ಬೆಂಗಳೂರು ಕಳ್ಳನಿಂದ 60 ಸೆಕೆಂಡ್‌ನಲ್ಲೇ ಬೈಕ್ ಕದಿಯುವ ಟ್ರಿಕ್, ಎಗರಿಸಿದ್ದು 100 ಬೈಕ್
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳ್ಳರ ಹಾವಳಿ ಕಡಿಮೆಯೇನಿಲ್ಲ. ಕಳ್ಳತನಕ್ಕಾಗಿ ಒಂದಿಲ್ಲೊಂದು ಉಪಾಯ ಮಾಡುವ ಕಳ್ಳರಿಂದ ತಪ್ಪಿಸಿಕೊಳ್ಳುವುದು ಕೂಡ ಸುಲಭದ ಮಾತಲ್ಲ. ಇನ್ನು ಬೈಕ್ ಕಳ್ಳತನದ ವಿಚಾರಕ್ಕೆ ಬಂದರೆ ದೊಡ್ಡ ಮಾಫಿಯಾನೇ ಇದೆ ಎನ್ನಬಹುದು. ಅಷ್ಟರಮಟ್ಟಿಗೆ ಬೈಕ್ ಕಳ್ಳರ ಹಾವಳಿ ಬೆಂಗಳೂರಿನಲ್ಲಿದೆ. ಇದೀಗ ಬೆಂಗಳೂರು ಪೊಲೀಸರ ಕೈಗೆ ಕಿಲಾಡಿ ಕಳ್ಳನೊಬ್ಬ ಲಾಕ್ ಆಗಿದ್ದಾನೆ. ಸಿಂಪಲ್ಲಾಗಿ ಬೈಕ್ ಕದಿಯೋ ಈತನ ಟ್ರಿಕ್ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ.
ಕಳ್ಳರು ಮೊದಲೆಲ್ಲ ಬೈಕ್ ಕದಿಯಲು ನಾನಾ ಕಸರತ್ತು ಮಾಡುತ್ತಿದ್ದರು. ನಕಲಿ ಬೀಗ ಹಾಕಿ ಕದಿಯುವುದು ಅಥವಾ ಬೈಕ್ ಪಾರ್ಟ್ಸ್ ಕದಿಯುವುದು, ಬೈಕ್ ಅನ್ನು ಸ್ಟಾರ್ಟ್ ಮಾಡದೆ ತಳ್ಳಿಕೊಂಡು ಹೋಗಿ ಎಸ್ಕೇಪ್ ಆಗುವುದನ್ನು ಮಾತ್ರವೇ ಕೇಳಿದ್ದೆವು. ಆದರೆ ಈಗಿನ ಕಳ್ಳರು ಕಾಲಕ್ಕೆ ತಕ್ಕಂತೆ ಬದಲಾಗಿದ್ದಾರೆ. ಕೆಲವೇ ಸೆಕೆಂಡುಗಳಲ್ಲಿ ಎಂತಹ ಗಾಡಿಯನ್ನಾದರೂ ಎಗರಿಸುವ ಟ್ರಿಕ್ ಕಂಡುಕೊಂಡಿದ್ದಾರೆ. ಇಂತಹ ಕಳ್ಳನೊಬ್ಬ ಬರೋಬ್ಬರಿ 100 ಬೈಕ್‌ಗಳನ್ನು ಕದ್ದಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರಿನ ಕೆ.ಆರ್.ಪುರ ಪೊಲೀಸರಿಗೆ ಈ ಖದೀಮ ಸಿಕ್ಕಿಬಿದ್ದಿದ್ದಾನೆ. ಮೊದಲಿಗೆ ಪೊಲೀಸರು ಯಾರೋ ಸಣ್ಣ ಬೈಕ್ ಕಳ್ಳನಿರಬೇಕು ಎಂದೇ ಭಾವಿಸಿದ್ದರು. ಆದರೆ, ಯಾಕೋ ಅನುಮಾನಗೊಂಡು ತಮ್ಮ ಸ್ಟೈಟಲ್ಲಿ ವಿಚಾರಿಸಿದಾಗ ಈ ಕಳ್ಳನ ಪ್ರತಿಭೆ ಅನಾವರಣಗೊಂಡಿದೆ. ಕೆಲವೇ ಸೆಕೆಂಡುಗಳಲ್ಲಿ ಬೈಕ್ ಕದಿಯೋದು ಹೇಗೆ? ಎಂಬುದನ್ನು ಈ ಕಳ್ಳ ಪೊಲೀಸರ ಮುಂದೆ ತೋರಿಸಿಕೊಟ್ಟಿದ್ದಾನೆ. ಇದನ್ನು ಕಂಡ ಪೊಲೀಸರು ನಿಬ್ಬೆರಗಾಗಿದ್ದಾರೆ.
ಕೇವಲ ಒಂದು ಕಲ್ಲು, ಸ್ಕ್ರ್ಯೂಡ್ರೈವರ್ (screwdriver) ಹಾಗೂ ಬ್ಲೇಡ್ ಬಳಸಿ ಜಸ್ಟ್ ಒಂದು ನಿಮಿಷದೊಳಗೆ ಈತ ಬೈಕ್ ಕದಿಯುವ ಉಪಾಯ ಕಂಡುಕೊಂಡಿದ್ದಾನೆ. ಈ ಬಗ್ಗೆ ವಿಡಿಯೋ ಮಾಡಿಕೊಂಡಿರುವ ಪೊಲೀಸರು ಈತನ ಚಾಣಾಕ್ಷತನ ಕಂಡು ಶಾಕ್ ಕೂಡ ಆಗಿದ್ದಾರೆ. ಮೊದಲಿಗೆ ಸ್ಕ್ರ್ಯೂಡ್ರೈವರ್‌ನಿಂದ ಬೈಕ್‌ನ ಲಾಕ್‌ಗೆ ಬಲವಾಗಿ ಹೊಡೆಯುತ್ತಾನೆ. ಇದರಿಂದ ಬೀಗ ಕಳಚಿ ಬೀಳುತ್ತದೆ. ಬಳಿಕ ಜೇಬಿನಲ್ಲಿದ್ದ ಸಣ್ಣ ಬ್ಲೇಡ್‌ನಿಂದ ಬೈಕ್‌ನ ಎರಡು ವೈರ್‌ಗಳಿಗೆ ಕನೆಕ್ಷನ್ ಕೊಟ್ಟು ಥಟ್ ಅಂತ ಬೈಕ್ ಸ್ಟಾರ್ಟ್ ಮಾಡಿದ್ದಾನೆ.
ಪೊಲೀಸರು ಈ ವಿಡಿಯೋ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮತ್ತೊಂದೆಡೆ ಇಷ್ಟು ಸುಲಭವಾಗಿ ಬೈಕ್ ಕದಿಯಬಹುದು ಅಂದ್ರೆ, ನಮ್ಮ ಗಾಡಿಗಳನ್ನು ಎಲ್ಲಿಬಿಟ್ಟರೂ ಸೇಫ್ ಅಲ್ಲ ಎಂದು ಬೆಂಗಳೂರಿಗರು ಪ್ರಶ್ನೆ ಮುಂದಿಟ್ಟಿದ್ದಾರೆ. ಬೈಕ್ ತಯಾರಕರು ಇಂತಹ ಕಳ್ಳರನ್ನು ಗಮನದಲ್ಲಿಟ್ಟುಕೊಂಡು ಅತ್ಯಾಧುನಿಕ ಲಾಕಿಂಗ್ ವ್ಯವಸ್ಥೆಗಳತ್ತ ಹೆಚ್ಚು ಗಮನಹರಿಸಬೇಕು ಎಂದೂ ಕೇಳಿಕೊಳ್ಳುತ್ತಿದ್ದಾರೆ.

ಇದೇ ರೀತಿ ಈ ಕಳ್ಳ ಒಂದು ಕಲ್ಲು, ಸ್ಕ್ರ್ಯೂಡ್ರೈವರ್, ಚಾಕು ಸಹಾಯದಿಂದ ಬರೋಬ್ಬರಿ 100 ಬೈಕ್‌ಗಳನ್ನು ಕದ್ದಿದ್ದಾನೆ. ಕೆ.ಆರ್.ಪುರ ಪೊಲೀಸರು ಈತನನ್ನು ಬಂಧಿಸಿ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಆಂಧ್ರಪ್ರದೇಶ ಮೂಲದವನು ಎಂದು ತಿಳಿದುಬಂದಿದೆ. ಈತ ಎರಡೂ ರಾಜ್ಯಗಳಲ್ಲಿ ಇದೇ ಕೃತ್ಯ ಮಾಡುತ್ತಿದ್ದ. ಈ ಅಂತಾರಾಜ್ಯ ಆರೋಪಿಯನ್ನು ಬಂಧಿಸಿ, 100 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆಯಲ್ಲಿ ಕೆ.ಆರ್ ಪುರ ವ್ಯಾಪ್ತಿಯಲ್ಲಿ ದಾಖಲಾಗಿದ್ದ 23 ಪ್ರಕರಣಗಳು ಹಾಗೂ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 30 ಕೇಸ್‌ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications