ವಿಧಾನಸೌಧದಲ್ಲಿ 10 ಲಕ್ಷ ನಗದು ಪತ್ತೆ ಪ್ರಕರಣ :ಸಿ.ಸಿ.ಪಾಟೀಲ್ ವಿರುದ್ಧ ತನಿಖೆ ಕೈಗೊಳ್ಳಲು ಎಎಪಿ ಒತ್ತಾಯ
ಬೆಂಗಳೂರು, ಜನವರಿ 06: ವಿಧಾನಸೌಧದಲ್ಲಿ ಅಧಿಕಾರಿಯೊಬ್ಬರ ಬಳಿ 10 ಲಕ್ಷ ರೂಪಾಯಿ ನಗದು ಸಿಕ್ಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿ ಜೆ.ಜಗದೀಶ್ ಹಾಗೂ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ವಿರುದ್ಧ ಸೂಕ್ತ ತನಿಖೆ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.
ಬೆಂಗಳೂರಿನ ಆಮ್ ಆದ್ಮಿ ಪಾರ್ಟಿ (ಎಎಪಿ) ರಾಜ್ಯ ಕೇಂದ್ರ ಕಚೇರಿಯಲ್ಲಿ ಈ ಕುರಿತು ಮಾತನಾಡಿದ ಎಎಪಿ ವಕ್ತಾರ ಹಾಗೂ ಮಾಜಿ ಕೆಎಎಸ್ ಅಧಿಕಾರಿ ಕೆ.ಮಥಾಯಿ ಅವರು, ವಿಧಾನಸೌಧಕ್ಕೆ ತೆರಳುತ್ತಿದ್ದ ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ಜೆ.ಜಗದೀಶ್ ಬಳಿ ಹತ್ತು ಲಕ್ಷ ರೂಪಾಯಿ ಪತ್ತೆಯಾಗಿದೆ. ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹಾಗೂ ಅವರ ಆಪ್ತ ಕಾರ್ಯದರ್ಶಿಯ ಹೆಸರನ್ನು ಬಾಯ್ಬಿಟ್ಟಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ವಿಧಾನಸೌಧದಲ್ಲಿ ಇಷ್ಟು ಪ್ರಮಾಣದಲ್ಲಿ ಹಣ ಪತ್ತೆಯಾಗಿರುವುದು ಇದು ಗುತ್ತಿಗೆ ಕಾಮಗಾರಿಯ. 40 ಪರ್ಸೆಂಟ್ ಕಮಿಷನ್ ಹಣವೆಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಅವರು ಸರ್ಕಾರಕ್ಕೆ ಆಗ್ರಹಿಸಿದರು.

ಬಿಜೆಪಿಯಿಂದ ಪವಿತ್ರ ಸ್ಥಳದ ಪಾವಿತ್ರ್ಯಕ್ಕೆ ಧಕ್ಕೆ
ಕೆಂಗಲ್ ಹನುಮಂತಯ್ಯನವರು ಕಟ್ಟಿಸಿದ ವಿಧಾನಸೌಧಕ್ಕೆ ರಾಜ್ಯದ ಆಡಳಿತದಲ್ಲಿ ಪವಿತ್ರವಾದ ಸ್ಥಾನವಿದೆ. ಆದರೆ ಭ್ರಷ್ಟ ಬಿಜೆಪಿ ಸರ್ಕಾರವು ವಿಧಾನಸೌಧವನ್ನು 40 ಪರ್ಸೆಂಟ್ ಕಮಿಷನ್ ದಂಧೆಗೆ ಬಳಸಿದೆ. ಈ ಮೂಲಕ ವಿಧಾನಸೌಧದ ಪಾವಿತ್ರ್ಯತೆಗೆ ಧಕ್ಕೆ ತಂದಿದೆ.
ಬಿಜೆಪಿ ಸಚಿವರು, ಶಾಸಕರು, ಅಧಿಕಾರಿಗಳು ವಿಧಾನಸೌಧವನ್ನು ಭ್ರಷ್ಟಾಚಾರದ ಡೀಲ್ ಕುದುರಿಸುವ ಹಾಗೂ ಅಕ್ರಮ ಹಣವನ್ನು ವಿನಿಮಯ ಮಾಡಿಕೊಳ್ಳುವ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇವೆಲ್ಲದಕ್ಕೂ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಕೆ.ಮಥಾಯಿ ಗಂಭೀರ ಆರೋಪ ಮಾಡಿದರು.

ಬಂಧಿತ ಆರೋಪಿ ಜೆ.ಜಗದೀಶ್‌ಗೆ ಆ ಹಣವನ್ನು ಕೊಟ್ಟವರು ಯಾರು? ಆತ ಅದನ್ನು ವಿಧಾನಸೌಧಕ್ಕೆ ಏಕೆ ತೆಗೆದುಕೊಂಡು ಬಂದಿದ್ದ?, ಅಲ್ಲಿ ಯಾರಿಗೆ ಆ ಹಣವನ್ನು ಕೊಡಲು ಬಂದಿದ್ದ? ಅದು ಯಾವ ಗುತ್ತಿಗೆ ಕಾಮಗಾರಿಯ ಕಮಿಷನ್? ಎಂಬ ಅನೇಕ ಪ್ರಶ್ನೆಗಳು ಜನರನ್ನು ಕಾಡುತ್ತಿವೆ. ಪೊಲೀಸರು ಶೀಘ್ರವೇ ತನಿಖೆಯನ್ನು ಪೂರ್ಣಗೊಳಿಸಿ ಜನರ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರ ನೀಡಬೇಕು. ಸರ್ಕಾರದ ಒತ್ತಡಕ್ಕೆ ಮಣಿದು ಪ್ರಕರಣವನ್ನು ಮುಚ್ಚಿ ಹಾಕಬಾರದು ಎಂದು ಕೆ.ಮಥಾಯಿ ಹೇಳಿದರು.












Click it and Unblock the Notifications