ಹೆಲ್ಮೆಟ್‌ನಿಂದಲೇ ಸಂಚಾರ ನಿಯಮ ಉಲ್ಲಂಘನೆ ಪತ್ತೆ, ಬೆಂಗಳೂರು ಟೆಕ್ಕಿಯ ಅನ್ವೇಷಣೆ
ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ತನ್ನ ಹೆಲ್ಮೆಟ್ ಅನ್ನು ಕೃತಕ ಬುದ್ಧಿಮತ್ತೆಯಿಂದ ನಡೆಸಲ್ಪಡುವ "ಟ್ರಾಫಿಕ್ ಪೊಲೀಸ್ ಸಾಧನ"ವಾಗಿ ಪರಿವರ್ತಿಸುವ ಮೂಲಕ ವೈರಲ್ ಆಗಿದ್ದಾರೆ. ಬೆಂಗಳೂರು ನಗರದಲ್ಲಿನ ಸಂಚಾರ ನಿಯಮಗಳ ಪಾಲನೆಯಲ್ಲಿ ಶಿಸ್ತಿನ ಕೊರತೆ ಇರುವುದನ್ನು ಕಂಡ ಬೇಸತ್ತಿದ್ದ ಇವರು ಕೊನೆಗೆ ಈ ಉಪಾಯ ಕಂಡುಕೊಂಡಿದ್ದಾರೆ.
ಹೆಲ್ಮೆಟ್‌ನಲ್ಲಿ ಕ್ಯಾಮೆರಾ ಮತ್ತು ಎಐ ಸಾಫ್ಟ್‌ವೇರ್ ಅಳವಡಿಸಲಾಗಿದ್ದು, ಹೆಲ್ಮೆಟ್ ಧರಿಸದೆ ಸವಾರಿ, ಸಿಗ್ನಲ್ ಜಂಪ್, ತಪ್ಪು ಲೇನ್ ಇತ್ಯಾದಿಗಳಂತಹ ಟ್ರಾಫಿಕ್ ಉಲ್ಲಂಘನೆಗಳನ್ನು ಗುರುತಿಸಿ, ಅದರ ಫೋಟೋ, ಸ್ಥಳ ಮತ್ತು ನಂಬರ್ ಪ್ಲೇಟ್‌ನೊಂದಿಗೆ ಪೊಲೀಸರಿಗೆ ಇಮೇಲ್ ಆಗಿ ಮಾಹಿತಿ ರವಾನಿಸುತ್ತದೆ. ವಾಹನ ಸವಾರನೊಬ್ಬ ಹೆಲ್ಮೆಟ್ ಧರಿಸದೆ ಸವಾರಿ ಮಾಡುವುದನ್ನು ಲೈವ್‌ನಲ್ಲೇ ರಿಪೋರ್ಟ್ ಮಾಡಿರುವ ಫೋಟೋ ವೈರಲ್ ಆಗಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಪಂಕಜ್ ತನ್ವರ್, ನಾನು ರಸ್ತೆಯಲ್ಲಿ ಮೂರ್ಖ ಜನರಿಂದ ಬೇಸತ್ತಿದ್ದರಿಂದ ನನ್ನ ಹೆಲ್ಮೆಟ್ ಅನ್ನು ಸಂಚಾರ ಪೊಲೀಸ್ ಸಾಧನವಾಗಿ ಬಳಸಲು ಪ್ರಾರಂಭಿಸಿದೆ. ಈ ಎಐ ವ್ಯವಸ್ಥೆಯು ಬಹುತೇಕ ನೈಜ ಸಮಯದಲ್ಲಿ ಕಾರ್ಯನಿರ್ವಹಿಸುತ್ತದೆ. ಸಂಚಾರ ನಿಯಮ ಉಲ್ಲಂಘನೆಗಳನ್ನು ಗುರುತಿಸುತ್ತದೆ ಎಂದು ವಿವರಿಸಿದ್ದಾರೆ. ಈ ಸಾಧನವು ನಿಯಮ ಉಲ್ಲಂಘಿಸುವವರ ಚಿತ್ರಗಳನ್ನು ಸೆರೆಹಿಡಿಯುತ್ತದೆ, ಸ್ಥಳ ಮತ್ತು ನಂಬರ್ ಪ್ಲೇಟ್‌ನೊಂದಿಗೆ ನೇರವಾಗಿ ಪೊಲೀಸರಿಗೆ ಮಾಹಿತಿ ಕಳುಹಿಸುತ್ತದೆ ಎಂದಿದ್ದಾರೆ.
ಫಿದಾ ಆದ ಬೆಂಗಳೂರು ಮಂದಿ
ಈಗಲಾದರೂ ಸುರಕ್ಷಿತವಾಗಿ ವಾಹನ ಸವಾರಿ ಮಾಡಿ ಅಥವಾ ವಿಷಾದಿಸಿ ಎಂದು ಬೆಂಗಳೂರಿಗರಿಗೆ ಕರೆ ನೀಡಿರುವ ಪಂಕಜ್, ಹೆಲ್ಮೆಟ್ ಇಲ್ಲದ ಸ್ಕೂಟರ್ ಸವಾರನ ಬಗ್ಗೆ ಲೈವ್‌ನಲ್ಲೇ ವರದಿ ಮಾಡುವುದನ್ನು ವಿಡಿಯೋದಲ್ಲಿ ಉದಾಹರಣೆಯಾಗಿ ಹಂಚಿಕೊಂಡಿದ್ದಾರೆ. ಪೋಸ್ಟ್ ವೈರಲ್ ಆಗಿದ್ದು, 1.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.
i was tired of stupid people on road so i hacked my helmet into a traffic police device 🚨
— Pankaj (@the2ndfloorguy) January 3, 2026
while i ride, ai agent runs in near real time, flags violations, and proof with location & no plate goes straight to police.
blr people - so now ride safe… or regret it. pic.twitter.com/lWaRO01Jaq
ಸಾಮಾಜಿಕ ಮಾಧ್ಯಮ ಬಳಕೆದಾರರು ಪಂಕಜ್ ಅವರ ಅನ್ವೇಷಣೆಯನ್ನು ಶ್ಲಾಘಿಸಿದ್ದಾರೆ. ಕೆಲವರು ಇದೇ ರೀತಿಯ ತಂತ್ರಾಂಶವನ್ನು ಕಾರ್ ಡ್ಯಾಶ್‌ಕ್ಯಾಮ್‌ಗಳಿಗೂ ಅನ್ವಯಿಸಬಹುದು ಎಂದು ಸೂಚಿಸಿದ್ದಾರೆ. ಎಲ್ಲ ವಾಹನಗಳೂ ಇದೇ ತಂತ್ರಜ್ಞಾನದೊಂದಿಗೆ ಬರಬೇಕು. ಆಗ ಪೊಲೀಸರಿಗೂ ಕೆಲಸ ಕಡಿಮೆಯಾಗುತ್ತೆ ಎಂದು ಹಾಸ್ಯ ಮಾಡಿದ್ದಾರೆ.
ಇದೊಂದು ಅದ್ಭುತವಾದ ಐಡಿಯಾ, ಬಹುಶಃ ಡ್ಯಾಶ್‌ಕ್ಯಾಮ್‌ಗಳನ್ನು ಈ ಸೇವೆಗೆ ಸೇರಿಸಿದರೆ, ಸಂಚಾರ ನಿಯಮ ಉಲ್ಲಂಘನೆ ವರದಿ ಮಾಡಿದ ವ್ಯಕ್ತಿಗೆ ಪ್ರೋತ್ಸಾಹ ಸಿಗಲಿದೆ. ಇದರಿಂದ ಜನರು ಹೆಚ್ಚು ಬಳಕೆಗೆ ಮುಂದಾಗುತ್ತಾರೆ ಎಂದಿದ್ದಾರೆ. ರಸ್ತೆ ಮೇಲೆ ತಮ್ಮ ಕೋಪವನ್ನು ಉಪಾಯವಾಗಿ ಪರಿವರ್ತಿಸಿದ್ದಾರೆ. ಇದರಿಂದ ಭಯಪಡಬೇಕೋ ಅಥವಾ ಪ್ರಭಾವಿತರಾಗಬೇಕೋ ತಿಳಿಯುತ್ತಿಲ್ಲ. ಇದು ಎಲ್ಲೆಡೆ ಕಾರ್ಯರೂಪಕ್ಕೆ ಬಂದರೆ ಸಂಚಾರ ಶಿಸ್ತು ಕ್ರಮೇಣ ಜನರಲ್ಲಿ ಕಾಣಬಹುದು ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಪೋಸ್ಟ್ ಮಾಡಿದ ಚಿತ್ರದ ಪ್ರಕಾರ, "ನಮಸ್ಕಾರ ಪಂಕಜ್, ಬೆಂಗಳೂರು ನಗರ ಪೊಲೀಸರಿಂದ ಶುಭಾಶಯಗಳು. ಹೆಲ್ಮೆಟ್ ಆಧಾರಿತ ಸಂಚಾರ ಉಲ್ಲಂಘನೆ ಪತ್ತೆಗೆ ಸಂಬಂಧಿಸಿದಂತೆ ನಿಮ್ಮ ಇತ್ತೀಚಿನ ಪೋಸ್ಟ್‌ಗಳನ್ನು ನಾವು ನೋಡಿದ್ದೇವೆ. ರಸ್ತೆ ಸುರಕ್ಷತಾ ದೃಷ್ಟಿಕೋನದಿಂದ ಈ ಕಲ್ಪನೆಯು ತುಂಬಾ ನವೀನ ಮತ್ತು ಆಸಕ್ತಿದಾಯಕವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಈ ಅವಕಾಶವನ್ನು ನಾವು ಪ್ರಶಂಸಿಸುತ್ತೇವೆ" ಎಂದು ಬೆಂಗಳೂರು ಪೊಲೀಸ್ ಇಲಾಖೆ ಕೂಡ ಶ್ಲಾಘಿಸಿದೆ.












Click it and Unblock the Notifications