Bengaluru: ಆಟೋರಿಕ್ಷಾ ಹೆಚ್ಚುವರಿ ಬಾಡಿಗೆಗೆ ಜಗಳ: ಒಡಿಶಾ ಪ್ರಯಾಣಿಕನನ್ನು ಕೊಂದ ಚಾಲಕನ ಬಂಧನ
ಬೆಂಗಳೂರು, ಜೂನ್ 13: ಬೆಂಗಳೂರಿನಲ್ಲಿ ಕರೆದಲ್ಲಿಗೆ ಆಟೋ ಚಾಲಕರು ಬಾರದಿರುವುದು, ಚಿಲ್ಲರೆ ಹಾಗೂ ಮೀಟರ್ ದರ ವಿಚಾರದಲ್ಲಿ ಪ್ರಯಾಣಿಕರೊಂದಿಗೆ ಸಣ್ಣ ಪುಟ್ಟ ಜಗಳ ಸಹಜ. ಆದರೆ ಕಳೆದ ಭಾನುವಾರ ನಡೆದ ಘಟನೆಯಿಂದಾಗಿ ರಾತ್ರಿ ವೇಳೆ ಆಟೋದಲ್ಲಿ ಪ್ರಯಾಣಿಸಲು ಯೋಚಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಆಟೋ ಚಾಲಕನೊಬ್ಬ ಬಾಡಿಗೆ ವಿಚಾರವಾಗಿ ಯಶವಂತಪುರ ಮೂಲಕ ತನ್ನ ರಾಜ್ಯಕ್ಕೆ ಹೊರಟಿದ್ದ ಪ್ರಯಾಣಿಕನ ಜೊತೆ ಜಳಗವಾಡಿ ಕೊಲೆ ಮಾಡಿದ ಘಟನೆ ಭಾನುವಾರ ನಡೆದಿದೆ. ಪ್ರಕರಣ ಸಂಬಂಧ ಆಟೋ ಚಾಲಕನನ್ನು ಸುಬ್ರಹ್ಮಣ್ಯ ನಗರ ಪೊಲೀಸರು ಬಂಧಿಸಿದ್ದಾರೆ.

ಒಡಿಶಾ ಮೂಲದ ವ್ಯಕ್ತಿ ಅಮೋದ್ (27) ಮೃತಪಟ್ಟ ದುರ್ದೈವಿ. ಹೊಳೇನರಸೀಪುರದ ನಿವಾಸಿ ಬೆಂಗಳೂರಿನಲ್ಲಿ ಆಟೋ ಓಡಿಸುತ್ತಿದ್ದ ಆರೋಪಿ ಚಾಲಕ ಎಸ್.ಆರ್. ಅಶ್ವಥ್ ಬಂಧಿತ ವ್ಯಕ್ತಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಓಡಿಶಾದಿಂದ ಇತ್ತೀಚೆಗೆ ಅಮೋದ್ ಹಾಗೂ ಅವರ ತಮ್ಮ ಅಯೋಬ್ ಬೆಂಗಳೂರಿಗೆ ಆಗಮಿಸಿದ್ದರು. ಇಲ್ಲಿನ ಚಂದಾಪುರದಲ್ಲಿರುವ ಸಂಬಂಧಿಕರನ್ನು ಭೇಟಿಯಾದ ಬಳಿಕ ಮತ್ತೆ ತಮ್ಮ ರಾಜ್ಯಕ್ಕೆ ಮರಳಲು ಮುಂದಾದ ವೇಳೆ ಈ ಘಟನೆ ನಡೆದಿದೆ.

ಹೆಚ್ಚುವರಿ ಹಣ ವಸೂಲಿಗೆ ನಿಂತ ಚಾಲಕ ಅಶ್ವಥ್
ಭಾನುವಾರ ರಾತ್ರಿ ಸುಮಾರು 11 ಗಂಟೆ ಹೊತ್ತಿಗೆ ಚಂದಾಪುರದಿಂದ ಮೆಜೆಸ್ಟಿಕ್‌ಗೆ ಬಂದಿದ್ದರು. ಅವರು ಯಶವಂತಪುರ ರೈಲು ನಿಲ್ದಾಣದಿಂದ ರೈಲು ಹತ್ತಿ ಒಡಿಶಾಗೆ ತೆರಳಲಿದ್ದರು. ಈ ಸಂಬಂಧ ಯಶವಂತಪುರ ಕಡೆಗೆ ಹೋಗಲು ಬಂಧಿತ ಆರೋಪಿ ಅಶ್ವಥ್ ಆಟೋಗೆ (ನಂಬರ್ KA 01 AL 6094) ಕೈ ಮಾಡಿ ನಿಲ್ಲಿಸಿದ್ದಾರೆ.
ಈ ವೇಳೆ ಯಶವಂತಪುರಕ್ಕೆ ತಮ್ಮನ್ನು ಬಿಡಲು ಅಮೋದ್ 100 ರೂಪಾಯಿಗೆ ಬಾಡಿಗೆ ಮಾತನಾಡಿದ್ದರು. ಇದಕ್ಕೆ ಚಾಲಕ ಸಹ ಒಪ್ಪಿದ್ದ. ಬಳಿಕ ಯಶವಂತಪುರದತ್ತ ಆಟೋ ಪ್ರಯಾಣ ಆರಂಭಿಸಿತು. ಮಾರ್ಗಮಧ್ಯೆ ಆಟೋ ನಿಲ್ಲಿಸಿದ್ದ ಚಾಲಕ ಅಶ್ವಥ್, ಯಶವಂತಪುರಕ್ಕೆ ಕರೆದೊಯ್ಯಲು ಒಬ್ಬರಿಗೆ 1500 ರೂಪಾಯಿ ಆಗುತ್ತದೆ. ನೀವಿಬ್ಬರಿದ್ದು, ಒಟ್ಟು 3000 ರೂಪಾಯಿ ನೀಡಬೇಕೆಂದು ಒತ್ತಾಯಿಸಿದ್ದ.
ಸಹೋದರರ ಮೇಲೆ ಹಲ್ಲೆ ಮಾಡಿದ್ದ ಆಟೋ ಚಾಲಕ
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಮೋದ್ ಹೆಚ್ಚುವರಿ ಹಣ ಕೊಡಲು ಒಪ್ಪಲಿಲ್ಲ. ಮಾತಿನಂತೆ 100 ರೂಪಾಯಿ ಕೊಡುವುದಾಗಿ ಹೇಳಿದ್ದ. ಈ ಸಂಬಂಧ ಚಾಲಕ ಅಶ್ವಥ್ ಹಾಗೂ ಅಮೋದ್ ಸಹೋದರರ ಜೊತೆಗೆ ಜಗಳಕ್ಕೆ ಇಳಿದಿದ್ದ. ಈ ವೇಳೆ ಅಮೋದ್ ಮತ್ತು ಚಾಲಕ ಅಶ್ವಥ್ ಮಧ್ಯೆ ಮಾತಿಗೆ ಮಾತು ಬೆಳೆದಿದೆ.
ಆಟೋ ಚಾಲಕ ಅಮೋದ್‌ಗೆ ಮನ ಬಂದಂತೆ ಥಳಿಸಿದ್ದಾನೆ. ಇದನ್ನು ಬಿಡಿಸಲು ಹೋದ ಸಹೋದರ ಅಯೋಬ್ ಮೇಲೂ ಚಾಲಕ ಹಲ್ಲೆ ಮಾಡಿದ್ದ. ಬಳಿಕ ಇಬ್ಬರು ಸಹೋದರರು ಓಡಲು ಆರಂಭಿಸಿದರು. ಓಡಿ ಸುಸ್ತಾಗಿ ರಾಜಾಜಿನಗರದ ರಾಜ್‌ಕುಮಾರ್ ರಸ್ತೆಯಲ್ಲಿ ಬಿದ್ದಿದ್ದರು. ಬಳಿಕ ಅವರನ್ನು ಸ್ಥಳೀಯ ಪೊಲೀಸರು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಮೋದ್ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ ಆಟೋ ಚಾಲಕ ಅಶ್ವಥ್ ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.












Click it and Unblock the Notifications