Shocking: ಹೆಸರು ಬದಲಿಸಿಕೊಂಡು ಬೆಂಗಳೂರಲ್ಲೇ ವಾಸವಿದ್ದ ಪಾಕಿಸ್ತಾನಿ ಕುಟುಂಬ!
ಪಾಕಿಸ್ತಾನದ ವ್ಯಕ್ತಿಯೊಬ್ಬ ತನ್ನ ಕುಟುಂಬದೊಂದಿಗೆ ಆನೇಕಲ್ ಬಳಿಯ ಜಿಗಣಿಯಲ್ಲಿ ವಾಸವಿದ್ದ ವಿಚಾರ ಬೆಳಕಿಗೆ ಬಂದಿದೆ. ಮಾಹಿತಿ ಸಿಕ್ಕ ಬೆನ್ನಲ್ಲೇ ಜಿಗಣಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇತ್ತೀಚೆಗೆ ಎನ್ಐಎ ಅಧಿಕಾರಿಗಳು ಜಿಗಣಿಯಲ್ಲೇ ಒಬ್ಬ ಶಂಕಿತ ಉಗ್ರನನ್ನು ಬಂಧಿಸಿದ್ದರು. ಈಗ ಇಲ್ಲಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಪಾಕಿಸ್ತಾನದ ವ್ಯಕ್ತಿ ವಾಸ್ತವ್ಯವಿದ್ದ ವಿಚಾರ ಗೊತ್ತಾಗಿದೆ.
ಪಾಕಿಸ್ತಾನದ ಈತನೂ ಸೇರಿದಂತೆ ಒಟ್ಟು ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನದ ರಷೀದ್ ಸಿದ್ದಿಕಿ ಅಲಿಯಾಸ್ ಶಂಕರ್ ಶರ್ಮಾ, ಆಯುಷಾ ಅನಿಫ್ ಅಲಿಯಾಸ್ ಆಶಾ ಶರ್ಮಾ, ಮೊಹಮ್ಮದ್ ಹನೀಫ್ ಅಲಿಯಾಸ್ ರಾಮ್ ಬಾಬಾ ಶರ್ಮಾ, ರುಬೀನಾ ಅಲಿಯಾಸ್ ರಾಣಿ ಶರ್ಮಾ ಬಂಧಿತರು ಎನ್ನಲಾಗಿದೆ. ಹೆಸರು ಬದಲಿಸಿಕೊಂಡು ಇವರು ಬೆಂಗಳೂರಿನಲ್ಲಿ ನೆಲೆಸಿದ್ದರು ಎನ್ನುವ ವಿಚಾರವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಪಾಕಿಸ್ತಾನದಲ್ಲಿದ್ದಾಗ ಧರ್ಮದ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಈತ ಪಾಕಿಸ್ತಾನ ತೊರೆದಿದ್ದ. ಬಳಿಕ ಬಾಂಗ್ಲಾದೇಶದ ಢಾಕಾದಲ್ಲಿ ಕೆಲವು ಸಮಯದವರೆಗೆ ನೆಲೆಸಿದ್ದನು. ಕೊನೆಗೆ ಅಲ್ಲಿಯೇ ಒಂದು ಮಹಿಳೆಯನ್ನು ಮದುವೆ ಮಾಡಿಕೊಂಡಿದ್ದ. ಇದಾದ ನಂತರ ಆತ ತನ್ನ ಹಾಗೂ ಮಕ್ಕಳೊಂದಿಗೆ ಮತ್ತೆ 2014ರಲ್ಲಿ ದೆಹಲಿಗೆ ಬಂದಿದ್ದ ಎನ್ನಲಾಗಿದೆ.
ಬಳಿಕ ಅಲ್ಲಿ ಕೆಲವರ ಸಹಾಯದಿಂದ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ಮಾಡಿಸಿಕೊಂಡು, ಕುಟುಂಬದೊಂದಿಗೆ ಬೆಂಗಳೂರಿನ ಜಿಗಣಿಗೆ ಬಂದು ನೆಲೆಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಧರ್ಮದ ವಿಚಾರವಾಗಿಯೇ ರಷೀದ್‌ನನ್ನು ಪಾಕಿಸ್ತಾನದಿಂದ ಹೊರದಬ್ಬಲಾಗಿತ್ತು. ಬಳಿಕ ಬಾಂಗ್ಲಾದಿಂದ ನೇಪಾಳಕ್ಕೆ ಹೋಗಿದ್ದಾಗ ಅಲ್ಲಿನ ಧಾರ್ಮಿಕ ಸಂಸ್ಥೆಗೆ ಸೇರಿಕೊಂಡು, ಧರ್ಮ ಪ್ರಚಾರದಲ್ಲಿ ನಿರತನಾಗಿದ್ದ. ಅಲ್ಲಿನ ಧರ್ಮಗುರು ಸೂಚನೆ ಮೇರೆಗೆ ಧರ್ಮಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿಳಿದಿದ್ದ ಎನ್ನಲಾಗಿದೆ.

ಬೆಂಗಳೂರಿಗೆ ಬಂದಿದ್ದ ರಷೀದ್ ಮೊದಲಿಗೆ ಇಬ್ಬರನ್ನು ಪರಿಚಯ ಮಾಡಿಕೊಂಡು ಅವರನ್ನೂ ಧರ್ಮ ಸಂಸ್ಥೆಗೆ ಸೇರ್ಪಡೆ ಮಾಡಿಕೊಂಡಿದ್ದ. ಅವರ ಸಹಕಾರದಿಂದಲೇ ಜಿಗಣಿಯಲ್ಲಿ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಂಡಿದ್ದ. ಕೊನೆಗೆ ಜಿಗಣಿಯಲ್ಲಿ ಮನೆ ಮಾಡಿಕೊಂಡು ಡೆಲಿವರಿ ಬಾಯ್ ಕೆಸಲ ಕೂಡ ಮಾಡುತ್ತಿದ್ದ. ಬಿರಿಯಾನಿ ತಯಾರಿಸಿ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಈತನ ಮೇಲೆ ಹದ್ದಿನಗಣ್ಣಿಟ್ಟಿದ್ದರು. ಬಳಿಕ ಗುಪ್ತಚರ ಅಧಿಕಾರಿಗಳೇ ರಷೀದ್ ಜಿಗಣಿಯಲ್ಲಿ ವಾಸವಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದನ್ನು ಆಧರಿಸಿ ಜಿಗಣಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಕೊನೆಗೆ ಇಡೀ ಕುಟುಂಬವನ್ನು ಬಂಧಿಸಿ, ಕೇಸ್ ದಾಖಲಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಜಿ.ಪರಮೇಶ್ವರ್, ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ಅವರು ದೇಶದಲ್ಲಿ ಹತ್ತು ವರ್ಷಗಳಿಂದ ಇದ್ದಾರೆ. ಬೆಂಗಳೂರಿಗೆ ಬಂದು ಒಂದು ವರ್ಷ ಆಗಿರಬಹುದು. ಪೊಲೀಸರು ಅವರನ್ನು ಕಸ್ಟಡಿಗೆ ತೆಗೆದುಕೊಂಡು, ವಿಚಾರಣೆ ನಡೆಸುತ್ತಿದ್ದಾರೆ. ಅವರು ದೇಶದಲ್ಲೇ ನೆಲೆಸಿ ಪಾಸ್‌ಪೋರ್ಟ್ ಮಾಡಿಸಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ ಎಂದರೆ, ಇಲ್ಲಿವರೆಗೆ ಯಾಕೆ ಅವರ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲವೇ? ಎಂದು ಕೇಂದ್ರಕ್ಕೆ ಪ್ರಶ್ನಿಸಿದ್ದಾರೆ. ಈ ವಿಚಾರಣೆ ಪ್ರಗತಿಯಲ್ಲಿದ್ದು, ಅವರ ಮೂಲ ಹಾಗೂ ಇನ್ನಿತರ ವಿವರಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದಿದ್ದಾರೆ.












Click it and Unblock the Notifications