ಚಂದ್ರನ ಅಂಗಳದಲ್ಲಿ 48 ಸಾವಿರ ರೂ.ಗೆ ಸೈಟ್ ಸಿಗುತ್ತೆ ಬೇಕಾ?
ಬೆಂಗಳೂರು, ಅ. 02: ಚಂದ್ರನ ಅಂಗಳದಲ್ಲಿ ಸೈಟ್ ಸಿಗುತ್ತೆ. ಇವಾಗಲೇ ಖರೀದಿ ಮಾಡಿ ಇಟ್ಟುಕೊಳ್ಳಿ. ಮುಂದೆ ಡಬಲ್ ಲಾಭಕ್ಕೆ ಮಾರಿಕೊಳ್ಳಬಹುದು. ಐವತ್ತು ಸಾವಿರ ರೂ. ಕೊಟ್ಟು ಮೊದಲೇ ಬುಕ್ ಮಾಡಿಬಿಡಿ ಅಮೇಲೆ ಉಳಿದ ಹಣ ಕೊಟ್ಟರಾಯಿತು ..!
ಹೀಗೆ ಸಾಮಾಜಿಕ ಜಾಲ ತಾಣದಲ್ಲಿ ಬರುವ ಅಮಿಷದ ಸಂದೇಶಗಳನ್ನು ನಂಬಿ ಚಂದ್ರನ ಅಂಗಳದಲ್ಲಿ ಸೈಟು ಖರೀದಿಸುವ ಸಾಹಸಕ್ಕೆ ಕೈ ಹಾಕಿದರೆ ಟೋಪಿ ಬೀಳುವುದು ಗ್ಯಾರಂಟಿ. ನಾನಾ ರೂಪದಲ್ಲಿ ಮೋಸ ಮಾಡುವ ಸೈಬರ್ ವಂಚಕರು ಇದೀಗ ಚಂದ್ರನ ಹೆಸರಿಟ್ಟುಕೊಂಡು ಸಿಲಿಕಾನ್ ಸಿಟಿ ಜನರಿಗೆ ಮೋಸ ಮಾಡುವುದನ್ನು ಕರಗತ ಮಾಡಿಕೊಂಡಿದ್ದಾರೆ. ಚಂದ್ರನ ಅಂಗಳದಲ್ಲಿ ನಿವೇಶನ ಕೊಡಿಸುವುದಾಗಿ ಆಸೆ ಹುಟ್ಟಿಸಿ ಮಹಿಳೆಯೊಬ್ಬಳಿಗೆ ಟೋಪಿ ಹಾಕಿದ್ದಾರೆ.
ಮಹಿಳೆಯೊಬ್ಬಳು ಯಾವಾಗಲೂ ಸಾಮಾಜಿಕ ಜಾಲ ತಾಣದಲ್ಲಿ ಸಕ್ರಿಯವಾಗಿದ್ದಳು. ಫೇಸ್ ಬುಕ್ ನಲ್ಲಿ ಪರಿಚಯವಾದ ಮಹಿಳೆಯೊಬ್ಬಳು, ಚಂದ್ರನ ಅಂಗಳದಲ್ಲಿ ನಿವೇಶನ ಖಾಲಿಯಿದೆ. ನಾನು ಕ್ರಿಪ್ಟೋ ಕರೆನ್ಸಿ ತಜ್ಞೆ. ಉಸ್ಕಾ ಅಬೂಬಕರ್ ನನ್ನ ಹೆಸರು. ಚಂದ್ರನ ಅಂಗಳದಲ್ಲಿ ನಿವೇಶನ ಖರೀದಿ ಮಾಡಿ ಮಾರಾಟ ಮಾಡಿದರೆ ಡಬಲ್ ಲಾಭ ಸಿಗುತ್ತದೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಮಾಡಬಹುದು ಎಂದು ಪುಸಲಾಯಿಸಿದ್ದಾಳೆ.

ಚಂದ್ರನ ಅಂಗಳದಲ್ಲಿ ನಿವೇಶನ ಖರೀದಿ ತಮಾಷೆ ವಿಚಾರವೇ ? ಅಂತಹ ಅವಕಾಶ ಸಿಕ್ಕರೆ ಯಾರು ತಾನೆ ಬಿಡುತ್ತಾರೆ ಅಲ್ಲವೇ ? ಕ್ರಿಪ್ಟೋ ಕರೆನ್ಸಿ ತಜ್ಞೆ ಅಡ್ವಾನ್ಸ್ ಬುಕ್ಕಿಂಗ್ ಮೊತ್ತ 45,700 ರೂ. ನೀಡುವಂತೆ ಸೂಚಿಸಿದ್ದಾಳೆ.ಅದರಂತೆ ಗೂಗಲ್ ಪೇ ಮೂಲಕ 25, 000 ಸಾವಿರ ರೂ. ಪಾವತಿಸಿರುವ ಬೆಂಗಳೂರು ಮಹಿಳೆ ಖುಷಿಯಲ್ಲಿ ತೇಲಾಡಿದ್ದಾಳೆ. ಕೇವಲ ಒಂದು ವಾರದಲ್ಲಿಯೇ ಸೈಟ್ ಮಾರಾಟ ಮಾಡಿ ಹೆಚ್ಚಿನ ಲಾಭ ಮಾಡಿಕೊಡುವುದಾಗಿ ಹೇಳಿದ್ದ ಮಹಿಳೆಯ ಸುಳಿವೇ ಇಲ್ಲ!
ಚಂದ್ರಯಾನ ಸೈಟ್ ಪ್ರಾಜೆಕ್ಟ್ ಪರಿಚಯಿಸಿದ್ದ ಆನ್‌ಲೈನ್ ಗೆಳತಿಯ ಸಾಮಾಜಿಕ ಜಾಲ ತಾಣಗಳ ಎಲ್ಲಾ ಸಂಪರ್ಕಗಳು ನಿಷ್ಕ್ರಿಯವಾಗಿವೆ. ಹಣ ಕೊಟ್ಟ ಮೋಸ ಹೋಗಿರುವ ಸಂಗತಿ ತಿಳಿದ ಕೂಡಲೇ ಇದೀಗ ಹಣ ಕಳೆದುಕೊಂಡ ಮಹಿಳೆ ಸೈಬರ್ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ. ಪೊಲೀಸರು ದೂರು ಆಧರಿಸಿ ತನಿಖೆ ನಡೆಸಿದಾಗ ಗೂಗಲ್ ಪೇ ಖಾತೆ ನಾರಾಯಣ್ ಎಂಬುವರ ಹೆಸರಿನಲ್ಲಿ ಇರುವುದು ಪತ್ತೆಯಾಗಿದೆ. ಚಂದ್ರಯಾನ ಸೈಟ್ ಪ್ರಾಜೆಕ್ಟ್ ಹೆಸರಿನಲ್ಲಿ ಹಲವರಿಗೆ ದೋಖಾ ಮಾಡಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಸೈಬರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಚಂದ್ರನ ಅಂಗಳದಲ್ಲಿ ನಿವೇಶನ ಕೊಡಿಸುತ್ತೇನೆ ಎಂದು ಯಾರಾದರೂ ಹೇಳಿದರೆ ನಂಬಲು ಸಾಧ್ಯವೇ ಇಲ್ಲ. ಅಂತದರಲ್ಲಿ ನಂಬಿ ಮಹಿಳೆ ಪಾವತಿ ಮಾಡಿದ್ದಾಳೆ ಎಂದರೆ ಏನನ್ನಬೇಕು ? ಮೋಸ ಹೋಗುವರು ಇರುವವರೆಗೂ ಸೈಬರ್ ಕಳ್ಳರಂತೂ ಮೋಸ ಮಾಡುವುದನ್ನು ಬಿಡಲ್ಲ.
ಬಾಡಿಗೆ ಮನೆ ಹೆಸರಲ್ಲೂ ದೋಖಾ: ಕೊರೊನಾ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಬಹುತೇಕರು ಮನೆ ಖಾಲಿ ಮಾಡಿದ್ದಾರೆ. ಹೀಗಾಗಿ ಸಾಲ ಮಾಡಿ ಬಾಡಿಗೆ ಮನೆ ಮಾಡಿಕೊಂಡವರು ಬಾಡಿಗೆದಾರರಿಗೆ ಪರದಾಡುತ್ತಿದ್ದಾರೆ. ಬಾಡಿಗೆದಾರರನ್ನು ಸುಲಭವಾಗಿ ಪಡೆಯಲು ಆನ್‌ಲೈನ್ ಜಾಲ ತಾಣಗಳಲ್ಲಿ ಮನೆ ಬಾಡಿಗೆ ಇರುವ ಬಗ್ಗೆ ಜಾಹೀರಾತು ಪ್ರಕಟಿಸಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಕಳ್ಳರು, ಬಾಡಿಗೆ ಮನೆ ಪಡೆಯುವ ಸೋಗಿನಲ್ಲಿ ಕರೆ ಮಾಡುವ ಸೈಬರ್ ಕಳ್ಳರು, ಮನೆ ಬಾಡಿಗೆ ಪಡೆಯುವ ಹೆಸರಿನಲ್ಲಿ ಒಂದು ರೂಪಾಯಿ ಹಣ ಗೂಗಲ್ ಪೇ ನಲ್ಲಿ ಪಾವತಿಸಿ ಮನೆ ಮಾಲೀಕರ ಬ್ಯಾಂಕ್ ನಲ್ಲಿರುವ ಅಷ್ಟೂ ಹಣ ಯಾಮಾರಿಸಿದ ಪ್ರಕರಣಗಳು ವರದಿಯಾಗಿವೆ.

ಗೋಲ್ಡನ್ ಹವರ್ ಬಳಸಿಕೊಳ್ಳಿ:
ಸೈಬರ್ ವಂಚಕರ ಸ್ಮಾರ್ಟ್ ಐಡಿಯಾಗಳಿಗೆ ಸಿಲಿಕಾನ್ ಸಿಟಿಯಲ್ಲಿ ಮೋಸ ಹೋಗುತ್ತಿರುವರ ಸಂಖ್ಯೆ ಕೂಡ ಜಾಸ್ತಿಯಾಗುತ್ತಿದೆ. ಸೈಬರ್ ವಂಚನೆಗೆ ಒಳಗಾದವರ ನೆರವಿಗಾಗಿಯೇ ಬೆಂಗಳೂರು ಪೊಲೀಸರು ಗೋಲ್ಡನ್ ಅವರ್ ಎಂಬ ವಿನೂತನ ಸೌಲಭ್ಯ ಪರಿಚಯಸಿದ್ದಾರೆ. ಸೈಬರ್ ಜಾಲಕ್ಕೆ ಬಿದ್ದು ಮೋಸ ಹೋಗುವರು ಒಂದು ತಾಸಿನ ಒಳಗೆ ಬೆಂಗಳೂರು ಪೊಲೀಸ್ ನಿಯಂತ್ರಣ ಕಚೇರಿ 112 ಗೆ ಕರೆ ಮಾಡಿ ವಿಚಾರವನ್ನು ತಿಳಿಸಿ. ತಕ್ಷಣವೇ ಸಂಬಂಧ ಪಟ್ಟ ಪೊಲೀಸ್ ಠಾಣೆಗೆ ದೂರು ನೀಡಿದರೆ, ಕಳೆದುಕೊಂಡ ಹಣವನ್ನು ವಾಪಸು ಕೊಡಿಸಲು ಪೊಲೀಸರು ಗೋಲ್ಡನ್ ಅವರ್ ಸೌಲಭ್ಯ ಬಳಸುತ್ತಾರೆ. ಒಂದು ತಾಸು ಮೀರಿದ ನಂತರ ದೂರು ಕೊಟ್ಟರೆ ಸೈಬರ್ ವಂಚಕರನ್ನು ಪತ್ತೆ ಮಾಡುವುದು ಕಷ್ಟ. ಹೋದ ಹಣವನ್ನು ರಿಕವರಿ ಮಾಡುವ ಮಾತೇ ಇಲ್ಲ! ಈ ಸೌಲಭ್ಯವನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು ಎಂದು ಪೊಲೀಸರು ಸಲಹೆ ಮಾಡಿದ್ದಾರೆ.












Click it and Unblock the Notifications