ಬೆಂಗಳೂರು : 8ನೇ ತರಗತಿ ವಿದ್ಯಾರ್ಥಿ ಅಪಹರಣ, ಕೊಲೆ
ಬೆಂಗಳೂರು, ಫೆ. 11 : ಬೆಂಗಳೂರಿನಲ್ಲಿ 8ನೇ ತರಗತಿ ವಿದ್ಯಾರ್ಥಿಯನ್ನು ಅಪಹರಿಸಿ ಕೊಲೆ ಮಾಡಲಾಗಿದೆ. ಜ್ಞಾನ ಭಾರತಿ ಆವರಣದಲ್ಲಿನ ಮೈದಾನದಲ್ಲಿ ವಿದ್ಯಾರ್ಥಿ ಶವ ಬುಧವಾರ ಮುಂಜಾನೆ ಪತ್ತೆಯಾಗಿದ್ದು, ಚಂದ್ರಾ ಲೇಔಟ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಕೊಲೆಯಾದ ವಿದ್ಯಾರ್ಥಿಯನ್ನು ಮೂಡಲಪಾಳ್ಯದ ನಿವಾಸಿ ಕಿರಣ್ ಯಾದವ್ (14) ಎಂದು ಗುರುತಿಸಲಾಗಿದೆ. ಫೆ.4ರಂದು ಕಿರಣ್ ಅಪಹರಣ ನಡೆದಿತ್ತು. ಬುಧವಾರ ಬೆಳಗ್ಗೆ ಬೆಂಗಳೂರು ವಿವಿ ಆವರಣದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ಮೈದಾನದಲ್ಲಿ ಕಿರಣ್ ಶವ ಪತ್ತೆಯಾಗಿದೆ.

ಚಂದ್ರಾ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಪಹರಣ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜುನಾಥ್ ಎಂಬುವವರನ್ನು ಬಂಧಿಸಲಾಗಿದೆ. ಮಂಜುನಾಥ್ ಕಿರಣ್ ಸಂಬಂಧಿಕನಾಗಿದ್ದ ಎಂದು ತಿಳಿದುಬಂದಿದೆ.
ಮಂಜುನಾಥ್ ಮತ್ತೊಬ್ಬ ಆರೋಪಿಯ ಜೊತೆ ಸೇರಿ ಫೆ.4ರಂದು ಕಿರಣ್‌ನನ್ನು ಅವರ ಮನೆಯ ಮುಂಭಾಗದಿಂದಲೇ ಅಪಹರಿಸಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿಯ ವಿಚಾರಣೆ ಮುಂದುವರೆದಿದ್ದು, ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಮಂಜುನಾಥ್ ಮತ್ತು ಕಿರಣ್ ಕುಟುಂಬದ ನಡುವೆ ಜಗಳ ನಡೆದಿತ್ತು. ಆದ್ದರಿಂದ ಮಂಜುನಾಥ್ ಕಿರಣ್‌ನನ್ನು ಅಪಹರಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.












Click it and Unblock the Notifications