ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ ಬರಹ, ಕೆಲಕಾಲ ವಾತಾವರಣ ಉದ್ವಿಘ್ನ
ಬೆಂಗಳೂರು, ನವೆಂಬರ್ 28: ಕೋಲ್ಕತ್ತಾದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರ ಆಸನದ ಹಿಂದೆ ಬಾಂಬ್ ಎಂದು ಬರೆದಿರುವ ಟಿಶ್ಯೂ ಪೇಪರ್ ಪತ್ತೆಯಾದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಆದರೆ, ಈ ಬರಹ ಸುಳ್ಳು ಎಂದು ಕಂಡುಬಂದ ನಂತರ ವಿಮಾನಯಾನ ಸಂಸ್ಥೆಯು ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, ವಿಮಾನ 6ಇ 379 ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 5.29ಕ್ಕೆ ಹೊರಟು 8.01ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಆಗಮಿಸಿತ್ತು. ವಿಮಾನದಲ್ಲಿದ್ದ 200ಕ್ಕೂ ಹೆಚ್ಚು ಪ್ರಯಾಣಿಕರು ವಿಮಾನದಿಂದ ಇಳಿದಿದ್ದರು.
ಹುಬ್ಬಳ್ಳಿಯಿಂದ ದೆಹಲಿಗೆ ನೇರ ವಿಮಾನಯಾನ ಆರಂಭಿಸಿದ ಇಂಡಿಗೋ, ಸಮಯ ಹೀಗಿದೆ
ಇಂಡಿಗೋ ವಿಮಾನದಲ್ಲಿ ಬಾಂಬ್ ಇರುವ ಬಗ್ಗೆ ಮಾಹಿತಿ ಬಂದಿತ್ತು. ತದನಂತರ ಭದ್ರತಾ ಏಜೆನ್ಸಿಗಳಿಗೆ ಇಂಡಿಗೋ ಪರಿಶೀಲನಾ ಸೂಚನೆ ನೀಡಿತು. ಬಳಿಕ ಜನ ಇಳಿದ ನಂತದ ಖಾಲಿ ವಿಮಾನವನ್ನು ತಕ್ಷಣವೇ ಪಾರ್ಕಿಂಗ್ ಸ್ಥಳಕ್ಕೆ ಕೊಂಡೊಯ್ಯಲಾಯಿತು. ಸೀಟ್ 6ಡಿ ಹಿಂದೆ ನೀಲಿ ಶಾಯಿಯಲ್ಲಿ ಬಾಂಬ್ (ಇಂಗ್ಲಿಷ್‌ನಲ್ಲಿ) ಎಂದು ಅನಾಮಧೇಯವಾಗಿ ಬಿದ್ದಿದ್ದ ಟಿಶ್ಯೂ ಪೇಪರ್‌ನೊಂದಿಗೆ ವಿಮಾನದೊಳಗೆ ತಪಾಸಣೆ ನಡೆಸಲಾಯಿತು ಮೂಲಗಳು ತಿಳಿಸಿವೆ.
ಎಲ್ಲಾ ಪರಿಶೀಲನಾ ಕಾರ್ಯಾಚರಣೆಯ ವಿಧಾನಗಳ ಮೂಲಕ ತಪಾಸಣೆ ಮಾಡಲಾಯಿತು. ಬಾಂಬ್ ನಿಷ್ಕ್ರಿಯ ದಳವನ್ನು ಕಾರ್ಯಕ್ಕೆ ನಿಯೋಜಿಸಲಾಯಿತು. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಮತ್ತು ಶ್ವಾನದಳ ವಿಮಾನದೊಳಗೆ ತಪಾಸಣೆ ನಡೆಸಿತು. ಬಳಿಕ ವಿಮಾನವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಯಿತು. ಎಲ್ಲಿಯೂ ಸಮಸ್ಯೆ ಕಂಡು ಬಂದಿಲ್ಲ. ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಒಬ್ಬರು ಈ ಕೃತ್ಯ ಎಸಗಿರುವ ಶಂಕೆ ಇದೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿದೆ.
Video: ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಬೆಂಕಿ
ಈ ನಡುವೆ ಇಂಡಿಗೋ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಬೆಳಗ್ಗೆ 8.30ರ ಸುಮಾರಿಗೆ ವಿಮಾನಯಾನ ಸಂಸ್ಥೆಯಿಂದ ದೂರು ಸ್ವೀಕರಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ನಾವು ಎನ್‌ಸಿಆರ್ (ನಾನ್-ಕಾಗ್ನಿಜಬಲ್ ರಿಪೋರ್ಟ್) ಅನ್ನು ದಾಖಲಿಸಿದ್ದೇವೆ. ಇದನ್ನು ಸೋಮವಾರ ದೇವನಹಳ್ಳಿಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ನ್ಯಾಯಾಲಯದ ನಿರ್ದೇಶನದಂತೆ ನಿರ್ದಿಷ್ಟ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇಂಡಿಗೋ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ನಿರ್ದಿಷ್ಟ ಬಾಂಬ್ ಬೆದರಿಕೆಯ ಕಾರಣ, ಇಂಡಿಗೋ ಫ್ಲೈಟ್ 6ಇ 379 ಅನ್ನು ಭದ್ರತಾ ಏಜೆನ್ಸಿಗಳು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ಹುಡುಕಾಟಕ್ಕಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರೋಟೋಕಾಲ್ ಪ್ರಕಾರ, ವಿಮಾನವನ್ನು ದೂರದ ಪ್ರದೇಶಕ್ಕೆ ಕೊಂಡೊಯ್ಯಲಾಗಿದೆ ಎಂದು ತಿಳಿಸಿದೆ.