ಮಳೆಯಿಂದ ಬೆಂಗಳೂರಿಗೆ ಆಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ: ಅಪ್‌ಡೇಟ್ ಕೊಟ್ಟ ಡಿ ಕೆ ಶಿವಕುಮಾರ್
ಬೆಂಗಳೂರು, ಮೇ 21: ಮಳೆಯಿಂದ ಬೆಂಗಳೂರಿಗೆ ಆಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಾಗುವುದು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಸಮಸ್ಯೆಗೆ ಪರಿಹಾರ ನೀಡುವ ಕೆಲಸವಾಗಿಲ್ಲ. ಆದರೂ ವಿರೋಧ ಪಕ್ಷದವರು ಟೀಕೆ ಮಾಡಲಿ, ನಾವು ನಮ್ಮ ಕೆಲಸ ಮಾಡುತ್ತೇವೆ. ಅಂತಿಮವಾಗಿ ಟೀಕೆಗಳು ಸಾಯುತ್ತವೆ ಕೆಲಸಗಳು ಮಾತ್ರ ಉಳಿಯುತ್ತವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಬೆಂಗಳೂರು ಪ್ರದಕ್ಷಿಣೆ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಳೆಹಾನಿ ಪೀಡಿತ ಪ್ರದೇಶಗಳ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿದರು. ನಂತರ ಮಾಧ್ಯಮಗೋಷ್ಠಿ ಹಾಗೂ ಮಾಧ್ಯಮ ಪ್ರತಿಕ್ರಿಯೆ ನೀಡಿ ಶಿವಕುಮಾರ್ ಅವರು ಮಾತನಾಡಿ, ಬೆಂಗಳೂರಿನಲ್ಲಿ ಮಳೆಯಿಂದಾಗಿರುವ ತೊಂದರೆ ಬಗ್ಗೆ ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ. ಒತ್ತುವರಿ ವಿಚಾರದಲ್ಲಿ ಅವರ ಕಾಲದಲ್ಲಿ ಏನು ಕೆಲಸ ಮಾಡುತ್ತಿದ್ದರು. ಒತ್ತುವರಿ ಮಾಡಿಕೊಂಡವರು ನ್ಯಾಯಲಯಗಳಿಂದ ತಡೆಯಾಜ್ಞೆ ತಂದಿದ್ದಾರೆ. ಆದರೂ ನಾನು ಒತ್ತುವರಿಗಳನ್ನು ತೆರವುಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

ಮಳೆನೀರಿನಿಂದ ತೊಂದರೆಗೆ ಒಳಗಾಗುತ್ತಿದ್ದ 211 ಪ್ರದೇಶಗಳನ್ನು ಗುರುತಿಸಿ 166 ಕ್ಕೆ ಇಳಿಸಿದ್ದೇವೆ. 44 ಕೆಲಸ ಬಾಕಿಯಿದ್ದು, ಇದರಲ್ಲಿ 24 ಕಡೆ ಕಾರ್ಯಪ್ರಗತಿಯಲ್ಲಿದೆ. ಮೊದಲಿಗಿಂತ ಈಗ ಸಮಸ್ಯೆಗಳನ್ನು ಎದುರಿಸುತ್ತಿರುವ ಪ್ರದೇಶಗಳ ಪ್ರಮಾಣ ಕಡಿಮೆಯಾಗಿದೆ. ಬೆಂಗಳೂರು ನಾಗರೀಕರ ರಕ್ಷಣೆ ಮಾಡಲಾಗುವುದು. ಯಾರೂ ಆತಂಕಪಡುವ ಅಗತ್ಯವಿಲ್ಲ. ನಾವು ಬೆಂಗಳೂರಿಗೆ ಹೊಸ ರೂಪ ನೀಡುತ್ತಿದ್ದೇವೆ. ನಮ್ಮ ಸರ್ಕಾರ ಹಾಗೂ ಅಧಿಕಾರಿಗಳ ತಂಡ ಇದನ್ನು ಸರಿ ಮಾಡುತ್ತೇವೆ ಎಂದು ಹೇಳಿದರು.
ಎಲ್ಲೆಲ್ಲಿ ಬಿಜೆಪಿ ಶಾಸಕರಿದ್ದಾರೋ ಆ ಪ್ರದೇಶಗಳಲ್ಲಿ ಮಾತ್ರ ಇಂತಹ ಸಮಸ್ಯೆ ಎದುರಾಗಿದೆ. ಅವರು ಯಾವುದೇ ಕೆಲಸ ಮಾಡಿಲ್ಲ ಎಂಬುದಕ್ಕೆ ಸಾಕ್ಷಿ. ಕಾಂಗ್ರೆಸ್ ಶಾಸಕರು ಕಾಮಗಾರಿಗಳನ್ನು ಬೇಗ ಮುಗಿಸಿ ತಮ್ಮ ಕ್ಷೇತ್ರಗಳಲ್ಲಿನ ಸಮಸ್ಯೆ ಬಗೆಹರಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಕ್ಷೇತ್ರದಲ್ಲೂ ಪರಿಶೀಲನೆ ಮಾಡಿದ್ದೇವೆ. ಅವರು ಈ ಭಾಗದ ರಸ್ತೆ ಅಗಲೀಕರಣ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಈ ವಿಚಾರವಾಗಿ ಎಲ್ಲೆಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಸಮಸ್ಯೆಯಾಗಿದೆ, ಆ ಜಾಗಗಳ ಫೋಟೋ, ವಿಡಿಯೋ ಮಾಡಿಕೊಂಡು ತುರ್ತು ವರದಿ ಸಲ್ಲಿಕೆ ಮಾಡುವಂತೆ ತಿಳಿಸಿದ್ದೇನೆ. ಆಮೂಲಕ ವಿಪತ್ತು ನಿರ್ವಹಣೆ ನಿಯಂತ್ರಣ ಅಡಿಯಲ್ಲಿ ರಸ್ತೆ ಅಗಲೀಕರಣ ಮಾಡಲಾಗುವುದು. ಲಿಂಬಾವಳಿ ಅವರು 150 ಅಡಿ ರಸ್ತೆ ಬಗ್ಗೆ ಪ್ರಸ್ತಾವನೆ ಮಾಡಿದ್ದು, ಕೂಡಲೇ ಅಧಿಕಾರಿಗಳ ಜತೆ ಚರ್ಚೆಸಿ ಸಮಸ್ಯೆ ಬಗೆಹರಿಸಲಾಗುವುದು. ಇನ್ನು ಬಿಎಂಆರ್ ಡಿಎ ವತಿಯಿಂದ 150 ಅಡಿ ಹಾಗೂ 150 ಮೀಟರ್ ರಸ್ತೆಗೆ ಎರಡು ನೋಟಿಫಿಕೇಶನ್ ಆಗಿದ್ದು ಈ ವಿಚಾರವನ್ನು ಸಿಎಂ ಗಮನಕ್ಕೆ ತಂದಿದ್ದು, ಸದ್ಯದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ ಎಂದರು.
ಮುಖ್ಯಮಂತ್ರಿಗಳು ಹಾಗೂ ನಗರ ಯೋಜನಾ ಪ್ರಾಧಿಕಾರದ ಅಧಿಕಾರಿಗಳ ಜತೆ ಚರ್ಚೆ ಮಾಡಿ ಮುಂದಿನ ದಿನಗಳಲ್ಲಿ ತಳ ಮಟ್ಟದ ಪ್ರದೇಶಗಳಲ್ಲಿ ಬೆಸ್ ಮೆಂಟ್ ಪಾರ್ಕಿಂಗ್ ವ್ಯವಸ್ಥೆಗೆ ಅವಕಾಶ ನೀಡದಿರಲು ನೀತಿ ರೂಪಿಸಲಾಗುವುದು. ಬೆಸ್ ಮೆಂಟ್ ನಿಂದ ನೀರನ್ನು ಪಂಪ್ ಮೂಲಕ ಹೊರಗೆ ಹಾಕುವಾಗ ದುರ್ಘಟನೆ ನಡೆದು ಜೀವಹಾನಿಯಾಗಿದೆ" ಎಂದು ತಿಳಿಸಿದರು. ಇನ್ನೂ ಒತ್ತುವರಿ ತೆರವು ಕಾರ್ಯ ಶೇ.70 ರಷ್ಟು ಮುಗಿದಿದೆ. ಬಾಕಿ ಇರುವ ಒತ್ತುವರಿಯನ್ನು ತೆರವುಗೊಳಿಸಲಾಗುವುದು ಎಂದರು.












Click it and Unblock the Notifications