ಬೆಂಗಳೂರು; ಒನ್ ವೇನಲ್ಲಿ ಬಂದ ಆಂಬ್ಯುಲೆನ್ಸ್ ಡಿಕ್ಕಿ, 2 ಸಾವು
ಬೆಂಗಳೂರು, ಜನವರಿ 09 : ರೋಗಿಯನ್ನು ಕರೆದುಕೊಂಡು ಹೋಗುತ್ತಿದ್ದ ಆಂಬ್ಯುಲೆನ್ಸ್ ಬೈಕ್‌ಗೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ಅಶೋಕ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತಪಟ್ಟವರನ್ನು ಮುರುಗೇಶಪಾಳ್ಯ ನಿವಾಸಿಗಳಾದ ಮೊಹಮ್ಮದ್ ಮನ್ಸೂರ್ (28), ಮೈಸೂರಿನ ನಿವಾಸಿ ಇಬ್ರಾಹಿಂ ಖಲೀಲ್ (29) ಎಂದು ಗುರುತಿಸಲಾಗಿದೆ. ವಿವೇಕನಗರ ಸಮೀಪದ ಶ್ರೀನಿವಾಗಿಲು ಜಂಕ್ಷನ್ ಬಳಿ ಈ ಅಪಘಾತ ನಡೆದಿದೆ.
ಜನವರಿ 7ರ ಸಂಜೆ ಮಣಿಪಾಲ್ ಆಸ್ಪತ್ರೆಯಿಂದ ಅಭಿಷೇಕ್ ಎಂಬ ಆಂಬ್ಯುಲೆನ್ಸ್ ಡ್ರೈವರ್ ಸೆಂಟ್ ಜಾನ್ಸ್ ಆಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಹೋಗುತ್ತಿದ್ದ. ಶ್ರೀನಿವಾಗಿಲು ಜಂಕ್ಷನ್ ಬಳಿ ಒನ್ ವೇನಲ್ಲಿ ವೇಗವಾಗಿ ಬಂದ ಆಂಬ್ಯುಲೆನ್ಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಕೆಲಸ ಮುಗಿಸಿಕೊಂಡು ವಾಪಸ್ ಆಗುತ್ತಿದ್ದ ಮೊಹಮ್ಮದ್ ಮನ್ಸೂರ್ ಮತ್ತು ಇಬ್ರಾಹಿಂ ಖಲೀಲ್ ಬೈಕ್‌ನಲ್ಲಿದ್ದರು. ಅಪಘಾತದಲ್ಲಿ ಗಾಯಗೊಂಡ ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಇಬ್ಬರು ಮೃತಪಟ್ಟಿದ್ದಾರೆ.
ಮೃತರಿಬ್ಬರೂ ಸುಲ್ತಾನ್ ಜ್ಯುವೆಲರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆಂಬ್ಯುಲೆನ್ಸ್ ವೇಗವಾಗಿ ಬಂದಿದ್ದೆ ಘಟನೆಗೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ. ಅಶೋಕ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್ ಸಂಚಾರ ನಿಯಮ ಉಲ್ಲಂಘನೆ ಮಾಡಿ ಒನ್ ವೇನಲ್ಲಿ ಸಂಚಾರ ನಡೆಸಲು ಅವಕಾಶವಿದೆ. ಆದರೆ, ಆಂಬ್ಯುಲೆನ್ಸ್ ಚಾಲಕರು ಸಹ ಎಚ್ಚರಿಕೆಯಿಂದ ಇರಬೇಕು. ಬೇರೆಯವರ ಜೀವಕ್ಕೆ ಹಾನಿಯಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಅವಕಾವೂ ಇದೆ.












Click it and Unblock the Notifications