ಸೆಕ್ಯೂರಿಟಿ ಗಾರ್ಡ್ ಇಲ್ಲದ ಎಟಿಎಂ ಮತ್ತೆ ಬಂದ್
ಬೆಂಗಳೂರು. ಜ.4 : ಬೆಂಗಳೂರಿನಲ್ಲಿ ಮತ್ತೊಮ್ಮೆ ಎಟಿಎಂಗಳು ಬಂದ್ ಆಗಲಿವೆ. ಭದ್ರತಾ ಸಿಬ್ಬಂದಿ ಇಲ್ಲದ ಎಟಿಎಂಗಳನ್ನು ಗ್ರಾಹಕರ ಹಿತದೃಷ್ಟಿಯಿಂದ ರಾತ್ರಿವೇಳೆ ಬಂದ್ ಮಾಡಲು ಪೊಲೀಸರು ಸಜ್ಜಾಗಿದ್ದಾರೆ. ಪೊಲೀಸರು ಬ್ಯಾಂಕ್ ಗಳಿಗೆ ನೀಡಿದ ಗಡುವು ಮುಕ್ತಾಯಗೊಂಡ ಹಿನ್ನಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲು ಮುಂದಾಗಿದ್ದಾರೆ.
ನ.19ರಂದು ಬೆಂಗಳೂರಿನ ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಜ್ಯೋತಿ ಉದಯ್ ಮೇಲೆ ಹಲ್ಲೆ ನಡೆದ ನಂತರ ಭದ್ರತಾ ಸಿಬ್ಬಂದಿ ಮತ್ತು ಸಿಸಿಟಿವಿ ಇಲ್ಲದ ಎಟಿಎಂಗಳನ್ನು ಪೊಲೀಸರು ಮುಚ್ಚಿಸಿದ್ದರು. ನಂತರ ಬ್ಯಾಂಕ್ ಗಳ ಮನವಿ ಮೇರೆಗೆ 45 ದಿನಗಳ ಕಾಲಾವಕಾಶ ನೀಡಿದ್ದರು. [ಎಟಿಎಂಗಳಲ್ಲಿ ಸಿಸಿಟಿವಿ : 45 ದಿನ ಡೆಡ್ ಲೈನ್]

ಸದ್ಯ ಪೊಲೀಸರು ನೀಡಿದ ಕಾಲಾವಕಾಶ ಮುಗಿಯುತ್ತಾ ಬಂದರೂ ಹಲವು ಬ್ಯಾಂಕ್ ಗಳು ಎಟಿಎಂಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿಲ್ಲ. ಆದ್ದರಿಂದ ರಾತ್ರಿವೇಳೆ ಗ್ರಾಹಕರ ಹಿತದೃಷ್ಟಿಯಿಂದ ಭದ್ರತಾ ಸಿಬ್ಬಂದಿ ಇಲ್ಲದ ಎಟಿಎಂಗಳನ್ನು ಮುಚ್ಚಲು ಪೊಲೀಸರು ನಿರ್ಧರಿಸಿದ್ದಾರೆ.[ಎಟಿಎಂ ಭದ್ರತೆಗೆ ಮಾರ್ಗಸೂಚಿ]
ಈ ಕುರಿತು ಹೇಳಿಕೆ ನೀಡಿರುವ ಗೃಹ ಸಚಿವ ಕೆಜೆ ಜಾರ್ಜ, ಬ್ಯಾಂಕ್ ಗಳಿಗೆ ಸೆಕ್ಯೂರಿಟಿ ಗಾರ್ಡ್ ನೇಮಕಮಾಡುವಂತೆ ನಾವು ಕಾಲಾವಕಾಶ ನೀಡಿದ್ದೆವು. ಆದರೆ, ಕೆಲವು ಬ್ಯಾಂಕ್ ಗಳು ಪಾಲಿಸಿಲ್ಲ. ಆದ್ದರಿಂದ ಎಟಿಎಂಗಳನ್ನು ಮುಚ್ಚಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ. [ಮನೆ ಸೇರಿದ ಜ್ಯೋತಿ ಉದಯ್]
ಭದ್ರತಾ ಸಿಬ್ಬಂದಿ ಇದ್ದರೆ, ಎಟಿಎಂನಲ್ಲಿರುವ ಹಣ ಮತ್ತು ಗ್ರಾಹಕರ ರಕ್ಷಣೆಗೂ ಅನುಕೂಲವಾಗುತ್ತದೆ. ಇದು ಹೊಸದಾಗಿ ಜಾರಿಗೆ ತಂದ ನಿಯಮಗಳೇನಲ್ಲ. ಆದರೂ ಸರ್ಕಾರ ಇದನ್ನು ಪಾಲಿಸುತ್ತಿಲ್ಲ ಎಂದು ಜಾರ್ಜ್ ಹೇಳಿದರು. ಬ್ಯಾಂಕ್ ಗಳಿಗೆ ಅಗತ್ಯ ಸಮಯ ನೀಡಿದ್ದೇವೆ. ಆದರೂ ಭದ್ರತಾ ಸಿಬ್ಬಂದಿ ನೇಮಿಸಿಲ್ಲ ಎಂದು ಅವರು ತಿಳಿಸಿದರು.











Click it and Unblock the Notifications