆಲಗು ಭಾಷೆ ಮಾತನಾಡುತ್ತಿದ್ದ ಆತ, ಅಬೂಜಾರ್ ಬಳಿ ಮೊಬೈಲ್ ಫೋನಿಗೆ 1000 ರೂ.ನೀಡುವಂತೆ ಒತ್ತಾಯಿಸಿದ್ದಾನೆ. (ಜ್ಯೋತಿ ಉದಯ್ ಆರೋಗ್ಯದಲ್ಲಿ ಚೇತರಿಕೆ )
ಆದರೆ, ಅಂಗಡಿ ಮಾಲೀಕ ಅಬಜೂರ್ ನಿರಾಕರಿಸಿದಾಗ, ಅಲ್ಲಿಂದ ತೆರಳಿದ ಆರೋಪಿ ಸುತ್ತ-ಮುತ್ತಲಿನ ಅಂಗಡಿಗಳಿಗೂ ಹೋಗಿ ಅದನ್ನು ಮಾರಾಟ ಮಾಡಲು ಯತ್ನಿಸಿದ್ದಾನೆ. ಕೊನೆಗೆ ಯಾರೂ ಅದನ್ನು 1 ಸಾವಿರ ರೂ.ಗೆ ಕೊಳ್ಳಲು ಮುಂದೆ ಬಂದಿಲ್ಲ. ಆದ್ದರಿಂದ ಪುನಃ ಅಬಜೂರ್ ಅಂಗಡಿಗೆ ಬಂದು 500 ರೂ.ಗಳಿಗೆ ಮಾರಾಟ ಮಾಡಿ, ತಕ್ಷಣ ಹಣ ಪಡೆದು ಅಲ್ಲಿಂದ ತೆರಳಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಇದರಿಂದ ಘಟನೆ ನಡೆದ ದಿನವೇ ಆರೋಪಿ ಬೆಂಗಳೂರಿನಿಂದ ಪರಾರಿಯಾಗಿದ್ದಾನೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಸದ್ಯ ಪೊಲೀಸರು ಅಬೂಜಾರ್ ನೀಡಿರುವ ಮಾಹಿತಿಯಂತೆ ಆರೋಪಿಯನ್ನು ಪತ್ತೆ ಹಚ್ಚಲು ಕಾರ್ಯಾಚರಣೆ ಮುಂದುವರೆಸಿದ್ದಾರೆ.












Click it and Unblock the Notifications