ಯುವಕನ ಹತ್ಯೆಗೆ ಯತ್ನ: ಸುಪಾರಿ ಹಂತಕರ ರಕ್ಷಣೆಗೆ ನಿಂತ ಹುಳಿಮಾವು ಪೊಲೀಸರು
ಬೆಂಗಳೂರು, ಫೆ. 22: ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಯುವಕನಿಗೆ ಚಾಕುವಿನಿಂದ ತಿವಿದು ಎರಡು ಕಣ್ಣೇ ಕಾಣದಂತೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಯುವಕ ಶಾಶ್ವತ ಕಣ್ಣು ಕಳೆದುಕೊಂಡರೂ ಹುಳಿಮಾವು ಪೊಲೀಸರು ಕೇವಲ ಐಪಿಸಿ ಸೆಕ್ಷನ್ 326 ಅಡಿ ಹಲ್ಲೆ ಪ್ರಕರಣ ದಾಖಲಿಸಿದ್ದಾರೆ.
ಇದು ಹುಳಿಮಾವು ಪೊಲೀಸರು ಹಲ್ಲೆಗೆ ಒಳಗಾದ ಯುವಕನಿಗೆ ಕೊಟ್ಟ ಬಳುವಳಿ. ವಿಪರ್ಯಾಸವೆಂದರೆ ಮಾರಣಾಂತಿಕ ಹಲ್ಲೆಗೆ ಒಳಗಾದ ಯುವಕನನ್ನು ವಿಚಾರಣೆ ನೆಪದಲ್ಲಿ ಕರೆಸಿಕೊಂಡಿರುವ ಸಿದ್ದಾಪುರ ಪೊಲೀಸರು ಮೂರು ದಿನದಿಂದ ಅಕ್ರಮ ಬಂಧನದಲ್ಲಿಟ್ಟಿರುವ ಆರೋಪ ಕೇಳಿ ಬಂದಿದೆ.
ಪ್ರೀತಿ ಮಾಡಿದ ಕಾರಣಕ್ಕೆ ಯುವಕನ ಹತ್ಯೆಗೆ ಸುಪಾರಿ ನೀಡಿದ ಯುವತಿಯ ಪೋಷಕರನ್ನು ಕೈ ಬಿಟ್ಟಿರುವ ಹುಳಿಮಾವು ಪೊಲೀಸರು, ಎರಡು ಕಣ್ಣುಕಿತ್ತ ಆರೋಪಿಗಳ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿಲ್ಲ. ಬದಲಿಗೆ 15 /2022 ರ ಪ್ರಕರಣ ಸಂಬಂಧ ಐಪಿಸಿ ಸೆಕ್ಷನ್ 504, 323, 326 ,34 ಅಡಿ ಕೇಸು ದಾಖಲಿಸಿದ್ದಾರೆ. ದೂರುದಾರನ ಹತ್ಯೆಗೆ ಸುಪಾರಿ ನೀಡಿರುವರನ್ನು ಹುಳಿಮಾವು ಪೊಲೀಸರು ಕೈ ಬಿಟ್ಟಿದ್ದಾರೆ.

ಏನಿದು ಘಟನೆ:
ಕೆಂಗೇರಿ ನಿವಾಸಿ ಚರಣ್ ಜನವರಿ 11, 2022 ರಂದು ರಾತ್ರಿ 10.30 ರ ಸುಮಾರಿನಲ್ಲಿ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವರಜ್ಜಿ ಮನೆಗೆ ಹೋಗುವಾಗ ನಾಲ್ವರು ಮಾರಣಾಂತಿಕ ಹಲ್ಲೆ ಮಾಡಿದ್ದರು. ಚರಣ್ ಗೆ ಪರಿಚಿತ ಗಣೇಶ್ ಮತ್ತು ಆತನ ಸ್ನೇಹಿತ ಸೋಮು, ಚಿಂಟು, ಮನು ಎಂಬುವರು ಹಲ್ಲೆ ಮಾಡಿದ್ದರು. ಬಟನ್ ಚಾಕುವಿನಿಂದ ತಿವಿದ ಕಾರಣ ಚರಣ್ ಎರಡು ಕಣ್ಣಿಗೆ ಗಂಭೀರ ಗಾಯವಾಗಿವೆ. ಚರಣ್ ಒಂದು ಕಣ್ಣು ಶಾಶ್ವತವಾಗಿ ಕಳೆದುಕೊಂಡಿದ್ದಾನೆ. ಇನ್ನೊಂದು ಕಣ್ಣಲ್ಲಿ ನೀರು ಸೋರುತ್ತಿದ್ದು, ಅದನ್ನು ಉಳಿಸಿಕೊಳ್ಳಲು ತುರ್ತು ಚಿಕಿತ್ಸೆ ಪಡೆಯುವ ಅಗತ್ಯವಿದೆ. ಚಾಕುವಿನಿಂದ ತಿವಿದು ಕಣ್ಣು ಇಲ್ಲದಂತೆ ಮಾಡಿದದರೂ ಆರೋಪಿಗಳು ಜಾಮೀನು ಪಡೆದು ಹೊರ ಬರುವಂತೆ ಸಹಕರಿಸಲು ಹುಳಿಮಾವು ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಲ್ಲ ಎಂದು ಚರಣ್ ಪೋಷಕರು ಆರೋಪಿಸಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ಕೊಟ್ಟರೂ ಸಹ ಅದಕ್ಕಿಂತಲೂ ಸ್ಟ್ರಾಂಗ್ ಸೆಕ್ಷನ್ ಹಾಕಿದ್ದೇವೆ ಎಂದು ಸಬೂಬು ಹೇಳಿ ಕೈತೊಳೆದುಕೊಂಡಿದ್ದಾರೆ.
ಕಣ್ಣು ಕಳೆದುಕೊಂಡವನ ಮೇಲೆ ಪೋಸ್ಕೋ ಕೇಸು:
ಹುಳಿಮಾವು ಪೊಲೀಸರದ್ದು ಒಂದು ಕಥೆಯಾದರೆ, ಸಿದ್ಧಾಪುರ ಪೊಲೀಸರದ್ದು ಇನ್ನೊಂದು ಕಥೆ. ಪ್ರಕರಣದ ತನಿಖೆ ಸಂಬಂಧ ಸಹಿ ಮಾಡಬೇಕು ಎಂದು ಸುಳ್ಳು ಹೇಳಿ ಹುಳಿಮಾವು ಪೊಲೀಸರು ಚರಣ್ ನನ್ನು ಕರೆಸಿಕೊಂಡು ಸಿದ್ದಾಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳೆದ ಮೂರು ದಿನದಿಂದ ಚರಣ್ ಸಿದ್ದಾಪುರ ಪೊಲೀಸರ ಕಸ್ಟಡಿಯಲ್ಲಿಯದ್ದು, ಅಕ್ರಮ ಬಂಧನದಲ್ಲಿಟ್ಟುಕೊಂಡಿರುವ ಆರೋಪ ಕೇಳಿ ಬಂದಿದೆ. ಚರಣ್ ಪ್ರೀತಿಸುತ್ತಿದ್ದ ಯುವತಿ ಪೋಷಕರು ನೀಡಿದ ದೂರಿನ ಮೇರೆಗೆ ಆತನ ವಿರುದ್ಧ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪದಡಿ ಕೇಸು ದಾಖಲಿಸುವುದಾಗಿ ಪೋಷಕರಿಗೆ ಹೇಳಿ ಕಳಿಸಿದ್ದಾರೆ.
ನನ್ನ ಮೊಮ್ಮಗ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಇನ್ನೂ ಕಣ್ಣಿನ ಗಾಯಗಳೇ ವಾಸಿಯಾಗಿಲ್ಲ. ಒಂದು ಕಣ್ಣು ಶಾಶ್ವತವಾಗಿ ಕಳೆದುಕೊಂಡಿದ್ದಾನೆ. ಇನ್ನೊಂದು ಕಣ್ಣಲ್ಲಿ ನೀರು ಸೋರುತ್ತಿದೆ. ಸೋಮವಾರ ನಾರಾಯಣ ನೇತ್ರಾಲಯದಲ್ಲಿ ತೋರಿಸಬೇಕಿತ್ತು. ಮೂರು ದಿನದಿಂದ ಸಿದ್ದಾಪುರ ಪೊಲೀಸರು ಅಕ್ರಮವಾಗಿ ಕೂರಿಸಿಕೊಂಡಿದ್ದಾರೆ. ನಿನ್ನ ಮೊಮ್ಮಗನ ಮೇಲೆ ಅದ್ಯಾವುದೋ ಕೇಸು ಹಾಕ್ತೀನಿ ಎಂದು ಹೆದರಿಸುತ್ತಿದ್ದಾರೆ. ಸ್ವಾಮಿ ನ್ಯಾಯ ಎಲ್ಲಿದೆ ಬಡವರಿಗೆ ? ಕಣ್ಣು ಕಿತ್ತವರ ಪರ ಪೊಲೀಸರು ನಿಂತಿರೋದು ಯಾಕೆ ? ನನ್ನ ಮೊಮ್ಮಗನ ಸಾಯಿಸೋಕೆ ಸುಪಾರಿ ಕೊಟ್ಟವರನ್ನು ಸುಮ್ಮನೆ ಬಿಟ್ಟಿದ್ದಾರೆ. ಪೊಲೀಸರಿಗೆ ಹೀಗೆ ಆದ್ರೆ ಬಡವರಿಗೆ ಎಲ್ಲಿ ನ್ಯಾಯ ಸಿಗುತ್ತೆ ಎಂದು ಚರಣ್ ಅಜ್ಜಿ ಕಣ್ಣೀರು ಹಾಕಿದ್ದಾರೆ.
ಮಾನವ ಹಕ್ಕು ಆಯೋಗಕ್ಕೆ ದೂರು:
ನನ್ನ ಮೊಮ್ಮಗನ ಹತ್ಯೆಗೆ ಯತ್ನಿಸಿದವರಿಗೆ ಪೊಲೀಸರೇ ನೆರವು ನೀಡುತ್ತಿದ್ದಾರೆ. ಈ ಕುರಿತು ತನಿಖೆ ನಡೆಸಿ ಕಣ್ಣು ಕಿತ್ತವರನ್ನು ಬಂಧಿಸಬೇಕು. ಸುಪಾರಿ ಕೊಟ್ಟ ಯುವತಿ ಪೋಷಕರ ಮೇಲೆ ಕೇಸು ದಾಖಲಿಸಬೇಕು.ಅಕ್ರಮ ಬಂಧನದಲ್ಲಿಟ್ಟಿರುವ ನನ್ನ ಮೊಮ್ಮಗನನ್ನು ಬಿಟ್ಟು ಶಸ್ತ್ರ ಚಿಕಿತ್ಸೆಗೆ ಒಳಪಡಲು ಅವಕಾಶ ಮಾಡಿಕೊಡಬೇಕು. ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೋರಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಮತ್ತು ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಯುವಕನ ಅಜ್ಜಿ ಸರೋಜಮ್ಮ ದೂರು ನೀಡಿದ್ದಾರೆ.












Click it and Unblock the Notifications