ಪಿಎಸ್‌ಐ ನೇಮಕಾತಿ ಅಕ್ರಮ: ಗೃಹ ಸಚಿವರನ್ನು ವಜಾ ಗೊಳಿಸಲು ರಾಜ್ಯಪಾಲರಿಗೆ ಆಪ್ ಮನವಿ
ಬೆಂಗಳೂರು, ಏಪ್ರಿಲ್ 26: ರಾಜ್ಯದಲ್ಲಿ ಪಿಎಸ್‌ಐ ನೇಮಕಾತಿ ಅಕ್ರಮ ಹಾಗೂ ಭ್ರಷ್ಟಾಚಾರ ವಿರೋಧಿಸಿ ಮತ್ತು ಈ ಸಂಬಂಧ ರಾಜ್ಯದ ಗೃಹ ಸಚಿವರನ್ನು ವಜಾ ಮಾಡಲು ರಾಜ್ಯಪಾಲರು ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಕಾನೂನು ಕಾಪಾಡುವಲ್ಲಿ ವಿಫಲರಾಗಿದ್ದಾರೆ ಕೂಡಲೇ ಇವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಲಾಯಿತು. ಈ ಸಂಬಂಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಮಂಗಳವಾರ ಭೇಟಿ ಮಾಡಿದ ಆಪ್ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಸೇರಿದಂತೆ ಅನೇಕ ಮುಂಖಂಡರು ಭೇಟಿ ಮಾಡಿ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ 52,000 ಅಭ್ಯರ್ಥಿಗಳು ಪಿಎಸ್‌ಐ ಪರೀಕ್ಷೆ ಬರೆದಿದ್ದಾರೆ. ಈಗ ಅಕ್ರಮ ಬಯಲಾಗಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಗೆ ನ್ಯಾಯ ಒದಗಿಸಲು ಶೀಘ್ರವೇ ಮರು ಪರೀಕ್ಷೆ ನಡೆಸಬೇಕಾದ ಅವಶ್ಯಕತೆಯಿದೆ. ಇದಕ್ಕಾಗಿ ನೂತನ ಪ್ರಾಧಿಕಾರ ರಚಿಸಿ, ಪಾರದರ್ಶಕವಾಗಿ ಪರೀಕ್ಷಾ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕು. ಈ ಕುರಿತು ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಪೃಥ್ವಿ ರೆಡ್ಡಿ ರಾಜ್ಯಪಾಲರಿಗೆ ಮನವಿ ಮಾಡಿದರು.

ಎರಡನೆಯದಾಗಿ, ಪಿಎಸ್‌ಐ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಿಸಿ ಪ್ರಸ್ತುತ ನಡೆಯುತ್ತಿರುವ ಸಿಐಡಿ ತನಿಖೆಯು ನಿಧಾನಗತಿಯಲ್ಲಿ ಸಾಗುತ್ತಿದೆ. ಅಲ್ಲದೇ, ರಾಜ್ಯ ಸರ್ಕಾರವು ತನ್ನ ಪ್ರಭಾವವನ್ನು ಬಳಸಿ ತನಿಖೆಯು ವಿಳಂಬವಾಗುವಂತೆ ಮಾಡುವ ಸಾಧ್ಯತೆಯಿದೆ. ಆದ್ದರಿಂದ ತನಿಖೆಗೆ ಕಾಲಮಿತಿ ನಿಗದಿಪಡಿಸಬೇಕು. ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ, ಆರೋಪಪಟ್ಟಿ ಸಲ್ಲಿಸಬೇಕು. ಈ ಕುರಿತು ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಆಪ್ ಪಕ್ಷವು ರಾಜ್ಯಪಾಲರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಆಗ್ರಹ ಮಾಡಿದೆ.

ರಾಜ್ಯ ಸಚಿವ ಸಂಪುಟದಲ್ಲಿ ಗೃಹ ಇಲಾಖೆಯು ಅತ್ಯಂತ ಸೂಕ್ಷ್ಮವಾದ ಇಲಾಖೆಯಾಗಿದೆ. ಆದರೆ ಹಾಲಿ ಗೃಹ ಸಚಿವ ಆರಗ ಜ್ಞಾನೇಂದ್ರರವರಿಗೆ ಸಾಮರ್ಥ್ಯ ಹಾಗೂ ಅನುಭವದ ಕೊರತೆಯಿರುವುದು ಅವರು ಅಧಿಕಾರ ವಹಿಸಿಕೊಂಡ ಸಂದರ್ಭದಿಂದಲೂ ಸಾಬೀತಾಗುತ್ತಿದೆ. ಆದ್ದರಿಂದ ಕೂಡಲೇ ಅವರನ್ನು ವಜಾ ಮಾಡಿ ಸಮರ್ಥರನ್ನು ಗೃಹ ಸಚಿವ ಸ್ಥಾನಕ್ಕೆ ನೇಮಿಸಬೇಕು. ಈ ಕುರಿತು ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಮಾಜಿ ಐಪಿಎಸ್ ಭಾಸ್ಕರ್ ರಾವ್ ರಾಜ್ಯಪಾಲರಿಗೆ ಮನವಿ ಮಾಡಿದರು.
ಆಮ್ ಆದ್ಮಿ ಪಾರ್ಟಿಯ ಮುಖಂಡರಾದ ನಾಗಣ್ಣ ಗೌಡ, ಚನ್ನಪ್ಪಗೌಡ ನೆಲ್ಲೂರು ಹಾಗೂ ಜಗದೀಶ್ ಚಂದ್ರರವರು ಭಾಗವಹಿಸಿದ್ದರು.












Click it and Unblock the Notifications