ರಸ್ತೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಸಿ ಓರ್ವನ ಪ್ರಾಣ ತೆಗೆದ ಟೆಕ್ಕಿ
ಬೆಂಗಳೂರು, ಜನವರಿ 16: ರಸ್ತೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿ ಟೆಕ್ಕಿಯೊಬ್ಬ ಅಮಾಯಕನ ಪ್ರಾಣ ತೆಗೆದಿರುವ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್ ಸಮೀಪ ನಡೆದಿದೆ.
ಘಟನೆಯಲ್ಲಿ ಮತ್ತಿಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಪಶ್ಚಿಮ ಬಂಗಾಳ ಮೂಲದ ಶಂಕರ್ ದಾಸ್(45) ಮೃತರು.ಘಟನೆಯಲ್ಲಿ ತೀವ್ರ ಸ್ವರೂಪವಾಗಿ ಗಾಯಗೊಂಡಿರುವ ಮೃತನ ಸ್ನೇಹಿತರಾದ ಅರವಿಂದ್ ಹಾಗೂ ಪರಶುರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಗ್ಗೆ ಕೃಷ್ಣಕಾಂತ್ , ಸಿದ್ದಾಪುರದಿಂದ ನೆಲ್ಲೂರಹಳ್ಳಿಗೆ ತೆರಳುವಾಗ ಅವಘಡ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಕೃಷ್ಣಕಾಂತ್ ತಮ್ಮ ಕುಟುಂಬದ ಜೊತೆ ವೈಟ್‌ಫೀಲ್ಡ್ ಬಳಿ ನೆಲೆಸಿದ್ದಾರೆ. ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿರುವ ಅವರು, ಬೆಳಗ್ಗೆ 10.15ರ ಸುಮಾರಿಗೆ ಕೆಲಸಕ್ಕೆ ಕಾರಿನಲ್ಲಿ ತೆರಳುತ್ತಿದ್ದರು.

ಅತಿವೇಗವಾಗಿ ಕಾರು ಚಲಾಯಿಸುತ್ತಿದ್ದ ಕೃಷ್ಣಕಾಂತ್ ಅವರು ನಿಯಂತ್ರಣ ಕಳೆದುಕೊಂಡು ಮಾರ್ಗ ಮಧ್ಯೆ ಬ್ರೈಟ್ ಬಿಗಿನಿಂಗ್ ಸ್ಕೂಲ್ ಹತ್ತಿರ ಎಡಬದಿಯಲ್ಲಿ ಹೋಗುತ್ತಿದ್ದ ಅರವಿಂದ್ ಮೇಟಿ ಅವರಿಗೆ ಕಾರು ಗುದ್ದಿಸಿದ್ದಾರೆ.
ಈ ಹಂತದಲ್ಲಿ ಭಯಗೊಂಡು ಅಡ್ಡಾದಿಡ್ಡಿಯಾಗಿ ಕಾರು ಓಡಿಸಿ ಬಲಬದಿಯಲ್ಲಿ ಹೋಗುತ್ತಿದ್ದ ಪಾದಚಾರಿಗಳಾದ ಪರಶುರಾಮ್ ಹಾಗೂ ಶಂಕರ್ ದಾಸ್ ಎಂಬುವವರ ಮೇಲೂ ಕಾರು ಗುದ್ದಿಸಿದ್ದಾನೆ. ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.












Click it and Unblock the Notifications