ಮಗು ಸ್ಥಿತಿ ಚಿಂತಾಜನಕ: ಅನೇಸ್ತೇಶಿಯಾ ಎಡವಟ್ಟು?

ಗುರಪ್ಪನಪಾಳ್ಯ ನಿವಾಸಿ ಮುದಾಸಿರ್ ಪಾಷಾ ಹಾಗೂ ಬಸೀರಾ ದಂಪತಿಯ ಮೂರೂವರೆ ವರ್ಷದ ಹೆಣ್ಣು ಮಗು ಮರಿಯಮ್ ಕೌಸರ್ ಡಿ. 13ರಂದು ಆಟವಾಡುವಾಗ ಬಿದ್ದು ಎಡಗೈ ಮೂಳೆ ಮುರಿದಿತ್ತು. ಅದಾಗುತ್ತಿದ್ದಂತೆ ಮಗುವನ್ನು ನಗರದ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆಯುವ ವೇಳೆ ಅಸ್ವಸ್ಥಗೊಂಡ ಮಗುವನ್ನು, ಜಯನಗರದ ಮಾಲತಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದು, ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಈ ನಡುವೆ ಸಂಜಯ್ ಗಾಂಧಿ ಆಸ್ಪತ್ರೆ ವೈದ್ಯರು ಚಿಕಿತ್ಸೆ ವೇಳೆ ಅತಿಯಾಗಿ ಅರಿವಳಿಕೆ ನೀಡಿದ್ದರಿಂದ ಮಗು ಕೋಮಾ ಸ್ಥಿತಿಗೆ ತಲುಪಿದೆ ಎಂದು ಪೋಷಕರು ಆರೋಪಿಸಿದ್ದಾರೆ. 'ಡಿ. 16ರಂದು ಮಗುವನ್ನು ಪರೀಕ್ಷಿಸಿದ ವೈದ್ಯರು ಮೂಳೆ ಜರುಗಿದ್ದು, ಚಿಕಿತ್ಸೆ ನೀಡಬೇಕಾಗುತ್ತದೆ ಎಂದು ಹೇಳಿದರು. ಆದಿನ ಬೆಳಗ್ಗೆ 8.30ರ ಸುಮಾರಿಗೆ ತುರ್ತು ನಿಗಾ ಘಟಕಕ್ಕೆ ಮಗುವನ್ನು ಕರೆದೊಯ್ದ ವೈದ್ಯರು ಸಂಜೆ 3.30ರವರೆಗೆ ಮಗುವನ್ನು ತೋರಿಸಲಿಲ್ಲ.
ಈ ಬಗ್ಗೆ ಪ್ರಶ್ನಿಸಿದಾಗ ಅರಿವಳಿಕೆ ನೀಡಿರುವುದರಿಂದ ಮಗು ನಿದ್ರಿಸುತ್ತಿದೆ ಎಂದಿದ್ದರು. ಸಂಜೆ ಐಸಿಯುಗೆ ಸ್ಥಳಾಂತರಿಸಿದ ಬಳಿಕ ಮಗು ಕೈಕಾಲು ಒದರುತ್ತ ಅಸ್ವಸ್ಥಗೊಂಡಿತು. ಮೂರು ದಿನವಾದರೂ ಮಗುವಿನ ಸ್ಥಿತಿ ಸುಧಾರಿಸಲಿಲ್ಲ' ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.
'ಬಳಿಕ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಸ್ಥಳಾಂತರಿಸಿದರು. ಆದರೆ ಅಲ್ಲಿ ಮಗುವಿಗೆ ಕೃತಕ ಉಸಿರಾಟ ವ್ಯವಸ್ಥೆ ಅಗತ್ಯವಿದ್ದು, ಸದ್ಯಕ್ಕೆ ಆಸ್ಪತ್ರೆಯಲ್ಲಿ ಈ ವ್ಯವಸ್ಥೆ ಇಲ್ಲ' ಎಂದು ವೈದ್ಯರು ಹೇಳಿದರು. ನಂತರ ಜಯನಗರದ ಮಾಲತಿ ಮಣಿಪಾಲ್ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಯಿತು. ಒಂದು ವಾರದಿಂದ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗುವಿನ ಆರೋಗ್ಯ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ' ಎಂದು ಪೋಷಕರು ನೊಂದು ನುಡಿದಿದ್ದಾರೆ.
ಅನೇಸ್ತೇಶಿಯಾ ರಗಳೆ ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ಯಡವಟ್ಟು ಪ್ರಸಂಗಗಳು ಅನೇಕವು ಜರುಗಿವೆ. ಕೆಲ ಸಂದರ್ಭದಗಳಲ್ಲಿ ರೋಗಿಯ ಪ್ರಾಣ ಸಂಚಕಾರವೂ ಆಗಿದೆ. ಕಳೆದೊಂದು ವರ್ಷದಲ್ಲಿ ಬೆಂಗಳೂರಿನಲ್ಲಿ ಇಂತಹ ನಾಲ್ಕು ಪ್ರಕರಣಗಳು ಘಟಿಸಿವೆ. (ಹೆಚ್ಚಿನ ಅರವಳಿಕೆ ಚುಚ್ಚುಮದ್ದಿಗೆ ಮತ್ತೊಂದು ಸಾವು )
ಆದರೆ ತಜ್ಞರು anaesthesia overdose ಅನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ಅಧಿಕ ಪ್ರಮಾಣದಲ್ಲಿ ಅನೇಸ್ತೇಶಿಯಾವನ್ನು ನೀಡಿದ್ದರಿಂದಲೇ ಯಡವಟ್ಟಾಗಿದೆ ಎಂದು ನಿಖರವಾಗಿ ಬೊಟ್ಟುಮಾಡಿ ತೋರಿಸಲಾಗುವುದಿಲ್ಲ. (ಬೆಂಗಳೂರು : ವೈದ್ಯನ ನಿರ್ಲಕ್ಷ್ಯದಿಂದ ಮಗು ಸಾವು)
ಈ ಬಗ್ಗೆ Indian Society of Anaesthesiologistsನ ಬೆಂಗಳೂರು ಘಟಕದ ಕಾರ್ಯದರ್ಶಿ ಡಾ. ಶ್ರೀಗಣೇಶ್ ಕೆ ಅವರು ಹೀಗೆ ಹೇಳುತ್ತಾರೆ: ಸುರಕ್ಷಿತ ಪ್ರಮಾಣದಲ್ಲಿ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಅನೇಸ್ತೇಶಿಯಾ ನೀಡದರೆ ಅದು ಸುರಕ್ಷಿತವಾಗಿರುತ್ತದೆ. ಅನೇಸ್ತೇಶಿಯಾದಿಂದ ಸಾವು ಸಂಭವಿಸುವುದು ವಿರಳ.
'ರೋಗಿಯ ದೇಹದ ತೋಕವನ್ನು ಗಮನದಲ್ಲಿಟ್ಟುಕೊಂಡು ಅನೇಸ್ತೇಶಿಯಾ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. 10 ಕೆಜಿ ತೂಗುವ ಮಗುವಿಗೆ ಶಸ್ತ್ರಚಿಕಿತ್ಸೆ ವೇಳೆ 50 ಎಂಜಿ ಅನೇಸ್ತೇಶಿಯಾ ಔಷಧ ನೀಡಲಾಗುತ್ತದೆ. ರೋಗಿಗೆ ಮಧುಮೇಹ, ಅಧಿಕ ರಕ್ತದೊತ್ತಡದಿಂದ ಆರೋಗ್ಯ ವ್ಯತಿರಿಕ್ತವಾಗಿದ್ದರೆ ಅನೇಸ್ತೇಶಿಯಾ ಪ್ರಮಾಣವನ್ನು ಕಡಿಮೆ ಮಾಡಲಾಗುತ್ತದೆ'
ನಗರದಲ್ಲಿ ಒಂದು ದಿನಕ್ಕೆ 500ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳು ನಡೆಯುತ್ತಿರುತ್ತವೆ. ನಗರದಲ್ಲಿ 1,200ಕ್ಕೂ ಹೆಚ್ಚು ಅನೇಸ್ತೇಶಿಯಾ ತಜ್ಞರು ಇದ್ದಾರೆ. ನಿಜಕ್ಕು ಅನೇಸ್ತೇಶಿಯಾವನ್ನು ಅಧಿಕ ಪ್ರಮಾಣದಲ್ಲಿ ನೀಡುವ ಪ್ರಸಂಗಗಳು ಇದ್ದಿದ್ದರೆ ಈ ವೇಳೆಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಇಂತಹವು ನಡೆಯಬೇಕಿತ್ತು. ಆದರೆ ಒಂದೋ ಎರಡೂ ನಡೆದಿವೆಯಷ್ಟೇ. ಇದು ಜನರ ತಪ್ಪು ಗ್ರಹಿಕೆ. ಉಸಿರಾಟದ ತೊಂದರೆಯಿರುವವರಿಗೆ ಶಸ್ತ್ರಚಿಕಿತ್ಸೆ ಮಾಡಿದಾಗ ಇಂತಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ.












Click it and Unblock the Notifications