Sweeping Machine: ಕಸ ಗುಡಿಸುವ ಯಂತ್ರ ಬಾಡಿಗೆಗೆ ಕಾಮನ್ ವೆಲ್ತ್ ಹಗರಣವೇ ಮಾದರಿ: ಅಶೋಕ್
ಬೆಂಗಳೂರಿನಲ್ಲಿ ರಸ್ತೆ ಕಸ ಗುಡಿಸುವ ಯಂತ್ರ ಬಾಡಿಗೆಗೆ ಪಡೆಯುವ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ದೊಡ್ಡ ಹಗರಣ ನಡೆಸುತ್ತಿದೆ ಎಂದು ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ. ತಜ್ಞರ ಸಮಿತಿ ಸಲ್ಲಿಸಿರುವ ತಾಂತ್ರಿಕ ವರದಿ "ಬಾಡಿಗೆ ಮಾದರಿ" ಬೇಡ ಎಂದು ಶಿಫಾರಸ್ಸು ಮಾಡಿದ್ದರೂ, ರಸ್ತೆ ಕಸ ಗುಡಿಸುವ ಯಂತ್ರ ಬಾಡಿಗೆಗೆ ಪಡೆಯಲು ₹613 ಕೋಟಿ ರೂಪಾಯಿ ವೆಚ್ಚ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರಕ್ಕೆ ಯುಪಿಎ ಅವಧಿಯಲ್ಲಿ ನಡೆದ ಕಾಮನ್ ವೆಲ್ತ್ ಹಗರಣವೇ ಮಾದರಿ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಯುಪಿಎ ಸರ್ಕಾರದ ಸಾಲು ಸಾಲು ಹಗರಣಗಳು ಹೇಗೆ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಿ ಕೇಂದ್ರದಲ್ಲಿ ಶಾಶ್ವತವಾಗಿ ಅಧಿಕಾರದಿಂದ ದೂರ ಉಳಿಯುವ ಪರಿಸ್ಥಿತಿ ಬಂದಿದೆಯೋ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಈ ಬ್ರಹ್ಮಾಂಡ ಭ್ರಷ್ಟಾಚಾರ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನ ಶಾಶ್ವತವಾಗಿ ನಿರ್ನಾಮ ಮಾಡುವುದು ಗ್ಯಾರೆಂಟಿ ಎಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ದಿನಕ್ಕೊಂದು ಲೂಟಿ ನಡೆಯುತ್ತಲೇ ಇದೆ. ಅದೇ ಪಟ್ಟಿಗೆ ಇದೀಗ ಕಸ ಗುಡಿಸುವ ಮಷಿನ್ ಸೇರಿದೆ ಎಂದಿದ್ದಾರೆ.

ಕನ್ನಡಿಗರ ತೆರಿಗೆ ಹಣವನ್ನು ಕಸ ಗುಡಿಸುವ ಮಷಿನ್ ಹೆಸರಲ್ಲಿ ಕಾಂಗ್ರೆಸ್ ಸರ್ಕಾರ ಲೂಟಿ ಮಾಡುತ್ತಿದೆ. ಈ ಯಂತ್ರದ ಮಾರುಕಟ್ಟೆ ಬೆಲೆ ₹115 ಕೋಟಿ. ಕಾಂಗ್ರೆಸ್ ಗುತ್ತಿಗೆ ಬೆಲೆ ₹613 ಕೋಟಿ. ಎರಡರ ಮಧ್ಯೆ ಅಜಗಜಾಂತರ ವ್ಯತ್ಯಾಸವಿದೆ. ಇವರ ಲೆಕ್ಕ ನೋಡಿದರೆ ಬೆಂಗಳೂರಿನ ಕಸ ಗುಡಿಸಲು ಒಂದು ದಿನದ ಖರ್ಚು ₹24 ಲಕ್ಷ ಖರ್ಚಾಗುತ್ತದೆ. ಕೋಟಿ ಕೋಟಿ ಲೂಟಿ ಹೊಡೆಯುತ್ತಿರುವ ಈ ಭ್ರಷ್ಟ ಸರ್ಕಾರಕ್ಕೆ ಜನ ಬುದ್ಧಿ ಕಲಿಸುವುದು ಖಚಿತ ಎಂದು ಅಶೋಕ್ ಎಚ್ಚರಿಸಿದ್ದಾರೆ.
ವಿಜಯೇಂದ್ರ ಸವಾಲು
ಬೆಂಗಳೂರಿನ ಕಸ ಗುಡಿಸುವ ನೆಪದಲ್ಲಿ ಕಮಿಷನ್ ಹಣವನ್ನು ಬಾಚಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಇಲ್ಲದಿದ್ದಲ್ಲಿ ಬೆಂಗಳೂರಿನ ಕಸ ಗುಡಿಸುವುದಕ್ಕೆ 617 ಕೋಟಿ ರೂಪಾಯಿ ಬಾಡಿಗೆ ಕಟ್ಟಲು ಮುಂದಾಗಿರುವ ಇವರ ನಿರ್ಧಾರದ ಹಿಂದಿನ ತರ್ಕಕ್ಕೆ, ಮೊದಲು ಕಾಂಗ್ರೆಸ್ ಸರ್ಕಾರ ಉತ್ತರಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ. ಬಿಬಿಎಂಪಿ ನೌಕರರಿಗೆ ಪಾವತಿಸಲು ಹಣವಿಲ್ಲದ ಕಾರಣ, ನಿರ್ವಹಣೆ ಇಲ್ಲದೆ ಈಗಾಗಲೇ 26 ಯಂತ್ರಗಳು ಬಳಕೆಯಾಗದೆ ಧೂಳು ತಿನ್ನುತ್ತಿವೆ. ಅದರ ಧೂಳು ತೆಗೆದು ಬಳಸಲು ಇವರಿಗೆ ಆಗುತ್ತಿಲ್ಲ. ಆದ್ದರಿಂದ ಈ ಧೂಳು-ಕಸ ಭಾಗ್ಯದ ರೂವಾರಿಗಳು ಯಾರು ಎಂದು ರಾಜ್ಯ ಸರ್ಕಾರ ಮೊದಲು ಉತ್ತರಿಸಲಿ ಎಂದಿದ್ದಾರೆ.
46 ಯಂತ್ರಗಳನ್ನು 7 ವರ್ಷಕ್ಕೆ 613 ಕೋಟಿ ರೂಪಾಯಿಗೆ ಬಾಡಿಗೆಗೆ ಪಡೆಯುವುದಾದರೆ ಪ್ರತಿ ಯಂತ್ರಕ್ಕೆ ವಾರ್ಷಿಕವಾಗಿ 1.9 ಕೋಟಿ ರೂಪಾಯಿ ಬಾಡಿಗೆಯಾಗುತ್ತದೆ. ಒಂದು ಯಂತ್ರದ ಮಾರುಕಟ್ಟೆ ಬೆಲೆ ಸುಮಾರು 1.5ರಿಂದ 3 ಕೋಟಿ ರೂಪಾಯಿ ಎನ್ನಲಾಗಿದೆ. ಒಂದು ಯಂತ್ರವನ್ನು 7 ವರ್ಷಕ್ಕೆ ಬಾಡಿಗೆಗೆ ಪಡೆಯಲು ಹೊಸದಾಗಿ ಖರೀದಿಸುವುದಕ್ಕಿಂತಲೂ ದುಬಾರಿಯಾಗಿ ಜನರ ಹೆಚ್ಚಿನ ತೆರಿಗೆ ಹಣವನ್ನು ಸರ್ಕಾರ ಏಕೆ ಖರ್ಚು ಮಾಡುತ್ತಿದೆ? ತಾಂತ್ರಿಕ ಸಮಿತಿ ಖರೀದಿಗೆ ಶಿಫಾರಸು ಮಾಡಿದರೂ, ದುಬಾರಿ "ಬಾಡಿಗೆ" ಆಯ್ಕೆ ಮಾಡಿದ್ದು ಏಕೆ? ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications