Amul vs Nandini: ಮೆಟ್ರೋ ನಿಲ್ದಾಣಗಳಲ್ಲಿ 'ಅಮುಲ್' ಮಳಿಗೆ ತೆರವಿಗೆ ಹೆಚ್ಚಾಯ್ತು ಆಗ್ರಹ..
ಬೆಂಗಳೂರು, ಜೂನ್ 18: ಕರ್ನಾಟಕ ರಾಜ್ಯ ಸರ್ಕಾರ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ 'ಅಮೂಲ್' ಹಾಲಿ ಮಳಿಗೆ (ಕಿಯೋಸ್ಕ್) ತೆರೆಯಲು ಅನುಮತಿ ನೀಡಿದೆ. ಇದರಿಂದ ಸ್ಥಳೀಯ ''ನಂದಿನಿ'' ಹಾಲಿನ ಬ್ರ್ಯಾಂಡ್‌ಗೆ ಹೊಡೆತ ಬೀಳುವ ಜೊತೆಗೆ ರೈತರಿಗೆ ಅನ್ಯಾಯವಾಗಲಿದೆ ಎಂದು ಜನಾಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ಆಮ್ ಆದ್ಮಿ ಪಕ್ಷವು ಸಹ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮೆಟ್ರೋ ನಿಲ್ದಾಣಗಳಲ್ಲಿ 'ಅಮುಲ್' ಮಾರಾಟಕ್ಕೆ ಅವಕಾಶ ಬೇಡ ಎಂದು ಒತ್ತಾಯಿಸಿದೆ.
ಕರ್ನಾಟಕ ರಾಜ್ಯದ ರೈತರುಗಳ ಹಾಗೂ ಸಮಸ್ತ ಕನ್ನಡಿಗರ ಹೆಮ್ಮೆಯ ನಂದಿನಿ ಉತ್ಪನ್ನಗಳಿಗೆ ಸೆಡ್ಡು ಹೊಡೆಯಲು ಹಿಂಭಾಗಲಿನಿಂದ ಪ್ರವೇಶ ಮಾಡುತ್ತಿರುವ ಅನ್ಯ ರಾಜ್ಯದ ಅಮುಲ್ ಹಾಲು ಉತ್ಪನ್ನಗಳನ್ನು ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಮಾರಾಟ ಮಾಡಲು ಅನುವು ಮಾಡಿಕೊಟ್ಟಿದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಕನ್ನಡಿಗರ ಆಕ್ರೋಶಕ್ಕೆ ತುತ್ತಾಗುವ ಮೊದಲೇ ಮೆಟ್ರೋ ನಿಗಮದವರು ಕೂಡಲೇ ಅಮುಲ್ ಉತ್ಪನ್ನಗಳನ್ನು ತೆರವುಗೊಳಿಸಬೇಕು ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಮಾಧ್ಯಮ ಸಂಚಾಲಕ ಅನಿಲ್ ನಾಚಪ್ಪ ಹೇಳಿದರು.

1 ಕೋಟಿ ಲೀಟರ್ ಹಾಲು ಮಾರಾಟ: ಸಿಎಂಗೆ ಎಎಪಿ ಪ್ರಶ್ನೆ
ಮುಖ್ಯಮಂತ್ರಿ ಸಿದ್ದರಾಮಯ್ಯ 1 ಕೋಟಿ ಲೀಟರ್ ನಂದಿನಿ ಹಾಲಿನ ಮಾರಾಟವನ್ನು ಹೆಚ್ಚಳ ಮಾಡುತ್ತೇವೆಂದು ಒಂದು ಕಡೆ ಹೇಳಿದರೆ ಮತ್ತೊಂದು ಕಡೆ ಹಿಂಬಾಗಿಲಿನಿಂದ ಅನ್ಯ ರಾಜ್ಯದ ಹಾಲು ಹಾಗೂ ಉತ್ಪನ್ನಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಅನವಶ್ಯಕ ಪೈಪೋಟಿಗೆ ಕಾರಣವಾಗಿರುವುದು ಇವರ ದ್ವಂದ್ವ ನೀತಿಗೆ ಹಿಡಿದ ಕನ್ನಡಿ ಎಂದು ಅವರು ದೂರಿದರು.
ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯದ ರೈತರಗಳು ಮುಂದಿನ ದಿವಸಗಳಲ್ಲಿ ರಾಜ್ಯದ ಬಡ ರೈತರು ತಾವು ಪ್ರತಿ ದಿವಸ ಉತ್ಪಾದಿಸುವ ಹಾಲಿನ ಸಮೇತ ಬೀದಿಗೆ ಬೀಳುವ ಪರಿಸ್ಥಿತಿಗೆ ತಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ದೂಷಿಸಿದರು.

ಬೆಂಗಳೂರು ನಮ್ಮ ಮೆಟ್ರೋ ಅಧಿಕಾರಿಗಳು ತಮ್ಮ ವ್ಯಾಪಾರಿ ಬುದ್ಧಿಯನ್ನು ಬದಿಗೊತ್ತಿ ಕನ್ನಡಿಗರ ಹಾಗೂ ರಾಜ್ಯದ ರೈತರುಗಳ ಅಸ್ಮಿತೆಯನ್ನು ಪ್ರಶ್ನಿಸುವಂತಹ ಇಂತಹ ಕುಕೃತ್ಯಗಳಿಗೆ ಕೈ ಹಾಕಿದಲ್ಲಿ ಆಮ್ ಆದ್ಮಿ ಪಕ್ಷ ರಾಜ್ಯದ ರೈತರುಗಳ ಸಮೇತ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಅನಿಲ್ ನಾಚಪ್ಪ ಅವರು ಎಚ್ಚರಿಕೆ ನೀಡಿದರು.
ಡಿಕೆ ಶಿವಕುಮಾರ್ ಹೇಳಿದ್ದೇನು?
'ಅಮುಲ್' ಮಳಿಗೆಗೆ ವಿರುದ್ಧದ ಆಕ್ಷೇಪ ಕುರಿತು ಮಾತನಾಡಿದ ಡಿಕೆ ಶಿವಕುಮಾರ್ ಅವರು, ಕೇವಲ ಎರಡು ಕಡೆ 'ಅಮುಲ್' ಮಳಿಗೆಗೆ ಅವಕಾಶ ನೀಡಲಾಗಿದೆ. ಉಳಿದಂತೆ ಎಂಟು ಕಡೆಗಳಲ್ಲಿ ನಂದಿನ ಬ್ರ್ಯಾಂಡ್ ಮಳಿಗೆ ತೆರೆಯಲು ಅವಕಾಶ ನೀಡಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಹೀಗಿದ್ದರೂ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.












Click it and Unblock the Notifications