ಬೆಂಗಳೂರಿನಲ್ಲಿ ಗರ್ಭಪಾತ ದಂಧೆ: ಕಸದ ಬುಟ್ಟಿಯಲ್ಲಿ ಹೆಣ್ಣು ಭ್ರೂಣ ಪತ್ತೆ- ಆಸ್ಪತ್ರೆಗೆ ಸೀಲ್!
ಬೆಂಗಳೂರು ಡಿಸೆಂಬರ್ 14: ಬೆಂಗಳೂರಿನಲ್ಲಿ ಗರ್ಭಪಾತ ದಂಧೆ ಎಗ್ಗಿಲ್ಲದಂತೆ ನಡೆಯುತ್ತಿದೆ. 5 ತಿಂಗಳ ಹೆಣ್ಣು ಭ್ರೂಣ ಕಸದ ಬುಟ್ಟಿಯಲ್ಲಿ ಪತ್ತೆಯಾಗಿದ್ದು ಮನುಕುಲವನ್ನೇ ಬೆಚ್ಚಿ ಬೀಳಿಸಿದೆ.
ಹೌದು... ನಗರದ ಹೊರವಲಯದ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿಯಲ್ಲಿ ಎಸ್‌ಪಿಜಿ ಆಸ್ಪತ್ರೆಯ ಕಸದ ತೊಟ್ಟಿಯಲ್ಲಿ ಹೆಣ್ಣು ಭ್ರೂಣ ಪತ್ತೆಯಾದ ಹಿನ್ನೆಲೆಯಲ್ಲಿ ಎಸ್‌ಪಿಜಿ ಆಸ್ಪತ್ರೆ ಮತ್ತು ಡಯಾಗ್ನೋಸ್ಟಿಕ್ ಸೆಂಟರ್‌ಗೆ ಸೀಲ್ ಹಾಕಲಾಗಿದ್ದು, ಏಳು ಮಂದಿ ನೌಕರರನ್ನು ವಶಕ್ಕೆ ಪಡೆಯಲಾಗಿದೆ. ಆಸ್ಪತ್ರೆಯ ಮೇಲೆ ದಾಳಿ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ಹೆಣ್ಣು ಭ್ರೂಣದ ಅಕ್ರಮ ಗರ್ಭಪಾತ ಮಾಡಿರುವುದು ಪತ್ತೆ ಮಾಡಿದ್ದಾರೆ.

ಮಂಡ್ಯ ಹಾಗೂ ಮೈಸೂರಿನಲ್ಲಿ ಹೆಣ್ಣು ಭ್ರೂಣ ಹತ್ಯೆ ದಂಧೆ ಬೆನ್ನಲ್ಲೇ ಆಸ್ಪತ್ರೆ, ಡಯಾಗ್ನೋಸ್ಟಿಕ್ ಕೇಂದ್ರಗಳ ಮೇಲೆ ನಿಗಾ ಇಡುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿತ್ತು. ಹೊಸಕೋಟೆ ತಾಲೂಕು ಅಧಿಕಾರಿಗಳು ಕಳೆದ ವಾರ ಎಸ್‌ಪಿಜಿ ಆಸ್ಪತ್ರೆ ಮತ್ತು ಡಯಾಗ್ನೋಸ್ಟಿಕ್ ಸೆಂಟರ್‌ಗೆ ಭೇಟಿ ನೀಡಿ ಹಲವು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದರು. ಪರಿಶೀಲನೆ ವೇಳೆ ಹಲವು ವ್ಯತ್ಯಯ ಕಂಡು ಬಂದಿದ್ದರಿಂದ ಅಧಿಕಾರಿಗಳು ಬುಧವಾರ ಮತ್ತೆ ಕೇಂದ್ರಕ್ಕೆ ಭೇಟಿ ನೀಡಿದರು.
ದಾಳಿಯ ವೇಳೆ, ಆಪರೇಷನ್ ಥಿಯೇಟರ್‌ನಲ್ಲಿ ಮಹಿಳೆಯೊಬ್ಬರು ಮಲಗಿರುವುದು ಮತ್ತು ಆಕೆಯ ಐದು ತಿಂಗಳ ಭ್ರೂಣವನ್ನು ಡಸ್ಟ್‌ಬಿನ್‌ನಲ್ಲಿ ಎಸೆದಿರುವುದನ್ನು ಅಧಿಕಾರಿಗಳು ಕಂಡುಕೊಂಡರು. ಅಧಿಕಾರಿಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಏಳು ಮಂದಿ ನೌಕರರನ್ನು ಬಂಧಿಸಿದ್ದಾರೆ. ಇಂತಹ ಎಷ್ಟು ಅಕ್ರಮ ಗರ್ಭಪಾತ ಮಾಡಲಾಗಿದೆ ಎಂಬುದನ್ನು ಪತ್ತೆ ಮಾಡಲು ಅಧಿಕಾರಿಗಳು ಇಂದು ಆಸ್ಪತ್ರೆಯ ಸಿಬ್ಬಂದಿಯನ್ನು ಪ್ರಶ್ನಿಸಲಿದ್ದಾರೆ. ಪ್ರಾಥಮಿಕ ವರದಿಯ ನಂತರ ಇಂದು ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.
"ರೇಡಿಯಾಲಜಿಸ್ಟ್ ಮತ್ತು ಈ ಆಸ್ಪತ್ರೆಯ ಮಾಲೀಕರಾಗಿರುವ ಡಿ ಶ್ರೀನಿವಾಸ್ ಅವರ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಸಿಬ್ಬಂದಿ ನಮಗೆ ತಿಳಿಸಿದ್ದರಿಂದ ಡಿ ಶ್ರೀನಿವಾಸ್ ತಲೆಮರೆಸಿಕೊಂಡಿರುವುದು ತಿಳಿದಿದೆ. ಸಿಬ್ಬಂದಿ ಕೂಡ ಸಹಕರಿಸುತ್ತಿಲ್ಲ ಹೀಗಾಗಿ ಪೊಲೀಸರ ಸಹಾಯ ಕೇಳಿದ್ದೇವೆ. ನಾವು ಪ್ರಕರಣವನ್ನು ಅಂತ್ಯಕ್ಕೆ ಕೊಂಡೊಯ್ಯುತ್ತೇವೆ'' ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಹೆಣ್ಣು ಭ್ರೂಣ ಹತ್ಯೆ ತಡೆಗೆ ಹೊಸ ನೀತಿ
ಮಂಡ್ಯ, ಬೆಂಗಳೂರು ಮತ್ತು ಮೈಸೂರಿನಲ್ಲಿ ಹಬ್ಬಿದ್ದ ಹೆಣ್ಣು ಭ್ರೂಣ ಹತ್ಯೆ ದಂಧೆಯನ್ನು ಪೊಲೀಸರು ಭೇದಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶದ ಮೇರೆಗೆ ಪ್ರಕರಣವನ್ನು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಹಸ್ತಾಂತರಿಸಲಾಯಿತು. ಈ ಪ್ರಕರಣಗಳಲ್ಲಿ ಇದುವರೆಗೆ 10ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ರಾಜ್ಯದಲ್ಲಿ ಹೆಣ್ಣು ಭ್ರೂಣಹತ್ಯೆ ತಡೆ ಹಾಗೂ ಲಿಂಗ ಅನುಪಾತ ಸುಧಾರಿಸಲು ಹೊಸ ನೀತಿ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಹೆಣ್ಣು ಮಗುವನ್ನು ಗಂಡುಮಗುವಿಗೆ ಹೋಲಿಸಿದಾಗ ಗಂಡು ಮಗುವಿಗೆ ಆದ್ಯತೆ ಮತ್ತು ಹೆಣ್ಣು ಮಗುವಿನ ಜನನದ ಬಗ್ಗೆ ಕಡಿಮೆಮಹತ್ವಗಳಿಂದಾಗಿ ಹೆಣ್ಣು ಶಿಶುವಿನ ಹತ್ಯೆಯನ್ನು ಉದ್ದೇಶ ಪೂರ್ವಕವಾಗಿ ಮಾಡಲಾಗುತ್ತಿದೆ. ಗಂಡುಮಕ್ಕಳಿಗೆ ಹೋಲಿಸಿದಾಗ, ಹೆಣ್ಣುಮಕ್ಕಳಿಗೆ ಸಾಂಸ್ಕೃತಿಕವಾಗಿ ಕಡಿಮೆ ಪ್ರಮಾಣದ ಮಹತ್ವವಿದೆಯೋ ಅಂತಹ ಪ್ರದೇಶಗಳಲ್ಲಿ ಹೆಣ್ಣು ಶಿಶು ಹತ್ಯೆಯಂತಹ ಪದ್ಧತಿ ಆಚರಣೆಯಲ್ಲಿದೆ.












Click it and Unblock the Notifications