ಬೆಂಗಳೂರು ಕೆಸಿ ಜನರಲ್ ಆಸ್ಪತ್ರೆಯ ಎಡವಟ್ಟು? : ತಾಯಿ ಹೊಟ್ಟೆಯಲ್ಲೇ ಕಣ್ಮುಚ್ಚಿದ್ದ ಕಂದಮ್ಮ
ಬೆಂಗಳೂರು, ಡಿಸೆಂಬರ್ 18: ಬೆಂಗಳೂರು ನಗರದಲ್ಲಿರುವ ಕೆಸಿ ಜನರಲ್ ಆಸ್ಪತ್ರೆಯ ಎಡವಟ್ಟಿನಿಂದ ತಾಯಿಯ ಹೊಟ್ಟೆಯೊಳಗೆ ಮಗು ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ. ಆಸ್ಪತ್ರೆ ನಿಬ್ಬಂದಿ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿರುವ ಘಟನೆ ಇಂದು(ಡಿಸೆಂಬರ್ 18) ರಂದು ನಡೆದಿದೆ.
ಚೊಕ್ಕಸಂದ್ರದ ದೇವಿಕಾ ಎನ್ನುವ ಮಹಿಳೆ ನಗರದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಒಂಬತ್ತು ತಿಂಗಳು ಭರ್ತಿಯಾಗಿ ಹನ್ನೆರಡು ದಿನದ ಬಳಿಕ ಡೆಲಿವರಿಗೆ ದಿನಾಂಕ ನೀಡಲಾಗಿತ್ತು. ದಿನಾಂಕ ಮೀರಿದರೂ ಹೆರಿಯಾಗದ ಕಾರಣ ಸಿಜರಿಯನ್ ಮಾಡುವಂತೆ ದೇವಿಕಾ ಕುಟುಂಬಸ್ಥರು ವೈದ್ಯರಲ್ಲಿ ಮನವಿ ಮಾಡಿದ್ದರು. ಆದರೆ ಇದಕ್ಕೆ ಒಪ್ಪದ ಆಸ್ಪತ್ರೆ ಸಿಬ್ಬಂದಿ ನಾರ್ಮಲ್ ಹೆರಿಗೆಗೆ ತಯಾರಿ ಮಾಡಿದ್ದಾರೆ.

ಕೆಲ ಸಮಯ ಕಳೆದ ನಂತರ ಆಸ್ಪತ್ರೆ ಸಿಬ್ಬಂದಿ ನಾರ್ಮಲ್ ಹೆರಿಗೆ ಆಗಲ್ಲ ಎಂದು ಸಿಜರಿಯನ್ ಮಾಡುತ್ತೇವೆ ಎಂದು ಮತ್ತೆ ತಯಾರಿ ನಡೆಸಿದ್ದಾರೆ. ಈ ನಡುವೆ ಸಿಜರಿಯನ್ ವೇಳೆ ಗಲೀಜು ನೀರು ಕುಡಿದು ಮಗು ಮೃತಪಟ್ಟಿದೆ ಎಂದು ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರಿಂದ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಆಸ್ಪತ್ರೆ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಈ ಸಂಬಂಧ ಮಲ್ಲೇಶ್ವರಂ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ.
ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎನ್ನುವ ಆರೋಪದ ಬಗ್ಗೆ ಕೆಸಿ ಜನರಲ್ ಮೆಡಿಕಲ್ ಆಫೀಸರ್ ಡಾ.ಮೋಹನ್ ಪ್ರತಿಕ್ರಿಯಿಸಿದ್ದಾರೆ. ಡಾ.ವಿಜಯಲಕ್ಷ್ಮಿ ವೈದ್ಯೆ ಇವರನ್ನು ನೋಡುತ್ತಿದ್ದರು. ಡಿಸೆಂಬರ್ 10ಕ್ಕೆ ಡೆಲಿವರಿ ದಿನಾಂಕ ಇತ್ತು. ಸಿಜರಿಯನ್ ಅಗತ್ಯವಿಲ್ಲ ಅಂತಾ ನಿರ್ಧಾರಕ್ಕೆ ಬಂದಿದ್ದರು. ಆದರೆ ನಾರ್ಮಲ್ ಆಗದೇ ಇರುವುದರಿಂದ ಸಿಜರಿಯನ್ ಮಾಡಿದ್ದಾರೆ. ಹಾರ್ಟ್ ಬೀಟ್ ಕಡಿಮೆ ಇತ್ತು ಎಂದು ಎನ್‌ಐಸಿಯುಗೆ ಶಿಫ್ಟ್ ಮಾಡಿದ್ದಾರೆ.

ವೈದ್ಯೆ ನನ್ನ ಕಡೆಯಿಂದ ತಪ್ಪಾಗಿಲ್ಲ ಎಂದು ಹೇಳಿದ್ದಾರೆ. ಆದರೆ ವೈದ್ಯೆಯ ನಿರ್ಲಕ್ಷ್ಯ ಇದ್ದರೆ ಖಂಡಿತಾ ಕ್ರಮ ಕೈಗೊಳ್ಳುತ್ತೇವೆ. ಆಂತರಿಕ ತನಿಖೆ ಮಾಡುತ್ತೇವೆ. ವರದಿ ತಯಾರಿ ಮಾಡಿದ ಬಳಿಕ ಕೇಸ್ ಶೀಟ್ ತೆಗೆದುಕೊಂಡು ನಿರ್ಧಾರ ಮಾಡುತ್ತೇವೆ. ವೈದ್ಯರ ನಿರ್ಲಕ್ಷ್ಯ ದಾಖಲೆಯಲ್ಲಿ ಬಂದರೆ ಖಂಡಿತಾ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಘಟನೆಯ ಬಗ್ಗೆ ಮೃತ ಮಗುವಿನ ಅಜ್ಜಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, "ಒಂಬತ್ತು ತಿಂಗಳು ತುಂಬಿ ಎಂಟು ದಿನಗಳಾದರೂ ಹೆರಿಗೆ ಆಗಿರಲಿಲ್ಲ. ಕೆಸಿ ಜನರಲ್ ನವರು ಡಿಸೆಂಬರ್ 8ಕ್ಕೆ ಹೆರಿಗೆಗೆ ಡೇಟ್ ಕೊಟ್ಟಿದ್ದರು. 10ನೇ ತಾರೀಖು ಬಂದರೂ ಹೆರಿಗೆ ಮಾಡಲಿಲ್ಲ. ಭಾನುವಾರ ಬಂದುಬಿಡಿ ಹೆರಿಗೆ ಮಾಡುತ್ತೇವೆ ಅಂತ ಹೇಳಿದರು. ನಿನ್ನೆ ಗರ್ಭಿಣಿಯನ್ನು ದಾಖಲು ಮಾಡಿಕೊಂಡಿದ್ದರು. ಆದರೆ ಮಗುವನ್ನು ಸಾಯಿಸಿದ್ದಾರೆ. ಮಗು ಬಗ್ಗೆ ಕೇಳಿದರೆ ಹೊಟ್ಟೆಯಲ್ಲೇ ನಿಮ್ಮ ಮಗು ಸಾವನ್ನಪ್ಪಿದೆ. ನಾವೇನು ಮಾಡೋಕಾಗಲ್ಲ ಅಂತ ಹೇಳಿದರು. ನಮ್ಮ ಮಗುವಿನ ಸಾವಿಗೆ ನೇರವಾಗಿ ಕೆಸಿ ಜನರಲ್ ಆಸ್ಪತ್ರೆಯವರೇ ಹೊಣೆ ಎಂದು ಆರೋಪಿಸಿದ್ದಾರೆ.












Click it and Unblock the Notifications