ಬೀದಿ ನಾಯಿಗಳನ್ನು ಕೊಲ್ಲಬೇಕು ಹೇಳಿಕೆ: ಸಂಸದ ಪ್ರತಾಪ್ ಸಿಂಹ ವಿರುದ್ಧ ಪ್ರಾಣಿ ಪ್ರಿಯರ ವಾಗ್ದಾಳಿ
ಪ್ರಾಣಿಗಳ ಜನನ ನಿಯಂತ್ರಣಕ್ಕಾಗಿ, ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಯಾರೂ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವಂತಿಲ್ಲ ಅಥವಾ ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾದ ಹೇಳಿಕೆಗಳನ್ನು ನೀಡುವಂತಿಲ್ಲ.
ಬೆಂಗಳೂರು, ಫೆಬ್ರವರಿ. 26: ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟುವ ಸಲುವಾಗಿ "ಬೀದಿ ನಾಯಿಗಳನ್ನು ಕನಿಕರವಿಲ್ಲದೆ ಕೊಲ್ಲಬೇಕು" ಎಂದು ಹೇಳಿಕೆ ನೀಡಿದ್ದ ಮೈಸೂರು - ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಮೇಲೆ ಪ್ರಾಣಿ ಪ್ರಿಯರು ಮುಗಿ ಬಿದ್ದಿದ್ದಾರೆ. ನಟಿ ಮತ್ತು ಶ್ವಾನ ಪ್ರೇಮಿ ಸಂಯುಕ್ತ ಹೊರನಾಡು ಅವರು ಕಾನೂನಿನ ಪ್ರಕಾರ, ಭಾರತದಲ್ಲಿ ಕೊಲ್ಲುವುದು ಕಾನೂನುಬಾಹಿರವಾಗಿದೆ. ಶಾಸಕರು ಅಥವಾ ಬೇರೆ ಯಾರಾದರೂ ಇಂತಹ ಹೇಳಿಕೆಗಳನ್ನು ನೀಡಬಾರದು ಎಂದಿದ್ದಾರೆ.
ನಾಯಿಗಳನ್ನು ನಿಯಂತ್ರಣದಲ್ಲಿಡಲು ಅತ್ಯಂತ ಮಾನವೀಯ ಮಾರ್ಗವೆಂದರೆ ಅವುಗಳಿಗೆ ಸಂತಾನಹರಣ ಮಾಡುವುದು ಮತ್ತು ಲಸಿಕೆ ಹಾಕುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದು ನಟಿ ಸಂಯುಕ್ತ ಹೊರನಾಡು ಹೇಳಿದ್ದಾರೆ. ಇತ್ತೀಚೆಗೆ ಹೈದರಾಬಾದ್ ಘಟನೆಯನ್ನು ಉಲ್ಲೇಖಿಸಿ ಮಾತನಾಡಿದ್ದ ಸಂಸದ ಪ್ರತಾಪ್ ಸಿಂಹ, ಬೀದಿ ನಾಯಿಗಳ ಬಗ್ಗೆ ವರದಿ ಮಾಡುವುದನ್ನು ನಿಲ್ಲಿಸಿ, ಮೌನವಾಗಿರಿ, ಬೀದಿ ನಾಯಿಗಳ ಸಮಸ್ಯೆಯನ್ನು ಪರಿಹರಿಸಲು ಕ್ರಮಗಳನ್ನು ತೆಗೆದುಕೊಳ್ಳಲು ನಮಗೆ ಅವಕಾಶ ಮಾಡಿಕೊಡಿ. ಅವುಗಳನ್ನು ಕನಿಕರವಿಲ್ಲದೆ ಕೊಲ್ಲಬೇಕು ಎಂದು ಹೇಳಿದ್ದರು.

"ಪ್ರಾಣಿಗಳನ್ನು ಪ್ರೀತಿಸುವುದು ಎಂದರೆ ನಾಯಿಗಳ ಸಂಖ್ಯೆ ಹೆಚ್ಚಾಗುವುದು ಅಪಾಯವಲ್ಲ ಎಂದು ನಾವು ಒಪ್ಪಿಕೊಂಡಿಲ್ಲ. ಶ್ವಾನ ಪ್ರಿಯರು ಆಹಾರ ನಿಡುವುದು ಮತ್ತು ಜವಾಬ್ದಾರಿಯುತ ಆಹಾರ ನೀಡುವುದರ ನಡುವೆ ವ್ಯತ್ಯಾಸವಿದೆ ಎಂದು ಅರ್ಥಮಾಡಿಕೊಳ್ಳಬೇಕು. ನಾಯಿಗಳಿಗೆ ಆಹಾರ ನೀಡುತ್ತಿರುವವರು ಅವುಗಳಿಗೆ ಲಸಿಕೆ ಹಾಕಿರುವುದನ್ನು ಖಚಿತಪಡಿಸಿಕೊಳ್ಳಬೇಕು" ಎಂದು ನಟಿ ಸಂಯುಕ್ತ ಹೊರನಾಡು ಹೇಳಿದ್ದಾರೆ.
ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಗೆ ಸಂಬಂಧಿಸಿದಂತೆ, "ನಾನು ಅವರ ಹೇಳಿಕೆಯನ್ನು ಖಂಡಿಸುತ್ತೇನೆ. ಇದು ಅನೈತಿಕ ಮತ್ತು ಕಾನೂನುಬಾಹಿರವಾಗಿದೆ" ಎಂದಿದ್ದಾರೆ. ಇದರ ಜೊತೆಗೆ ಪ್ರತಾಪ್ ಸಿಂಹ ಅವರ ಮೇಲೆ ವಾಗ್ದಾಳಿ ನಡೆಸಿದ ಪ್ರಾಣಿ ಹಕ್ಕುಗಳ ಹೋರಾಟಗಾರ ಅರುಣ್ ಪ್ರಸಾದ್, ಸಂಯುಕ್ತ ಹೊರನಾಡು ಅವರನ್ನು ಬೆಂಬಲಿಸಿದ್ದಾರೆ. ಡಾಗ್ ರೂಲ್ಸ್ 2001 ಗೆಜೆಟ್ ನೋಟಿಫಿಕೇಶನ್ ಮತ್ತು ಎಸ್‌ಎಲ್‌ಪಿ 691/2009 ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಅಡಿಯಲ್ಲಿ ಪ್ರಾಣಿಗಳನ್ನು ಕೊಲ್ಲುವುದು ಕಾನೂನುಬಾಹಿರವಾಗಿದೆ ಎಂದು ತಿಳಿಸಿದ್ದಾರೆ.
"ಪ್ರಾಣಿಗಳ ಜನನ ನಿಯಂತ್ರಣಕ್ಕಾಗಿ, ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಯಾರೂ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವಂತಿಲ್ಲ ಅಥವಾ ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾದ ಹೇಳಿಕೆಗಳನ್ನು ನೀಡುವಂತಿಲ್ಲ. ಹಾಗಾಗಿ, ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಯನ್ನು ನಾನು ಬಲವಾಗಿ ವಿರೋಧಿಸುತ್ತೇನ. ಅವರ ಹೇಳಿಕೆ ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ವಿರುದ್ಧವಾಗಿದೆ" ಎಂದು ಅರುಣ್ ಪ್ರಸಾದ್ ಖಂಡಿಸಿದ್ದಾರೆ.

ಇನ್ನು, ನಟಿ ಸಂಯುಕ್ತ ಹೊರನಾಡು ಇತ್ತೀಚೆಗೆ ಬೆಂಗಳೂರಿನಲ್ಲಿ ಗಾಯಗೊಂಡ ಇಲ್ಲವೇ ತಕ್ಷಣದ ನೆರವಿನ ಅಗತ್ಯವಿರುವ ಪ್ರಾಣಿಗಳಿಗಾಗಿ 24/7 ಆಂಬ್ಯುಲೆನ್ಸ್ ಸೇವೆಯನ್ನು ನೀಡುವ ಪ್ರಾಣಾ ಅನಿಮಲ್ ಫೌಂಡೇಶನ್ ಮತ್ತು ಸಹಾಯವಾಣಿಯನ್ನು ಪ್ರಾರಂಭಿಸಿದ್ದಾರೆ. ಪ್ರಾಣಾ ಅನಿಮಲ್ ಫೌಂಡೇಶನ್ ಸಿಲಿಕಾನ್ ಸಿಟಿಯಲ್ಲಿ ಆಂಬ್ಯುಲೆನ್ಸ್‌ಗಳ ಕೊರತೆ ಮತ್ತು ಪ್ರಾಣಿಗಳಿಗೆ ಸರಿಯಾದ ಚಿಕಿತ್ಸಾ ಸೌಲಭ್ಯಗಳನ್ನು ಪರಿಗಣಿಸಿ ಸೇವೆಗಳನ್ನು ಪ್ರಾರಂಭಿಸಿದೆ.
ತುರ್ತು ಆರೈಕೆಯ ವಿಳಂಬದಿಂದಾಗಿ ಅನೇಕ ಪ್ರಾಣಿಗಳು ಸಾಯುತ್ತಿವೆ. ಹೀಗಾಗಿ ಅನಿಮಲ್ ಫೌಂಡೇಶನ್ ಆರಂಭಿಸಲು ಪ್ರೇರೇಪಿಸಿತು ಎಂದು ಪ್ರಾಣಾ ಅನಿಮಲ್ ಫೌಂಡೇಶನ್ ಸಂಸ್ಥಾಪಕಿ ಹಾಗೂ ಕನ್ನಡದ ಖ್ಯಾತ ನಟಿ ಸಂಯುಕ್ತ ಹೊರನಾಡು ಹೇಳಿದ್ದರು. ಆಂಬ್ಯುಲೆನ್ಸ್ ಸೇವೆ ಉದ್ಘಾಟನೆಯನ್ನು ಬಹುಭಾಷಾ ನಟ ಪ್ರಕಾಶ್ ರಾಜ್ ಮಾಡಿದ್ದರು.












Click it and Unblock the Notifications