B Khata to A Khata Conversion: "ಬಿ - ಖಾತಾದಿಂದ ಎ - ಖಾತಾಗೆ 4ರಿಂದ 5 ಲಕ್ಷ ರೂಪಾಯಿ ಖರ್ಚು!"
B Khata to A Khata Conversion: ಕರ್ನಾಟಕದಲ್ಲಿ ಬಿ - ಖಾತಾ ಆಸ್ತಿದಾರರಿಗೆ ರಾಜ್ಯ ಸರ್ಕಾರವು ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಕಳೆದ ಹಲವು ವರ್ಷಗಳಿಂದ ಬಿ ಖಾತಾದಿಂದ ಎ ಖಾತಾಗೆ ಆಸ್ತಿ ಪರಿವರ್ತನೆ ಮಾಡಿಕೊಳ್ಳುವುದಕ್ಕೆ ಲಕ್ಷಾಂತರ ಜನ ಬಿ ಖಾತಾ ಆಸ್ತಿದಾರರು ಕಾಯುತ್ತಿದ್ದರು. ಆದರೆ, ಇದೀಗ ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಅವಕಾಶ ನೀಡಲಾಗಿದೆಯಾದರೂ, ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ 4ರಿಂದ 5 ಲಕ್ಷ ರೂಪಾಯಿ ಆಗುತ್ತಿದೆ ಎನ್ನುವ ಮಾತು ಕೇಳಿ ಬಂದಿದೆ.
ಬಿ ಖಾತಾದಿಂದ ಎ ಖಾತಾಗೆ ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಜೆಡಿಎಸ್, ಕಲೆಕ್ಷನ್ ಗಿರಾಕಿ ಡಿ.ಕೆ ಶಿವಕುಮಾರ್ ಇನ್ನೊಮ್ಮೆ ಕೇಳಿಸ್ಕೋಳ್ಳಿ. ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಯಾವುದೇ ವಿರೋಧ ಇಲ್ಲ. ನಮ್ಮ ವಿರೋಧ ಇರುವುದು ಬಿ ಖಾತಾ ಪರಿವರ್ತನೆ ಹೆಸರಲ್ಲಿ ಕಮಿಷನ್ ಕರ್ನಾಟಕ ಕಾಂಗ್ರೆಸ್ ಸರ್ಕಾರ 4 ಲಕ್ಷ ರಿಂದ 5ಲಕ್ಷ ರೂಪಾಯಿ ಎಂದು ಲಕ್ಷ ಲಕ್ಷ ರೂಪಾಯಿ ವಸೂಲಿ ಮಾಡಿ ಬಡವರ ರಕ್ತ ಹೀರುತ್ತಿರುವುದಕ್ಕೆ ಎಂದು ಹೇಳಿದೆ.

ಬಿ ಖಾತೆ ಹೊಂದಿರುವ ಬಡವರು ಮನೆ ಕಟ್ಟಿದ ದಿನದಿಂದ ಸರ್ಕಾರಕ್ಕೆ ಟ್ಯಾಕ್ಸ್ ಕೂಡ ಪಾವತಿಸುತ್ತಾ ಬಂದಿದ್ದಾರೆ. ಅಂತವರಿಗೆ ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಮಾಡಲು ಲಕ್ಷಾಂತರ ರೂ. ಕೇಳಿದರೆ ಬಡವರು ಎಲ್ಲಿಂದ ಹಣ ತರುತ್ತಾರೆ. ಉಸ್ತುವಾರಿ ಮಂತ್ರಿಯಾಗಿ ಬೆಂಗಳೂರನ್ನು ವಸೂಲಿ ಕೇಂದ್ರ ಮಾಡಿಕೊಂಡಿರುವ ಡಿಕೆಶಿ, ನಿಮ್ಮ ವಸೂಲಿ, ಧಮ್ಕಿ ಕೆಲಸ ಬಿಟ್ಟು ಬೆಂಗಳೂರನ ಗುಂಡಿ ಮುಚ್ಚಿ, ಕಸದ ಸಮಸ್ಯೆ ಬಗೆಹರಿಸಿ. ಸಿಲಿಕಾನ್ ಸಿಟಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ..
ಬಣ್ಣ ಬಣ್ಣದ ಬಟ್ಟೆ , ಕೂಲಿಂಗ್ ಗ್ಲಾಸ್ ಹಾಕಿ ಫೋಟೋ ಶೋಟ್, ರೀಲ್ಸ್ ಮಾಡಿದರೇ ಸಾಲದು, ಕೆಲಸವನ್ನೇ ಮಾಡದ ಬಾಯಿ ಮಾತಿನ ಶೂರ ಡಿಕೆಶಿ, "ಕೈಲಾಗದವರು ಮೈಪರಚಿ ಕೊಂಡಂತೆ ನಿಮ್ಮ ನಡೆ ನುಡಿ. "ಆಚಾರ ವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ" ಎಂದು ಟ್ವೀಟ್ ಮಾಡಿದೆ.
ಡಿ.ಕೆ ಶಿವಕುಮಾರ್ ಟ್ವೀಟ್‌ಗೆ ಟಾಂಗ್: ಇನ್ನು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಟ್ವೀಟ್‌ಗೆ ಜೆಡಿಎಸ್ ಈ ರೀತಿ ಟ್ವೀಟ್ ಮಾಡಿದೆ. ನಿಮ್ಮ ಧ್ವನಿ - ನಮ್ಮ ನಗರ. ಖಾತಾ ಸುಧಾರಣೆ ಮೂಲಕ ಜನರ ವಿಶ್ವಾಸ ಗಳಿಸಿರುವುದಾಗಿ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಟ್ವೀಟ್ ಮಾಡಿದ್ದರು.
ಬೆಂಗಳೂರು ಇ-ಖಾತಾ ಮತ್ತು ಬಿ ಖಾತಾದಿಂದ ಎ- ಖಾತಾ ಪರಿವರ್ತನೆಗೆ ಅವಕಾಶ ಮಾಡಿಕೊಟ್ಟಿದೆ. ಇದು ನಮ್ಮ ಸರ್ಕಾರದ ಆರನೇ ಗ್ಯಾರಂಟಿ ಆಗಿದೆ. ಈ ಸುಧಾರಣೆಯು ಆಸ್ತಿ ಮಾಲೀಕತ್ವವನ್ನು ಸುಲಭ ಮತ್ತು ಹೆಚ್ಚು ಪಾರದರ್ಶಕವಾಗಿಸಿದೆ ಎಂದು ಟ್ವೀಟ್ ಮಾಡಿದ್ದರು.












Click it and Unblock the Notifications