ಒಂದು ಟೀ ಕುಡಿದು ಗಂಟೆಗಟ್ಟಲೆ ಹೋಟೆಲ್‌ನಲ್ಲಿ ಕಾಲ ಕಳೆಯೋ ಗ್ರಾಹಕರೇ ಇದನ್ನೋದಿ... ಬೆಂಗಳೂರಿನ ಹೋಟೆಲ್ ಮಾಲೀಕರಿಂದ ಹೊಸ ರೂಲ್ಸ್..
ಬೆಂಗಳೂರು ಜನವರಿ 29: ಹೋಟೆಲ್ ತಿಂಡಿ, ಊಟ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಚಿಕ್ಕವರಿಂದ ವಯಸ್ಸಾದವರೆಗೂ ಹೋಟೆಲ್ ತಿಂಡಿ, ಊಟ, ಸ್ನ್ಯಾಕ್ಸ್ ಅಂದರೆ ಅಚ್ಚುಮೆಚ್ಚು. ಇಲ್ಲಿ ಬಯಸಿದ ಆಹಾರ ಮಾತ್ರವಲ್ಲದೆ ಇದನ್ನು ಸವಿಯುತ್ತಾ ಅಥವಾ ಕುಡಿಯುತ್ತಾ ಗಂಟೆ ಗಟ್ಟಲೆ ಸ್ನೇಹಿತರು ಅಥವಾ ಆಪ್ತರೊಂದಿಗೆ ಕಾಲ ಕೂಡ ಕಳೆಯಬಹುದು.
ಹೌದು.. ಇತ್ತೀಚೆಗೆ ಹೋಟೆಲ್‌ನಲ್ಲಿ ತಿಂಡಿ, ಊಟ ಮಾಡುವುದಕ್ಕಿಂತ ಹೆಚ್ಚಾಗಿ ಟೀ, ಕಾಫಿ ಕುಡಿಯುತ್ತಾ ಗಂಟೆಗಟ್ಟಲೆ ಸಮಯ ಕಳಿಯೋ ಗ್ರಾಹಕರೇ ಹೆಚ್ಚಾಗಿಬಿಟ್ಟಿದ್ದಾರೆ. ಇದು ಹೋಟೆಲ್ ಮಾಲೀಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ನೇರಾನೇರ ಎದ್ದು ಹೋಗಿ ಎನ್ನಲು ಆಗದೆ ಹೋಟೆಲ್ ಸಿಬ್ಬಂದಿಗಳು ಮನದೊಳಗೆ ಟೈಮ್ ಪಾಸ್ ಮಾಡುವ ಗ್ರಾಹಕರನ್ನು ಬೈದಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಹೀಗಾಗಿ ಬೆಂಗಳೂರಿನ ಹೋಟೆಲ್ ಮಾಲೀಕರಿಂದ ಹೊಸ ನಿಮಯವೊಂದನ್ನು ತಂದಿದ್ದಾರೆ. ಕಾಫಿ ಕುಡಿದು ಗಂಟೆ ಗಟ್ಟಲೆ ಹೋಟೆಲ್‌ನಲ್ಲಿ ಕುಳಿತು ಆರ್ಥಿಕ ನಷ್ಟವನ್ನು ಉಂಟು ಮಾಡುವ ಗ್ರಾಹಕರಿಗಾಗಿ ಹೊಸ ನಿಯಮವನ್ನು ತರಲಾಗಿದೆ. ಇದಕ್ಕೆ ಪರಿಹಾರವಾಗಿ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ ಊಟ ತಿಂಡಿಯ ನಂತರ ಬಿಲ್ ಪೇ ಮಾಡಿ ಹೊರಡಿ ಎಂದು ಬೋರ್ಡ ಅನ್ನು ಪ್ರತಿಯೊಂದು ಟೇಬಲ್ ಮೇಲೆ ಇರಿಸುವ ನಿರ್ಧಾರ ಕೈಗೊಂಡಿದೆ. ಇದನ್ನೂ ಗಮನಿಸಿದ ಗ್ರಾಹಕರಿಗೆ ಊಟ ಅಥವಾ ಕಾಫಿ-ಟೀ ಕುಡಿದ ತಕ್ಷಣ ವಿನಮ್ರರಾಗಿ ಟೇಬಲ್ ಬಿಟ್ಟೇಳುವಂತೆ ವಿನಂತಿಸುವುದಾಗಿ ಮಾಲೀಕರು ತಿಳಿಸಿದ್ದಾರೆ.
ಹೀಗೆ ತಮ್ಮ ಹೋಟೆಲ್‌ಗಳಿಗೆ ಬರುವ ಗ್ರಾಹಕರಿಗೆ ಮುಜುಗರಕ್ಕೀಡಾಗದಂತೆ ಮುನಿಸು ಬಾರದಂತೆ ನೋಡಿಕೊಳ್ಳುವ ಮೂಲಕ ವ್ಯವಹರಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಎಲ್ಲಾ ಸಮಯದಲ್ಲಿ ನಾವು ಈ ರೀತಿ ನಡೆದುಕೊಳ್ಳಲು ಆಗುವುದಿಲ್ಲ. ಜನ ಊಟ ಅಥವಾ ಕಾಫಿಗಾಗಿ ಕಾಯುವಾಗ ಕೆಲವರು ಟೇಬಲ್ ಬಿಟ್ಟು ಏಳುವುದಿಲ್ಲ. ಮಾತಿನಲ್ಲಿ ಮಗ್ನರಾಗಿರುತ್ತಾರೆ. ಇಂತಹ ಸದರ್ಭದಲ್ಲಿ ನಾವು ಅವರಿಗೆ ಮನವರಿಕೆ ಮಾಡಬೇಕಾಗುತ್ತದೆ. ಅದನ್ನು ಒತ್ತಾಯಪೂರ್ವಕವಾಗಲಿ ಹೇಳಲು ಆಗುವುದಿಲ್ಲ. ಅದರಲ್ಲೂ ಸೂಕ್ಷ್ಮತೆ ಇರುತ್ತದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಪಿ.ಸಿ ರಾವ್ ತಿಳಿಸಿದ್ದಾರೆ.
ಹೋಟೆಲ್‌ಗೆ ತೆರಳು ಹೆಚ್ಚಾನು ಹೆಚ್ಚು ಜನ ಗ್ರಾಹಕರು ತಮ್ಮ ಬಹುತೇಕ ವ್ಯವಹಾರದ ಮಾತುಕತೆಯನ್ನು ಹೋಟೆಲ್‌ಗಳಲ್ಲಿ ಮುಗಿಸಿಕೊಳ್ಳುತ್ತಾರೆ. ಅಂದರೆ ರಿಯಲ್ ಎಸ್ಟೇಟ್, ಮ್ಯಾಟ್ರಿಮೊನಿಯಲ್ ಹಾಗೂ ಬ್ಯುಸಿನೆಸ್ ಚರ್ಚೆಗಳನ್ನು ಬಹುತೇಕ ಜನ ಹೋಟೆಲ್‌ಗಳಲ್ಲಿ ಮಾಡುತ್ತಾರೆ. ಒಂದು ಕಪ್ ಕಾಫಿ ಆರ್ಡರ್ ಮಾಡಿ ಉದ್ಯೋಗ ದರ್ಶನ ಮಾಡುವ ಗ್ರಾಹಕರು ಹೋಟೆಲ್‌ಗಳಿಗೆ ಬರುತ್ತಾರೆ ಎಂದು ರಾವ್ ಹೇಳಿದರು.
ಈ ವೇಳೆ ನಾವು ಅವರಿಗೆ ತೆರಳುವಂತೆ ಹೇಳಲೇಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಬೇರೆ ಗ್ರಾಹಕರು ಟೇಬಲ್ ಸಿಗದೇ ಹೋಗಬಹುದು. ಇದು ಹೋಟೆಲ್ ಮಾಲೀಕರಿಗೆ ನಷ್ಟವನ್ನು ಉಂಟು ಮಾಡುತ್ತದೆ. ಇದರಿಂದ ಟೀ-ಕಾಫಿ ಆರ್ಡರ್ ಮಾಡಿ ಗಂಟೆ ಗಟ್ಟಲೆ ಕುಳಿತುಕೊಳ್ಳುವ ಗ್ರಾಹಕರಿಗೆ ವಿನಂತಿಸಬೇಕಾಗುತ್ತದೆ ಎಂದು ರಾವ್ ಹೇಳಿದರು.
ಈ ಎಲ್ಲಾ ನಿಯಮಗಳು ಸರ್ವೀಸ್ ವಲಯಗಳಲ್ಲಿ ಮಾತ್ರ ಅನ್ವಯವಾಗುತ್ತವೆ. ಆದರೆ ಸಾಮಾನ್ಯ ಹೋಟೆಲ್‌ಗಳಲ್ಲಿ ಜನ ಕುಳಿತು ಕಾಲಹರಣ ಮಾಡುವುದಿಲ್ಲ. ಅಂತಹ ಸ್ಥಳಗಳಲ್ಲಿ ಈ ನಿಯಮಗಳು ಅನ್ವಯವಾಗುವುದಿಲ್ಲ ಎಂದು ರಾವ್ ಹೇಳಿದರು. ಈ ನಿಯಮಗಳನ್ನು ಗ್ರಾಹಕರೂ ಸ್ವಾಗತಿಸಿದ್ದಾರೆ. ಹೋಟೆಲ್‌ಗಳಲ್ಲಿ ಹೆಚ್ಚು ಸಮಸ್ಯೆ ಕಾಲಹರಣ ಮಾಡುವ ಗ್ರಾಹಕರಿಂದ ಹೆಚ್ಚಾಗುತ್ತಿದೆ. ಇದರಿಂದ ಬೇರೆ ಗ್ರಾಹಕರಿಗೂ ತ್ವರಿತವಾಗಿ ಟೇಬಲ್ ದೊರೆಯುತ್ತದೆ. ಈ ನಿರ್ಧಾರ ಸ್ವಾಗತಾರ್ಹ ಎಂದು ಕೆಲ ಜನ ತಮ್ಮ ಅಭಿಪ್ರಯಾನವನ್ನು ವ್ಯಕ್ತಪಡಿಸಿದ್ದಾರೆ.












Click it and Unblock the Notifications