ಕಾಂಗ್ರೆಸ್ ಗ್ಯಾರಂಟಿ ವಿರುದ್ದ 'ಚೆಂಡು ಹೂವು' ಮುಡಿದು ಪ್ರತಿಭಟನೆ
ಬೆಂಗಳೂರು, ಜೂನ್ 09: ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಷರತ್ತುಗಳ ವಿರುದ್ಧ ಆಮ್ ಆದ್ಮಿ ಪಕ್ಷ ಆಕ್ರೋಶ ವ್ಯಕ್ತಪಡಿಸಿ ವಾಗ್ದಾಳಿ ನಡೆಸಿದೆ. ಅಷ್ಟೇ ಅಲ್ಲದೇ ಬೆಂಗಳೂರಿನಲ್ಲಿ ನೂರಾರು ಎಎಪಿ ಕಾರ್ಯಕರ್ತರು 'ಚೆಂಡು ಹೂವು' ಮುಡಿದು ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಸ್ವಾತಂತ್ರ ಉದ್ಯಾನವನದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, ಕಾಂಗ್ರೆಸ್ ಸರ್ಕಾರ 5 ಗ್ಯಾರೆಂಟಿಗಳಿಗೆ ಷರತ್ತು ವಿಧಿಸಿದೆ. ಈ ಮೂಲಕ ಅವರ ನಕಲಿ ನಿಜಬಣ್ಣ ರಾಜ್ಯದ ಜನತೆಯ ಮುಂದೆ ಬಟಾ ಬಯಲಾಗಿದೆ.

ಆಮ್ ಆದ್ಮಿ ಪಕ್ಷದ ದೆಹಲಿ ಮತ್ತು ಪಂಜಾಬ್ ಮಾದರಿಯನ್ನು ನಕಲು ಮಾಡಿ ನೀಡಿದ ಭರವಸೆಗಳನ್ನು ನೀಡಿ ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷ ತಾನು ನೀಡಿದ ಭರವಸೆಗಳನ್ನು ಈಡೇರಿಸಲಾಗದೆ ನಾನಾ ಷರತ್ತುಗಳನ್ನು ವಿಧಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ರಾಜ್ಯದ ಜನರಿಗೆ ಮಹಾಮೋಸ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರದ 'ಗೃಹಜೋತಿ, ಗೃಹಲಕ್ಷ್ಮಿ' ಹಾಗೂ ಇನ್ನಿತರ ಒಟ್ಟು ಐದು ಗ್ಯಾರೆಂಟಿಗಳು ಬಡವರನ್ನು ಮತ್ತಷ್ಟು ಬಡವರನ್ನಾಗಿಸುವ ಕಾರ್ಯಕ್ರಮಗಳೇ ಹೊರತು ಮತ್ತೇನು ಅಲ್ಲ. ನಾವು ದೆಹಲಿಯಲ್ಲಿ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಅತ್ಯಂತ ವೈಜ್ಞಾನಿಕವಾಗಿ ಈ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸುತಿದ್ದೇವೆ ಎಂದರು.

ನಮ್ಮ ಶಿಕ್ಷಣ ಹಾಗೂ ಆರೋಗ್ಯಕ್ರಾಂತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾದರಿ ಆಗಿದೆ. ಆದರೆ ಇಲ್ಲಿನ ಕಾಂಗ್ರೆಸ್ ಸರ್ಕಾರ ಸರ್ಕಾರಿ ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಲೇ ಇಲ್ಲ. ಸರ್ಕಾರದ ಮಂತ್ರಿಗಳಿಗೆ ಅವರ ಗ್ಯಾರೆಂಟಿಗಳ ಬಗ್ಗೆ ಅವರಿಗೆ ಗ್ಯಾರಂಟಿ ಇಲ್ಲ. ಪ್ರತಿಯೊಬ್ಬರು ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಾ ಅತ್ಯಂತ ಗೊಂದಲವನ್ನು ಉಂಟು ಮಾಡುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.
ಎಎಪಿ ಪಕ್ಷದ ಕಾರ್ಯಾಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ಕಾಂಗ್ರೆಸ್ ವಿರುದ್ಧ ಇಂದು ಕೇವಲ ಸಾಂಕೇತಿಕವಾಗಿ ಪ್ರತಿಭಟನೆಯನ್ನು ಮಾಡಿದ್ದೇವೆ. ಸರ್ಕಾರ ಇದೇ ರೀತಿಯ ಸೋಗಲಾಡಿತನವನ್ನು ಪ್ರದರ್ಶಿಸಿದ್ದೇ ಆದಲ್ಲಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಎಎಪಿ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ಉಷಾ ಮೋಹನ್, ಜಗದೀಶ್ ಚಂದ್ರ, ಸೀತಾರಾಮ್ ಗುಂಡಪ್ಪ, ಗೋಪಾಲ್, ರಾಜಶೇಖರ್ ದೊಡ್ಡಣ್ಣ, ಉಮೇಶ್ ಪಿಳ್ಳೆ ಗೌಡ, ಗೋಪಿನಾಥ್, ಶಶಿಕುಮಾರ್ ಆರಾಧ್ಯ, ಮಹಾಲಕ್ಷ್ಮಿ, ಪುಷ್ಪ ಕೇಶವ್ ಸೇರಿದಂತೆ ನೂರಾರು ಜನ ಕಾರ್ಯಕರ್ತರುಗಳು ಭಾಗವಹಿಸಿದ್ದರು.












Click it and Unblock the Notifications